ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ SIR ಪ್ರಕ್ರಿಯೆಯಲ್ಲಿ ಬಿಎಸ್ಪಿ ಹಿರಿಯ ನಾಯಕ, ಮಾಜಿ ರಾಷ್ಟ್ರೀಯ ವಕ್ತಾರ ಸುಧೀಂದ್ರ ಭದೋರಿಯಾ ಅವರ ಕುಟುಂಬದ ಎಲ್ಲ ಸದಸ್ಯರ ಹೆಸರುಗಳು ಅಂತಿಮ ಮತದಾರರ ಪಟ್ಟಿಯಿಂದ ಅಳಿಸಿಹೋಗಿವೆ. ಎಟಾವಾ ಜಿಲ್ಲೆಯವರಾದ ಭದೋರಿಯಾ ಅವರು 2026ರ ಅಕ್ಟೋಬರ್ 16ರಂದು ‘ಎಕ್ಸ್ ‘ನಲ್ಲಿ ಪೋಸ್ಟ್ ಮಾಡಿ, ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. BLO ಹಲವು ಬಾರಿ ಮನವಿ ಮಾಡಿದರೂ ತಮ್ಮ ಪತ್ನಿ ಮತ್ತು ಮಕ್ಕಳ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಆರೋಪಿಸಿದ್ದಾರೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಈ ತಪ್ಪನ್ನು ತಕ್ಷಣವೇ ಸರಿಪಡಿಸಬೇಕು ಎಂದು ಅವರು ಎಟಾವಾ ಉಪವಿಭಾಗಾಧಿಕಾರಿಗೆ (SDM) ವಿನಂತಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಭದೋರಿಯಾ, ಯೋಗಿ ಆದಿತ್ಯನಾಥ್ ನೇತೃತ್ವದ ರಾಜ್ಯ ಸರ್ಕಾರ ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಆರಂಭದಲ್ಲಿ ಬಿಎಲ್ಒಗಳು ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ನಂತರ, ಸಂಪರ್ಕಕ್ಕೆ ಸಿಕ್ಕ ಬಿಎಲ್ಒ ‘ತಾವು ಭೇಟಿ ನೀಡಿದಾಗ ಮನೆಯಲ್ಲಿ ಯಾರೂ ಇರಲಿಲ್ಲ’ ಎಂಬುದಾಗಿ ಸಮಜಾಯಿಷಿ ನೀಡಿದ್ದಾರೆ. ತಮ್ಮ ಕುಟುಂಬವು ಪೂರ್ವಜರ ಕಾಲದಿಂದಲೂ ಇದೇ ಪ್ರದೇಶದಲ್ಲಿ 150 ರಿಂದ 200 ವರ್ಷಗಳಷ್ಟು ಹಳೆಯದಾದ ರಾಜಕೀಯ ಮತ್ತು ವಂಶಪಾರಂಪರೆಯ ನಂಟನ್ನು ಹೊಂದಿದೆ. ಕೃಷಿ ಭೂಮಿಯನ್ನೂ ಹೊಂದಿದೆ” ಎಂದಿದ್ದಾರೆ.
“ಸ್ವಾತಂತ್ರ್ಯ ಹೋರಾಟಗಾರರಾದ ನಮ್ಮ ತಂದೆ ಅರ್ಜುನ್ ಸಿಂಗ್ ಭದೋರಿಯಾ ಅವರು 1942ರಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ್ದರು. 1957, 1967 ಮತ್ತು 1977ರಲ್ಲಿ ಎಟಾವಾ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿಯೂ ಸೇವೆ ಸಲ್ಲಿಸಿದ್ದರು. ತುರ್ತು ಪರಿಸ್ಥಿತಿಯ ಕಾಲದಲ್ಲಿ ಮುಲಯಾಂ ಸಿಂಗ್ ಯಾದವ್ ಅವರೊಂದಿಗೆ ತಾವೂ ಜೈಲು ವಾಸ ಅನುಭಾಗಿಸಿದ್ದರು. ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ನಮ್ಮ ಕುಟುಂಬವೇ ಈಗ ಮತ ಹಕ್ಕು ಚಲಾಯಿಸಲು ಪರದಾಡುವಂತಾಗಿರುವುದು ದುರಾದೃಷ್ಟಕರ” ಎಂದಿದ್ದಾರೆ.
ರಾಜ್ಯ ಚುನಾವಣಾ ಆಯೋಗವು ಕಳೆದ (2026) ಏಪ್ರಿಲ್ನಲ್ಲಿ ಪ್ರಕಟಿಸಿದ ಅಂತಿಮ ಮತದಾರರ ಪಟ್ಟಿಯಲ್ಲಿ ಉತ್ತರ ಪ್ರದೇಶದಲ್ಲಿ ಒಟ್ಟು 2 ಕೋಟಿಗೂ ಅಧಿಕ ಹೆಸರುಗಳನ್ನು ತೆಗೆದುಹಾಕಲಾಗಿದೆ. ಕರಡು ಪಟ್ಟಿಯಲ್ಲಿದ್ದ 2.86 ಕೋಟಿ ಮತದಾರರಿಗೆ ನೋಟೀಸ್ ನೀಡಲಾಗಿದ್ದು, ಇದರಲ್ಲಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವ ಮತದಾರರೇ (39%) ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದರ ಪರಿಣಾಮವಾಗಿ, ಸಾಮಾಜಿಕ ಕಾರ್ಯಕರ್ತೆಯಾಗಿರುವ ಸುಧೀಂದ್ರ ಭದೋರಿಯಾ ಅವರ ಪತ್ನಿ ರಂಜನಾ ಕುಮಾರಿ, ಅವರ ಮಗ ಮತ್ತು ಮಗಳ ಹೆಸರುಗಳು ಕೂಡ ಅಂತಿಮ ಪಟ್ಟಿಯಿಂದ ನಾಪತ್ತೆಯಾಗಿವೆ. ಕಳೆದ ಒಂದು ತಿಂಗಳಿನಿಂದ ವಿವಿಧ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದರೂ ಪ್ರಯೋಜನವಾಗಿಲ್ಲ ಎಂದು ಕುಟುಂಬವು ತಿಳಿಸಿದೆ.
ಈ ಲೇಖನ ಓದಿದ್ದೀರಾ?: ಕಾಕ್ರೋಚ್ಗಳ ಮೇಲೆ ಮೋದಿ ಸರ್ಕಾರದ ಸರ್ವಾಧಿಕಾರ; ಅವನತಿಯ ಮುನ್ಸೂಚನೆಯೇ?
ಮತ್ತೊಂದೆಡೆ, ಎಟಾವಾದ ಕತ್ರಾ ಬಲ್ ಸಿಂಗ್ ಪ್ರದೇಶದ ಬಿಎಲ್ಒ ಸೌರಭ್ ಕುಮಾರ್ ಪ್ರತಿಕ್ರಿಯಿಸಿ, ತಾವು ಭೇಟಿ ನೀಡಿದಾಗ ಅಲ್ಲಿ ಕೆಲಸ ಮಾಡುತ್ತಿದ್ದವರಿಗೆ ನಾಲ್ಕು ನಮೂನೆಗಳನ್ನು ನೀಡಲಾಗಿತ್ತು. ಆದರೆ, ಸುಧೀಂದ್ರ ಭದೋರಿಯಾ ಅವರ ಪರವಾಗಿ ಒಂದೇ ಒಂದು ಭರ್ತಿ ಮಾಡಿದ ಫಾರ್ಮ್ ಸಿಕ್ಕಿತ್ತು ಎಂದು ತಿಳಿಸಿದ್ದಾರೆ. ವಿಳಾಸವನ್ನು ದೃಢೀಕರಿಸಲು ಯಾವುದೇ ಐಡಿ ಪ್ರೂಫ್ ಸಿಗದ ಕಾರಣ ಮತ್ತು ಕುಟುಂಬವು ಅಲ್ಲಿ ನಿರಂತರವಾಗಿ ನೆಲೆಸಿಲ್ಲ ಎಂಬ ಶಂಕೆಯಿಂದ ಈ ಗೊಂದಲ ಉಂಟಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸದ್ಯ ಭದೋರಿಯಾ ಅವರು ತಮ್ಮ ಪತ್ನಿ ಮತ್ತು ಮಕ್ಕಳ ಪರವಾಗಿ ನಮೂನೆ 6ಅನ್ನು ಸಲ್ಲಿಸಿದ್ದು, ಅಕ್ಟೋಬರ್ 17ರಿಂದ ರಾಜ್ಯ ಚುನಾವಣಾ ಆಯೋಗವು ಪ್ರಾರಂಭಿಸಿರುವ ವಿಶೇಷ ಮತದಾರರ ನೋಂದಣಿ ಅಭಿಯಾನದ ಮೂಲಕ ಹೆಸರುಗಳನ್ನು ಸೇರಿಸಿಕೊಳ್ಳಲು ಮುಂದಾಗಿದ್ದಾರೆ. ಎಟಾವಾ ಎಸ್ಡಿಎಂ ಮನೋಜ್ ಪಾಠಕ್ ಮತ್ತು ಡಿಎಂ ಶುಭ್ರಾಂತ್ ಕುಮಾರ್ ಶುಕ್ಲಾ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ಮತದಾರರ ಪಟ್ಟಿಯಿಂದ ಅಕ್ರಮವಾಗಿ 13 ಕೋಟಿ ಹೆಸರುಗಳನ್ನು ಕೈಬಿಟ್ಟಿರುವುದನ್ನು ವಿರೋಧಿಸಿ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ತೀವ್ರ ಪ್ರತಿಭಟನೆಗಳು ನಡೆಯುತ್ತಿವೆ.
ಅಕ್ಟೋಬರ್ 16ರಂದು ಲಕ್ನೋದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ಉತ್ತರ ಪ್ರದೇಶ ಎಸ್ಐಆರ್ ಪ್ರಕ್ರಿಯೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ದೇಶಾದ್ಯಂತ 13 ಕೋಟಿ ಹೆಸರುಗಳನ್ನು ಹೇಗೆ ಅಳಿಸಲಾಗಿದೆ ಎಂದು ಪ್ರಶ್ನಿಸಿದ್ದಾರೆ.




