ವಿಜಯಪುರ ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 160 ಕೆರೆಗಳಿದ್ದು, ಅವುಗಳಲ್ಲಿ 66 ಕೆರೆಗಳು ಶೇ.30ರಷ್ಟು, 43 ಕೆರೆಗಳು ಶೇ.31ರಿಂದ 50ರವರೆಗೆ ಹಾಗೂ 51 ಕೆರೆಗಳು ಶೇ.51ರಿಂದ 99ರವರೆಗೆ ಭರ್ತಿಯಾಗಿವೆ ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ ಹೇಳಿದರು.
ವಿಜಯಪುರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “ಜಿಲ್ಲೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಡಿಯಲ್ಲಿ 40 ಬಹು ಹಳ್ಳಿ ಕುಡಿಯುವ ನೀರಿನ ಯೋಜನೆಗಳಿದ್ದು, ಆಲಮಟ್ಟಿ ಜಲಾಶಯ ವ್ಯಾಪ್ತಿಯಲ್ಲಿ 10, ನಾರಾಯಣಪುರ ಜಲಾಶಯ ವ್ಯಾಪ್ತಿಯಲ್ಲಿ 8, ಭೀಮಾನದಿ ಮೂಲಕ 5 ಹಾಗೂ ಕಾಲುವೆ ಮುಖಾಂತರ 17 ಬಹುಹಳ್ಳಿ ಕುಡಿಯುವ ನೀರಿನ ಯೋಜನೆ(ಎಂವಿಎಸ್)ಗಳು ಅವಲಂಬಿತವಾಗಿರುತ್ತವೆ” ಎಂದು ಹೇಳಿದರು.
“ಆಲಮಟ್ಟಿ ಜಲಾಶಯದಲ್ಲಿ ಪ್ರಸ್ತುತ 34,895 ಟಿಎಂಸಿ ನೀರು ಲಭ್ಯವಿದೆ. ನಾರಾಯಣಪುರ ಜಲಾಶಯದಲ್ಲಿ ಪ್ರಸ್ತುತ 21,269 ಟಿಎಂಸಿ ನೀರು ಲಭ್ಯವಿದೆ. ಜಿಲ್ಲೆಯ ಬೇಡಿಕೆಯಂತೆ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಇಂಡಿ ತಾಲೂಕಿನ ಜನ-ಜಾನುವಾರುಗಳಿಗೆ ಇಂಡಿ ಶಾಖಾ ಕಾಲುವೆಯಿಂದ ಏಪ್ರಿಲ್ 11 ರಿಂದ 23ರವರೆಗೆ ಒಟ್ಟು 12ದಿನಗಳ ಅವಧಿಯಲ್ಲಿ ನಿತ್ಯ ಒಂದು ಸಾವಿರ ಕ್ಯುಸೆಕ್ ನೀರು ಹರಿಸುವಂತೆ ಆದೇಶಿಸಲಾಗಿದೆ” ಎಂದರು.
“ಜಿಲ್ಲೆಯಲ್ಲಿ ವಿಪತ್ತು ನಿರ್ವಹಣೆ ಹಾಗೂ ಕುಡಿಯುವ ನೀರಿಗೆ ಅನುದಾನ ಕೊರತೆ ಇಲ್ಲ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪದಾಧಿಕಾರಿಗಳ ಸಭೆಗಳನ್ನು ತಾಲೂಕು ಮಟ್ಟದಲ್ಲಿ ಕಾರ್ಯಪಡೆ(ಟಾಸ್ಕ್ ಪೋರ್ಸ್) ಸಭೆಗಳನ್ನು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮ ಪಂಚಾಯಿತಿ ವಿಪತ್ತು ನಿರ್ವಹಣಾ ಸಮಿತಿ ಸಭೆಗಳನ್ನು ಜರುಗಿಸಿ ಕುಡಿಯುವ ನೀರಿನ ಯಾವುದೇ ಸಮಸ್ಯೆಯಾಗದಂತೆ ಮೇಲ್ವಿಚಾರಣೆ ಮಾಡಲಾಗುತ್ತಿದೆ” ಎಂದಿದ್ದಾರೆ.
ಇದನ್ನೂ ಓದಿ>ವಿಜಯಪುರ | ಓದುವುದರ ಜತೆಗೆ ಸಂಪಾದನೆ: ಮಹಿಳಾ ವಿವಿಯ ವಿನೂತನ ಯೋಜನೆ
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಿಷಿ ಆನಂದ ಮಾತನಾಡಿ, “ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನಿಗದಿತ ಸಮಯದಲ್ಲಿ ಪರಿಹರಿಸಲು ಜಿಲ್ಲಾ ಪಂಚಾಯತಿ ಕಚೇರಿ, ಕಾರ್ಯನಿರ್ವಾಹಕ ಎಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದ ಕಚೇರಿ ಮತ್ತು ಜಿಲ್ಲೆಯ ಎಲ್ಲ ತಾಲೂಕು ಪಂಚಾಯಿತಿಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಲಾಗಿದೆ” ಎಂದು ತಿಳಿಸಿದರು.
“ಯಾವುದೇ ಸಮಸ್ಯೆಗಳು ಕಂಡುಬಂದಲ್ಲಿ ಸಾರ್ವಜನಿಕರು ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಬಹುದಾಗಿದೆ. ಜಿಲ್ಲಾ ಪಂಚಾಯತಿ ಕಚೇರಿ ಸಹಾಯವಾಣಿ ಸಂಖ್ಯೆ 08352-277293, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಚೇರಿಯ ದೂರವಾಣಿ ಸಂಖ್ಯೆ-08352-244971, ಮುದ್ದೇಬಿಹಾಳ -08356-200606, ತಾಳಿಕೋಟಿ -08356-200103, ಸಿಂದಗಿ -08487-221772, ದೇವರ ಹಿಪ್ಪರಗಿ -08424-200114, ಆಲಮೇಲ 08488-298900, ವಿಜಯಪುರ 08352-242423, ಬಬಲೇಶ್ವರ 08355-200005, ತಿಕೋಟ 08552-294505, ಇಂಡಿ 08359-200026, ಚಡಚಣ 9480831718, ಬಸವನಬಾಗೇವಾಡಿ 08358-245236, ನಿಡಗುಂದಿ 08426 -200163, ಕೊಲ್ಹಾರ 08426-200103 ಈ ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಿ, ಸಮಸ್ಯೆ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬಹುದು” ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





