ನೂರು ವರ್ಷಗಳ ಹಿಂದೆ, 1923ರ ಬೇಸಿಗೆಯ ಕಾಲದಲ್ಲಿ, ಲಂಡನ್ ಸ್ಕೂಲ್ ಆಫ್ ಎಕಾನಮಿಕ್ಸ್ನಲ್ಲಿ ಅರ್ಥಶಾಸ್ತ್ರದಲ್ಲಿ ತರಬೇತಿ ಪಡೆದ ಮುವತ್ತೆರಡು ವರ್ಷದ ಅಂಬೇಡ್ಕರ್ ಮುಂಬೈಗೆ ಮರಳಿದರು. ಆಗಷ್ಟೇ 8ನೇ ಶತಮಾನದ ನಂತರದ ಭಾರತೀಯ ಹಣಕಾಸಿನ ಸಮಗ್ರ ಇತಿಹಾಸದ ಬಗ್ಗೆ ಬೃಹತ್ ಸಂಶೋಧನೆಯನ್ನು ಪೂರ್ಣಗೊಳಿಸಿದ್ದರು.
ಇದು 1923ರ ಡಿಸೆಂಬರ್ ನಲ್ಲಿ “The Problem of the Rupee: Its Origins and its Solution” (ರೂಪಾಯಿಯ ಸಮಸ್ಯೆ: ಅದರ ಉಗಮ ಮತ್ತು ಪರಿಹಾರ) ಎಂಬ ಹೆಸರಿನಲ್ಲಿ ಅದು ಲಂಡನ್ನಲ್ಲಿ ಪ್ರಕಟವಾಯಿತು. ಅದು ಬ್ರಿಟಿಷ್ ಸರ್ಕಾರದ ಆರ್ಥಿಕ ನೀತಿಗಳ ಟೀಕೆಯೂ ಆಗಿತ್ತು, ಅದನ್ನು ಸಮರ್ಥಿಸುತ್ತಿದ್ದ ಆಗಿನ ಎಲ್ಲಾ ತಜ್ಞರುಗಳಿಗೆ ನೇರವಾಗಿ ಸವಾಲೆಸೆಯುತ್ತಿತ್ತು. ಜೊತೆಗೆ ಬ್ರಿಟಿಷರು ಭಾರತದ ಆರ್ಥಿಕತೆಯನ್ನು ಶೋಷಿಸಿದ ಕ್ರಮ. ಭಾರತೀಯರು ಪಟ್ಟ ಸಂಕಟವನ್ನು ಅದು ವಿವರಿಸುತ್ತದೆ.
ಭಾರತದಲ್ಲಿ 1835ಕ್ಕಿಂತ ಮೊದಲು ಭಾರತದಲ್ಲಿ ಯಾವುದೇ ಏಕರೂಪದ ನಾಣ್ಯ ಪದ್ಧತಿ ಇರಲಿಲ್ಲ. ಚಿನ್ನದ ಮೊಹರುಗಳು ಮತ್ತು ಬೆಳ್ಳಿಯ ರೂಪಾಯಿಗಳು ಎರಡೂ ಚಲಾವಣೆಯಲ್ಲಿದ್ದವು (ಇದನ್ನು bimetallism ಎನ್ನಲಾಗುತ್ತದೆ). ಆದರೆ 1835ರಲ್ಲಿ ಬ್ರಿಟಿಷರು ಬೆಳ್ಳಿಯ ರೂಪಾಯಿಯನ್ನೇ ಭಾರತದ ಏಕೈಕ ಅಧಿಕೃತ ನಾಣ್ಯವನ್ನಾಗಿ ಕಡ್ಡಾಯಗೊಳಿಸಿದರು. 180 ಗ್ರೇನ್ ತೂಕದ ಬೆಳ್ಳಿಯ ರೂಪಾಯಿಯನ್ನು ಭಾರತದ ಏಕೈಕ ಕಾನೂನುಬದ್ದ ನಾಣ್ಯವನ್ನಾಗಿ ಮಾಡಲಾಯಿತು. ಇಡೀ ಬ್ರಿಟಿಷ್ ಸಾಮ್ರಾಜ್ಯದಲ್ಲಿ ಭಾರತವೊಂದರಲ್ಲಷ್ಟೇ ಚಿನ್ನದ ಮಾನದಂಡ ವ್ಯವಸ್ಥೆ ಇರಲಿಲ್ಲ. ಬ್ರಿಟಿಷರು ಭಾರತದ ಚಿನ್ನದ ಮೀಸಲು ನಿಧಿಯನ್ನು ಲಂಡನ್ ನೆಲಮಾಳಿಗೆಗಳಲ್ಲಿ ಸಂಗ್ರಹಿಸಿಟ್ಟಿದ್ದರು. ಅದನ್ನು ಬಳಸಿಕೊಂಡು ತಮ್ಮ ಸ್ವಂತ ಆರ್ಥಿಕತೆಯನ್ನು ಬಲಪಡಿಸಿಕೊಳ್ಳುವುದು ಅವರ ಉದ್ದೇಶವಾಗಿತ್ತು.
ಅಂಬೇಡ್ಕರ್ ಗುರುತಿಸಿರುವಂತೆ ಇದರ ಹಿಂದಿನ ಉದ್ದೇಶ ಭಾರತದಲ್ಲಿ ಹೇರಳವಾಗಿದ್ದ ಚಿನ್ನವನ್ನು ಹೊರಕ್ಕೆ ಸಾಗಿಸುವುದಾಗಿತ್ತು. ಬ್ರಿಟಿಷರ ಇಂತಹ ನೀತಿಗಳಿಂದಾಗಿ 19ನೇ ಶತಮಾನದಲ್ಲಿ ಚಿನ್ನ ಭಾರತದಿಂದ ಹೊರಕ್ಕೆ ಹರಿಯಲಾರಂಭಿಸಿತು.

ಮಾರುಕಟ್ಟೆಯಲ್ಲಿ ಬೆಳ್ಳಿಯ ಬೆಲೆ ಕುಸಿಯತೊಡಗಿತು. ಭಾರತವು ಬೆಳ್ಳಿ ಮಾನದಂಡದಲ್ಲಿದ್ದ ಕಾರಣ, ರೂಪಾಯಿಯ ಮೌಲ್ಯವು ಪೌಂಡ್ ಎದುರು ಕುಸಿಯತೊಡಗಿತು. ಆಗ ಭಾರತದ ರೂಪಾಯಿ ಬ್ರಿಟನ್ನಿನ ಪೌಂಡ್ ಜೊತೆಗೆ ತೆಕ್ಕೆ ಹಾಕಿಕೊಂಡಿತ್ತು. ಬೆಳ್ಳಿಯ ಬೆಲೆ ಕುಸಿತವನ್ನು ತಡೆಯಲು ಬ್ರಿಟಿಷ್ ಸರ್ಕಾರವು 1893ರಲ್ಲಿ ಟಂಕಸಾಲೆಗಳನ್ನು ಮುಚ್ಚಿತು. ತಮಗೆ ಬೇಕಾದಂತೆ ನೋಟುಗಳನ್ನು ಮುದ್ರಿಸಲು ಶುರು ಮಾಡಿದರು. ಸರ್ಕಾರ ಹೀಗೆ ಅತಿಯಾಗಿ ಹಣ ಮುದ್ರಿಸಿದ್ದರಿಂದಲೇ ಭಾರತದಲ್ಲಿ ಬೆಲೆ ವಿಪರೀತ ಏರುತ್ತಿದೆ. ಬೆಲೆಯೇರಿಕೆಯಿಂದ ನಿಜವಾಗಿ ತೊಂದರೆ ಅನುಭವಿಸುತ್ತಿರುವವರು ಸಾಮಾನ್ಯ ಜನ. ಅವರು ಸಂಕಷ್ಟದಲ್ಲಿದ್ದಾರೆ ಎಂದು ಅಂಬೇಡ್ಕರ್ ಬಲವಾಗಿ ವಾದಿಸಿದ್ದರು. 1925ರ ಹಿಲ್ಟನ್ ಯಂಗ್ ಕಮಿಷನ್ ಮುಂದೆ ಸಾಕ್ಷ್ಯ ನೀಡುವಾಗಲೂ ಅಂಬೇಡ್ಕರ್ ಇದೇ ವಿಷಯವನ್ನು ಒತ್ತಿ ಹೇಳಿದರು. “ಸರ್ಕಾರದ ಕೈಗೆ ನೋಟು ಮುದ್ರಿಸುವ ಅಧಿಕಾರ ಕೊಟ್ಟುಬಿಟ್ಟರೆ ಅದು ಬೇಕಾಬಿಟ್ಟಿ ಖರ್ಚು ಮಾಡುತ್ತದೆ. ಇದು ದೇಶಕ್ಕೆ ಅಪಾಯಕಾರಿ” ಎಂಬುದು ಅವರ ಖಚಿತ ನಿಲುವಾಗಿತ್ತು. ನಾಣ್ಯದ ಮೌಲ್ಯವು ಸ್ಥಿರವಾಗಿರಬೇಕಾದರೆ ಸರ್ಕಾರದ ನೋಟು ಮುದ್ರಿಸುವ ಅಧಿಕಾರಕ್ಕೆ ಮಿತಿಯಿರಬೇಕು ಎಂದು ಅವರು ಪ್ರತಿಪಾದಿಸಿದರು.
ಇದಕ್ಕೆ ಪರಿಹಾರವಾಗಿ ಅವರು ಭಾರತದಲ್ಲಿ ಚಿನ್ನದ ಮಾನದಂಡವನ್ನು Gold Standard) ಜಾರಿಗೆ ತರಬೇಕು ಎಂದು ವಾದಿಸಿದರು. ಈ ಪದ್ಧತಿಯಲ್ಲಿ ಒಂದು ದೇಶದ ಹತ್ತಿರ ಎಷ್ಟು ಬಂಗಾರವಿದೆಯೋ, ಅಷ್ಟೇ ಪ್ರಮಾಣದ ನೋಟುಗಳನ್ನು ಮಾತ್ರ ಮುದ್ರಿಸಲು ಅವಕಾಶವಿರುತ್ತದೆ. ಸರ್ಕಾರವು ತನಗೆ ಇಷ್ಟ ಬಂದಂತೆ ಹಣವನ್ನು ಮುದ್ರಿಸಲು ಸಾಧ್ಯವಾಗುವುದಿಲ್ಲ. ಜೊತೆಗೆ ಇದು ಬ್ರಿಟಿಷ್ ಸರ್ಕಾರವು ಭಾರತದ ಸಂಪತ್ತನ್ನು (ಚಿನ್ನ) ಲಂಡನ್ನಲ್ಲಿ ಇಟ್ಟುಕೊಳ್ಳುವುದನ್ನು ತಪ್ಪಿಸುತ್ತದೆ. ಇದರಿಂದ ಬೆಲೆಗಳು ನಿಯಂತ್ರಣದಲ್ಲಿರುತ್ತವೆ. ಸಾಮಾನ್ಯ ಜನರ ಸಂಕಟ ಕಡಿಮೆಯಾಗುತ್ತದೆ.
ಆಗ ಪ್ರಖ್ಯಾತ ಅರ್ಥಶಾಸ್ತ್ರಜ್ಞ ಕೇನ್ಸ್ ‘ಗೋಲ್ಡ್ ಎಕ್ಸ್ಚೇಂಜ್ ಸ್ಟ್ಯಾಂಡರ್ಡ್'(ಚಿನ್ನದ ವಿನಿಯಮ ಮಾನದಂಡದ) ಪರವಾಗಿ ವಾದಿಸುತ್ತಿದ್ದರು. ಚಿನ್ನವನ್ನು ಚಲಾವಣೆಯಲ್ಲಿ ತೊಡಗಿಸುವ ಬದಲು ಮೀಸಲು ನಿಧಿಯಾಗಿ ಇಡುವುದು ಆರ್ಥಿಕವಾಗಿ ಲಾಭದಾಯಕ ಎನ್ನುವುದು ಕೇನ್ಸ್ ಅವರ ವಾದವಾಗಿತ್ತು. ಆದರೆ ಈ ವ್ಯವಸ್ಥೆಯಿಂದ ಚಿನ್ನ ಭಾರತದಲ್ಲಿ ಉಳಿಯುವುದಿಲ್ಲ. ಚಿನ್ನದ ಮೀಸಲು ನಿಧಿ ಲಂಡನ್ನಿಗೆ ವರ್ಗಾವಣೆಯಾಗುತ್ತಿತ್ತು ಎನ್ನುವುದು ಅಂಬೇಡ್ಕರ್ ಅವರ ಆತಂಕವಾಗಿತ್ತು. ಅಷ್ಟೇ ವಾಸ್ತವದಲ್ಲಿ ಆಗಿದ್ದು ಕೂಡ ಆದೆ. ಭಾರತದ ಚಿನ್ನದ ಮೀಸಲು ನಿಧಿಯನ್ನು ಲಂಡನ್ನಲ್ಲಿ ಇಡಲಾಗಿತ್ತು. ಅಂಬೇಡ್ಕರ್ ಅವರಿಗೆ ಚಿನ್ನದ ಮಾನದಂಡ ಕೇವಲ ಆರ್ಥಿಕ ವಾದವಾಗಿರಲಿಲ್ಲ. ಅದು ಬ್ರಿಟಿಷರ ಆಧಿಕಾರವನ್ನು ಮೊಟಕುಗೊಳಿಸುವ ಒಂದು ರಾಜಕೀಯ ತಂತ್ರವೂ ಆಗಿತ್ತು. ಬ್ರಿಟಿಷ್ ಸರ್ಕಾರಕ್ಕೆ ಹಣ ಮುದ್ರಿಸುವ ಅನಿಯಮಿತ ಅಧಿಕಾರವನ್ನು ನೀಡುವ ಬದಲು, ಅವರ ಕೈಗಳನ್ನು ಕಟ್ಟುವುದು ಭಾರತದ ಬಡಜನರಿಗೆ ಹೆಚ್ಚು ಸುರಕ್ಷಿತ ಎಂಬುದು ಅಂಬೇಡ್ಕರ್ ಅವರ ನಂಬಿಕೆಯಾಗಿತ್ತು. ಬ್ರಿಟಿಷ್ ಸರ್ಕಾರಕ್ಕೆ ತನ್ನ ಲಾಭವೇ ಮುಖ್ಯವಾಗಿತ್ತು. ಭಾರತದ ಸಂಪತ್ತನ್ನು ಬಳಸಿ ತನ್ನ ಸಾಮ್ರಾಜ್ಯವನ್ನು ಆರ್ಥಿಕವಾಗಿ ಬಲಪಡಿಸಿಕೊಳ್ಳುವ ಉದ್ದೇಶವೇ ಪ್ರಧಾನವಾಗಿತ್ತು.
ಅಂಬೇಡ್ಕರ್ ಅವರಿಗೆ ‘ದ ಪ್ರಾಬ್ಲೆಮ್ ಆಫ್ ದ ರುಪಿ’ ಪುಸ್ತಕದ ಮುಂದಿನ ಭಾಗವನ್ನು ಬರೆಯಬೇಕೆನ್ನುವ ಆಸೆ ಇತ್ತು. ಪುಸ್ತಕದ ಹೊಸ ಮುನ್ನುಡಿಯಲ್ಲಿ, ಅವರು ಎರಡನೇ ಸಂಪುಟವನ್ನು ಹೊರತರುವುದಾಗಿ ಭರವಸೆ ನೀಡಿದ್ದರು. ಅದರಲ್ಲಿ ನಂತರದ ದಿನಗಳಲ್ಲಿ ಹಣಕಾಸಿನ ವ್ಯವಸ್ಥೆಯಲ್ಲಿ ಆದ ಬದಲಾವಣೆಗಳನ್ನು ಮತ್ತು ಹೊಸ ಪರಿಹಾರಗಳನ್ನು ಚರ್ಚಿಸಬೇಕೆಂದುಕೊಂಡಿದ್ದರು. ರಾಜಕೀಯ ಸನ್ನಿವೇಶ ಬದಲಾಗಿತ್ತು. 1935ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಯಾಗಿತ್ತು ಮತ್ತು ಬ್ರೆಟನ್ ವುಡ್ಸ್’ ಎಂಬ ಹೊಸ ಜಾಗತಿಕ ಹಣಕಾಸು ಒಪ್ಪಂದಕ್ಕೆ ಜಾರಿಯಾಗಿತ್ತು. ಹಾಗಾಗಿ, ಈ ಬದಲಾದ ಪರಿಸ್ಥಿತಿಗೆ ತಕ್ಕಂತೆ ಹೊಸ ಹಣಕಾಸು ಪರಿಹಾರವನ್ನು ನೀಡುವುದು ಆ ಎರಡನೇ ಸಂಪುಟದ ಉದ್ದೇಶವಾಗಿತ್ತು.

ಈ ಭರವಸೆಯ ಸಾಲುಗಳನ್ನು ಬರೆದ ಕೆಲವೇ ವಾರಗಳಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿತು. ಅಂಬೇಡ್ಕರ್ ಅವರು ಸಂವಿಧಾನ ರಚನೆ ಮತ್ತು ದೇಶದ ಅತ್ಯುನ್ನತ ಮಟ್ಟದ ರಾಜಕೀಯದಲ್ಲಿ ಸಂಪೂರ್ಣವಾಗಿ ಮಗ್ನರಾದರು. ಅವರ ಸಂಶೋಧನೆಯ ಎರಡನೇ ಸಂಪುಟದ ರಚನೆ ಸಾಧ್ಯವಾಗಲೇ ಇಲ್ಲ. ಚಿನ್ನದ ಮಾನದಂಡದ ಆಚೆಗೆ, ಒಂದು ಪ್ರಜಾಪ್ರಭುತ್ವ ಸಂವಿಧಾನದ ಚೌಕಟ್ಟಿನಲ್ಲಿ ಅಂಬೇಡ್ಕರ್ ಅವರು ಹಣಕಾಸಿನ ರಾಜಕಾರಣವನ್ನು ಹೇಗೆ ಕಲ್ಪಿಸಿಕೊಂಡಿದ್ದರು ಎಂಬ ವಿವರಗಳು ನಮಗೆ ಲಭ್ಯವಾಗಲಿಲ್ಲ.
ಇಂದು ಹಣಕಾಸು ವ್ಯವಸ್ಥೆಯನ್ನು ಕೇವಲ ಆರ್ಥಿಕ ದೃಷ್ಟಿಯಿಂದ ನೋಡದೆ, ಜನರ ಹಕ್ಕು ಹಾಗೂ ನ್ಯಾಯದ ದೃಷ್ಟಿಯಿಂದ ನೋಡುವ ಅಗತ್ಯ ಇದೆ. ಅಂಬೇಡ್ಕರ್ ಅದಕ್ಕಾಗಿ ತಮ್ಮ ಈ ಪುಸ್ತಕದಲ್ಲಿ ನಮ್ಮನ್ನು ಪ್ರೇರೇಪಿಸಿದ್ದಾರೆ.
ಬ್ರಿಟಿಷ್ ಭಾರತದಲ್ಲಿ ಪ್ರಾಂತೀಯ ಹಣಕಾಸಿನ ವಿಕಸನ
ಡಾ. ಬಿ.ಆರ್. ಅಂಬೇಡ್ಕರ್ ಅವರ “The Evolution of Provincial Finance in British India” (ಬ್ರಿಟಿಷ್ ಭಾರತದಲ್ಲಿ ಪ್ರಾಂತೀಯ ಹಣಕಾಸಿನ ವಿಕಸನ) ಪುಸ್ತಕವು ಭಾರತದ ಆರ್ಥಿಕ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಅತ್ಯಂತ ಮಹತ್ವದ ಕೃತಿಗಳಲ್ಲಿ ಒಂದಾಗಿದೆ. ಇದು ಮೂಲತಃ ಅವರು ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಪಿಎಚ್ಡಿ ಪ್ರಬಂಧವಾಗಿದೆ. ಬ್ರಿಟಿಷ್ ಆಳ್ವಿಕೆಯ ಅವಧಿಯಲ್ಲಿ 1833 ರಿಂದ 1921 ರವರೆಗಿನ ನಡುವೆ ಭಾರತದ ಕೇಂದ್ರ ಸರ್ಕಾರ ಮತ್ತು ಪ್ರಾಂತೀಯ (ರಾಜ್ಯ) ಸರ್ಕಾರಗಳ ನಡುವೆ ಹಣಕಾಸಿನ ಸಂಬಂಧಗಳು ಹೇಗೆ ಬದಲಾದವು ಎಂಬುದನ್ನು ಅಂಬೇಡ್ಕರ್ ಈ ಪುಸ್ತಕದಲ್ಲಿ ವಿವರಿಸಿದ್ದಾರೆ. ಅಧಿಕಾರವು ಅತ್ಯಂತ ಕೇಂದ್ರೀಕೃತವಾಗಿದ್ದ ವ್ಯವಸ್ಥೆಯಿಂದ ಹಣಕಾಸಿನ ವಿಕೇಂದ್ರೀಕರಣದತ್ತ ಭಾರತ ಸಾಗಿದ ಹಾದಿಯನ್ನು ಇದು ವಿಶ್ಲೇಷಿಸುತ್ತದೆ.
ಅಂಬೇಡ್ಕರ್ ಅವರು ಪ್ರಾಂತೀಯ ಹಣಕಾಸಿನ ವಿಕಸನವನ್ನು ಮೂರು ಪ್ರಮುಖ ಹಂತಗಳಲ್ಲಿ ಗುರುತಿಸುತ್ತಾರೆ.

- ನಿಯೋಜನೆಯ ಮೂಲಕ ಬಜೆಟ್ (Budget by Assignment: 1871-1877)
1871ಕ್ಕಿಂತ ಮೊದಲು ಭಾರತದಲ್ಲಿ ಸಂಪೂರ್ಣವಾಗಿ ಕೇಂದ್ರೀಕೃತ ಹಣಕಾಸು ವ್ಯವಸ್ಥೆ ಇತ್ತು. ಸಾಕಷ್ಟು ಗೊಂದಲಗಳಿದ್ದವು. ಪ್ರಾಂತೀಯ ಸರ್ಕಾರಗಳಿಗೆ ಸ್ವಂತ ಆದಾಯದ ಮೂಲಗಳಿರಲಿಲ್ಲ. ಕಾನೂನಿನ ಪ್ರಕಾರ ಎಲ್ಲದಕ್ಕೂ ಕೇಂದ್ರವೇ ಜವಾಬ್ದಾರಿಯಾಗಿತ್ತು. ಆದರೆ ಆಡಳಿತವನ್ನು ಪ್ರಾಂತ್ಯಗಳು ನಡೆಸುತ್ತಿದ್ದವು. ರಾಜ್ಯಗಳಿಗೆ ಯಾವುದೇ ಕಾನೂನಾತ್ಮಕ ಜವಾಬ್ದಾರಿ ಇರಲಿಲ್ಲ. ರಾಜ್ಯಗಳು ತಮ್ಮ ಖರ್ಚಿನ ಪಟ್ಟಿಯನ್ನು ಕೇಂದ್ರಕ್ಕೆ ಕಳಿಸುತ್ತಿದ್ದವು. ಕೇಂದ್ರ ಸರ್ಕಾರಕ್ಕೆ ಸ್ಥಳೀಯ ಅಗತ್ಯಗಳ ಬಗ್ಗೆ ಅರಿವಿರಲಿಲ್ಲ.
ಹೆಚ್ಚು ಬೇಡಿಕೆ ಸಲ್ಲಿಸಿದ ಪ್ರಾಂತಗಳಿಗೆ ಹೆಚ್ಚು ಹಣ ಸಿಗುವಂತಾಗಿತ್ತು. ಇದನ್ನು ಅಂಬೇಡ್ಕರ್ “ಉಳಿತಾಯ ಮಾಡುವವರಿಗೆ ಶಿಕ್ಷೆ, ಹೆಚ್ಚು ಖರ್ಚು ಮಾಡುವವರಿಗೆ ಬಹುಮಾನ” ನೀಡುವ ವ್ಯವಸ್ಥೆ ಎಂದು ಟೀಕಿಸಿದರು. ಜೊತೆಗೆ ಹಣಕಾಸು ವ್ಯವಸ್ಥೆಯು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಹಿಡಿತದಲ್ಲಿತ್ತು. ಅಂಬೇಡ್ಕರ್ ಇದನ್ನು “ಹಣಕಾಸಿನ ಸರ್ವಾಧಿಕಾರ”ಎಂದು ಕರೆದಿದ್ದಾರೆ.
1871ರಲ್ಲಿ ಲಾರ್ಡ್ ಮೇಯೋ ಅವರು ಪ್ರಾಂತಗಳಿಗೆ ಕೆಲವು ಇಲಾಖೆಗಳ (ಶಿಕ್ಷಣ, ಆರೋಗ್ಯ, ರಸ್ತೆ ಇತ್ಯಾದಿ) ಜವಾಬ್ದಾರಿಯನ್ನು ನೀಡಿ, ಅವುಗಳ ನಿರ್ವಹಣೆಗಾಗಿ ಕೇಂದ್ರದಿಂದ ಒಂದು ನಿರ್ದಿಷ್ಟ ಮೊತ್ತವನ್ನು ನೀಡುವ ಪದ್ಧತಿ ಜಾರಿಗೆ ತಂದರು. ಪ್ರಾಂತ್ಯಗಳು ತಮ್ಮ ಸ್ವಂತ ಬಜೆಟ್ ಸಿದ್ಧಪಡಿಸಿಕೊಳ್ಳುತ್ತಿದ್ದವು. ಅಂಬೇಡ್ಕರ್ ಇದನ್ನು ಬಜೆಟ್ ಬೈ” ಅಸೈನ್ಮೆಂಟ್” ಎಂದು ಕರೆದಿದ್ದಾರೆ. ಇದರ ಪ್ರಕಾರ, ಪ್ರಾಂತ್ಯಗಳು ಈ ಇಲಾಖೆಗಳಿಂದ ಬರುವ ಆದಾಯ ಮತ್ತು ಕೇಂದ್ರ ಕೊಡುತ್ತಿದ್ದ ನಿರ್ದಿಷ್ಟ ನಿಧಿಯನ್ನು ಬಳಸಿಕೊಂಡು ಆಡಳಿತ ನಡೆಸಬೇಕಿತ್ತು.
- ನಿಯೋಜಿತ ಆದಾಯದ ಮೂಲಕ ಬಜೆಟ್ (Budget by Assigned Revenues: 1877-1882)
ನಂತರದಲ್ಲಿ ಲಾರ್ಡ್ ಲಿಟನ್ ಸೂಚಿಸಿದಂತೆ ಪ್ರಾಂತೀಯ ಸರ್ಕಾರಗಳಿಗೆ ಕೇವಲ ನಿಗದಿತ ಹಣವನ್ನು ನೀಡುವ ಬದಲು. ಕೆಲವು ತೆರಿಗೆ ಮೂಲಗಳನ್ನೇ (ಉದಾಹರಣೆಗೆ: ಅಬಕಾರಿ, ಸ್ಟ್ಯಾಂಪ್ ಡ್ಯೂಟಿ) ವಹಿಸಿಕೊಡಲಾಯಿತು. ಇದನ್ನು ‘ಬಜೆಟ್ ಬೈ ಅಸೈಸ್ಟ್ ರೆವೆನ್ಯೂಸ್’ಅಂತ ಕರೆಯಲಾಯಿತು. ಹಿಂದಿನ ಹಲವು ವರ್ಷಗಳ ಸರಾಸರಿಯನ್ನು ತೆಗೆದುಕೊಂಡು, ಪ್ರಸ್ತುತ ವರ್ಷದ ಆದಾಯವನ್ನು ಅಂದಾಜಿಸಲಾಗುತ್ತಿತ್ತು. ಅಂದಾಜಿಗಿಂತ ತೆರಿಗೆ ಸಂಗ್ರಹದಲ್ಲಿ ಹೆಚ್ಚು ಕಮ್ಮಿಯಾದರೆ ಆ ವ್ಯತ್ಯಾಸವನ್ನು ಕೇಂದ್ರ ಮತ್ತು ರಾಜ್ಯಗಳು ಅರ್ಧ-ಅರ್ಧ (50/50) ಹಂಚಿಕೊಳ್ಳಬೇಕು. ಹಾಗಾಗಿ ಪ್ರಾಂತ್ಯಗಳು ಅನಗತ್ಯ ಖರ್ಚು ಮಾಡದೆ ಜಾಗರೂಕತೆಯಿಂದ ಹಣಕಾಸನ್ನು ನಿರ್ವಹಿಸುತ್ತಿದ್ದವು. ಜೊತೆಗೆ ಹೆಚ್ಚಿನ ಕಂದಾಯ ಸಂಗ್ರಹವಾದರೆ, ಅದರಲ್ಲಿ ಅರ್ಧ ಭಾಗ ಪ್ರಾಂತ್ಯಗಳಿಗೆ ಸಿಗುತ್ತಿದ್ದರಿಂದ ಅವು ಹೆಚ್ಚಿನ ಸಂಪನ್ಮೂಲದ ಸಂಗ್ರಹಣೆಗೆ ಪ್ರಯತ್ನಿಸುತ್ತಿದ್ದವು. ಹಾಗಾಗಿ ಈ ವ್ಯವಸ್ಥೆ ರಾಜ್ಯಗಳಿಗೆ ಹಣಕಾಸಿನ ಶಿಸ್ತನ್ನು ಕಾಪಾಡಿಕೊಳ್ಳುವುದಕ್ಕೆ ಪ್ರೋತ್ಸಾಹಿಸುತ್ತಿತ್ತು. ಆ ದೃಷ್ಟಿಯಿಂದ ಇದು ಉತ್ತಮ ಕ್ರಮ ಎಂದು ಅಂಬೇಡ್ಕರ್ ಇದನ್ನು ಮೆಚ್ಚಿಕೊಂಡಿದ್ದರು.
- ಅದಾಯದ ಹಂಚಿಕೆಯನ್ನು ಆಧರಿಸಿದ ಬಜೆಟ್ (ಬಜೆಟ್ ಬೈ ಶೇರ್ಡ್ ರೆವೆನ್ಯೂಸ್)
ಹಳೆಯ ಬಜೆಟ್ ಪದ್ಧತಿಗಳಲ್ಲಿ ಇದ್ದ ಒಂದು ಸಮಸ್ಯೆಯೆಂದರೆ, ಪ್ರಾಂತ್ಯಗಳಿಗೆ ತಮ್ಮ ಆದಾಯ ಹೆಚ್ಚಿಸಿಕೊಳ್ಳುವುದಕ್ಕೆ ಯಾವುದೇ ಅವಕಾಶವಿರಲಿಲ್ಲ. ಪ್ರಾಂತ್ಯಗಳಿಗೆ ನಿರಂತರ ಬಂಡವಾಳದ ಕೊರತೆಯ ಸಮಸ್ಯೆ ಇರುತ್ತಿತ್ತು. ಇದನ್ನು ಸರಿಪಡಿಸಲು ‘ಬಜೆಟ್ ಬೈ ಶೇರ್ಡ್ ರೆವೆನ್ಯೂಸ್’ ಅಂದರೆ ಆದಾಯದ ಹಂಚಿಕೆಯನ್ನು ಆಧರಿಸಿದ ಬಜೆಟ್ ಪದ್ಧತಿ ಬಂದಿತು. ಕೆಲವು ತೆರಿಗೆಗಳನ್ನು ಕೇಂದ್ರ ಸಂಗ್ರಹಿಸಿದರೆ. ಇನ್ನು ಕೆಲವನ್ನು ರಾಜ್ಯಗಳು ಸಂಗ್ರಹಿಸುತ್ತಿದ್ದವು. ಲಾರ್ಡ್ ರಿಪ್ಪನ್ ಸೂಚಿಸಿದ ವ್ಯವಸ್ಥೆಯಲ್ಲಿ ಆದಾಯವನ್ನು ಮೂರು ಭಾಗಗಳಾಗಿ ವಿಂಗಡಿಸಲಾಯಿತು, ಕೇಂದ್ರೀಕೃತ ಆದಾಯ : ಕೇವಲ ಕೇಂದ್ರಕ್ಕೆ ಮಾತ್ರ ಸೇರುವ ಆದಾಯ (ಉದಾ: ರೈಲ್ವೆ, ಅಂಚೆ), ಪ್ರಾಂತೀಯ ಆದಾಯ: ಕೇವಲ ಪ್ರಾಂತ್ಯಗಳಿಗೆ ಸೇರುವ ಆದಾಯ. ಮೂರನೆಯದು ಕೇಂದ್ರ ಮತ್ತು ಪ್ರಾಂತ್ಯಗಳು ನಿರ್ದಿಷ್ಟ ಅನುಪಾತದಲ್ಲಿ ಹಂಚಿಕೊಳ್ಳುವ ಆದಾಯ (ಉದಾ: ಭೂಕಂದಾಯ).
ಅಂಬೇಡ್ಕರ್ ಬ್ರಿಟಿಷ್ ಸರ್ಕಾರದ ತೆರಿಗೆ ನೀತಿಯನ್ನು ಬಲವಾಗಿ ಖಂಡಿಸಿದ್ದರು. ಅದೊಂದು ಅತ್ಯಂತ ಅಸಮ ಪದ್ಧತಿಯೆಂದು ಟೀಕಿಸಿದ್ದರು. ಭಾರತದ ಬಡವರಿಂದ ತೆರಿಗೆಯನ್ನು ವಿಪರೀತ ಸಂಗ್ರಹಿಸಲಾಗುತ್ತಿತ್ತು. ಫಸಲು ಬರಲಿ ಬಿಡಲಿ ಭೂಕಂದಾಯವನ್ನು ಕಡ್ಡಾಯವಾಗಿ ವಸೂಲಿ ಮಾಡಲಾಗುತ್ತಿತ್ತು. ಪರಿಣಾಮವಾಗಿ ರೈತರು ಸಾಲದ ಸುಳಿಯಲ್ಲಿ ಸಿಕ್ಕಿದ್ದರು. ಇದಕ್ಕೆ ವ್ಯತಿರಿಕ್ತವಾಗಿ ವರಮಾನ ತೆರಿಗೆಯನ್ನು ರದ್ದುಗೊಳಿಸಿ ಶ್ರೀಮಂತರಿಗೆ ಅನುಕೂಲ ಮಾಡಿಕೊಡಲಾಯಿತು. ವರಮಾನ ತೆರಿಗೆಯ ರದ್ದತಿಯಿಂದ ಉಂಟಾದ ನಷ್ಟವನ್ನು ತುಂಬಿಕೊಳ್ಳಲು ರಾಜ್ಯ ಸರ್ಕಾರಗಳು ಈಗಾಗಲೇ ಕಷ್ಟದಲ್ಲಿದ್ದ ಕೃಷಿಕರ ಮೇಲೆ ಹೆಚ್ಚಿನ ತೆರಿಗೆ ಹಾಕಿದವು. ಪ್ರತಿಯೊಬ್ಬರೂ ಬಳಸುವ ಉನ್ನೂ ಸೇರಿದಂತೆ ದೈನಂದಿನ ಬಳಕೆಯ ವಸ್ತುಗಳ ಮೇಲೆ ವಿಪರೀತ ತೆರಿಗೆ ವಿಧಿಸಿದರು. ಇದು ನೈತಿಕವಾಗಿ ಹಾಗೂ ಆರ್ಥಿಕವಾಗಿ ಅನ್ಯಾಯ ಎಂದು ಅಂಬೇಡ್ಕರ್ ಖಂಡಿಸಿದರು.
ತೆರಿಗೆ ಸಂಗ್ರಹವಷ್ಟೇ ಅಲ್ಲ ಸಾರ್ವಜನಿಕ ವೆಚ್ಚಕ್ಕೆ ಸಂಬಂಧಿಸಿದ ಬ್ರಿಟಿಷ್ ಸರ್ಕಾರದ ಆದ್ಯತೆಗಳು ಕೂಡ ಭಾರತೀಯರಿಗೆ ಮತ್ತು ಭಾರತದ ಹಿತಾಸಕ್ತಿಗೆ ಮಾರಕವಾಗಿದ್ದವು. ಅಂಬೇಡ್ಕರ್ ಗುರುತಿಸುವಂತೆ ಸಂಗ್ರಹವಾದ ಸಂಪನ್ಮೂಲವನ್ನು ಭಾರತದ ಜನರ ಅಭಿವೃದ್ಧಿಗಾಗಿ ಬಳಸುವ ಬದಲು ತಮ್ಮ ಸಾಮ್ರಾಜ್ಯಶಾಹಿ ಹಿತಾಸಕ್ತಿಗಳಿಗಾಗಿ ಬಳಸುತ್ತಿದ್ದರು. ಬಜೆಟ್ನ ಬಹುಪಾಲು ಹಣ ಸೈನ್ಯದ ನಿರ್ವಹಣೆಗೆ ಬಳಕೆಯಾಗುತ್ತಿತ್ತು. ಶಿಕ್ಷಣ. ಸಾರ್ವಜನಿಕ ಆರೋಗ್ಯ ಮತ್ತು ಕೃಷಿ ಸುಧಾರಣೆಗಳ ಮೇಲೆ ಬ್ರಿಟಿಷರು ಮಾಡುತ್ತಿದ್ದ ಖರ್ಚು ನಗಣ್ಯವಾಗಿತ್ತು. ಇದು ಭಾರತದ ಆರ್ಥಿಕ ಹಿನ್ನಡೆಗೆ ಮುಖ್ಯ ಕಾರಣವಾಯಿತು. ಭಾರತದ ತೆರಿಗೆ ಹಣವು ಬ್ರಿಟಿಷ್ ಅಧಿಕಾರಿಗಳ ಪೆನ್ನನ್ ಮತ್ತು ಸಂಬಳದ ರೂಪದಲ್ಲಿ ಇಂಗ್ಲೆಂಡ್ಗೆ ಹರಿದು ಹೋಗುತ್ತಿತ್ತು. ಇವೆಲ್ಲವನ್ನು ಅಂಬೇಡ್ಕರ್ ಅಂಕಿಅಂಶಗಳ ಸಮೇತ ಸಾದರಪಡಿಸುತ್ತಾರೆ. ಕಟುವಾಗಿ ಖಂಡಿಸುತ್ತಾರೆ.

ಪುಸ್ತಕದ ಕೊನೆಯ ಭಾಗದಲ್ಲಿ ಅಂಬೇಡ್ಕರ್ 1919ರ ಮಾಂಟೆಗು-ಚೆಲ್ಡ್ ಫೋರ್ಡ್ ಸುಧಾರಣೆಗಳು ಮತ್ತು ಅದರಲ್ಲಿ ಪರಿಚಯಿಸಲಾದ ದ್ವಿಪ್ರಭುತ್ವ’ (Dyarchy) ಪದ್ಧತಿಯನ್ನು ವಿಶ್ಲೇಷಿಸಿದ್ದಾರೆ. ಅಧಿಕಾರ ಮತ್ತು ಜವಾಬ್ದಾರಿಯ ವಿಭಜನೆಯನ್ನು ಕುರಿತು ವಿವರವಾಗಿ ಚರ್ಚಿಸಿದ್ದಾರೆ. ಹಣಕಾಸು, ಪೊಲೀಸ್, ನ್ಯಾಯಾಂಗ ಮತ್ತು ಭೂಕಂದಾಯ ಇವೆಲ್ಲಾ ಬ್ರಿಟಿಷ್ ಗವರ್ನರ್ ಮತ್ತು ಅವರ ಕಾರ್ಯಕಾರಿ ಮಂಡಳಿಯ ಆಧೀನದಲ್ಲಿದ್ದವು. ಅವರು ಶಾಸನಸಭೆಗೆ ಜವಾಬ್ದಾರರಾಗಿರಲಿಲ್ಲ.
ಶಿಕ್ಷಣ, ಸಾರ್ವಜನಿಕ ಆರೋಗ್ಯ, ಕೃಷಿ ಮತ್ತು ಸ್ಥಳೀಯ ಸ್ವಯಂ ಸರ್ಕಾರ ಇವುಗಳನ್ನು ಭಾರತೀಯ ಸಚಿವರಿಗೆ ವರ್ಗಾಯಿಸಲಾಗಿತ್ತು. ಇವರು ಶಾಸನಸಭೆಗೆ ಜವಾಬ್ದಾರರಾಗಿದ್ದರು. ಅಂಬೇಡ್ಕರ್ ಅವರ ಮುಖ್ಯ ಟೀಕೆಯೆಂದರೆ ಭಾರತೀಯ ಸಚಿವರಿಗೆ ಅಭಿವೃದ್ಧಿ ಇಲಾಖೆಗಳನ್ನು (ವರ್ಗಾಯಿಸಿದ ವಿಷಯಗಳು) ನೀಡಲಾಗಿತ್ತು, ಆದರೆ ಅದಕ್ಕೆ ಬೇಕಾದ ಹಣಕಾಸಿನ ಅಧಿಕಾರವನ್ನು ಬ್ರಿಟಿಷರೇ ಉಳಿಸಿಕೊಂಡಿದ್ದರು. ಪ್ರತಿಯೊಂದು ಯೋಜನೆಗೂ ಅವರು ಬ್ರಿಟಿಷ್ ಹಣಕಾಸು ಅಧಿಕಾರಿಯ ಅನುಮತಿ ಪಡೆಯಬೇಕಿತ್ತು. ಬ್ರಿಟಿಷ್ ಹಣಕಾಸು ಅಧಿಕಾರಿಗಳು ಹಣದ ಕೊರತೆಯ ನೆಪವೊಡ್ಡಿ ಅನುಮತಿಯನ್ನು ತಿರಸ್ಕರಿಸಬಹುದಾಗಿತ್ತು.
ಪ್ರಾಂತ್ಯದ ಎಲ್ಲಾ ಆದಾಯವು ಒಂದೇ ಕಡೆ ಜಂಟಿ ಬೊಕ್ಕಸದಲ್ಲಿ ಜಮೆಯಾಗುತ್ತಿತ್ತು. ಮೊದಲು ಬ್ರಿಟಿಷರ ಅಧೀನದಲ್ಲಿದ್ದ ಸೈನ್ಯ, ಪೋಲಿಸ್ ಇತ್ಯಾದಿ ಕಾಯ್ದಿರಿಸಿದ ಇಲಾಖೆಗಳ ಅಗತ್ಯಗಳನ್ನು ಪೂರೈಸಲಾಗುತ್ತಿತ್ತು. ಕೊನೆಯಲ್ಲಿ ಉಳಿದ ಅಲ್ಪ ಮೊತ್ತವನ್ನು ಭಾರತೀಯ ಸಚಿವರಿಗೆ ವರ್ಗಾಯಿಸಿದ ಇಲಾಖೆಗಳಿಗೆ ನೀಡಲಾಗುತ್ತಿತ್ತು. ಅದಕ್ಕೆ ಅಂಬೇಡ್ಕರ್ ಅವರು “ಭಾರತೀಯ ಸಚಿವರಿಗೆ ಅಧಿಕಾರ ನೀಡಲಾಗಿದೆ, ಆದರೆ ಆ ಅಧಿಕಾರವನ್ನು ಚಲಾಯಿಸಲು ಬೇಕಾದ ಇಂಧನವನ್ನು ನೀಡಲಾಗಿಲ್ಲ”ಎಂದು ಬಣ್ಣಿಸಿದ್ದಾರೆ. ಹಣಕಾಸಿನ ಸ್ವಾಯತ್ತತೆ ಇಲ್ಲದ ದ್ವಿಪ್ರಭುತ್ವವು ಕೇವಲ ಒಂದು “ವಂಚನೆ” ಎಂದು ಅವರು ಕರೆದರು. ಪ್ರಾಂತಗಳಿಗೆ ತಮ್ಮದೇ ಆದ ತೆರಿಗೆ ವಿಧಿಸುವ ಮತ್ತು ಆ ಹಣವನ್ನು ಖರ್ಚು ಮಾಡುವ ಸ್ವತಂತ್ರ ಅಧಿಕಾರ ನೀಡದ ಹೊರತು ನಿಜವಾದ ಪ್ರಜಾಪ್ರಭುತ್ವ ಸಾಧ್ಯವಿಲ್ಲ ಎಂದು ಅವರು ವಾದಿಸಿದರು.

ಆರ್ಥಿಕತೆಯ ಕುರಿತು, ಅರ್ಥಶಾಸ್ತ್ರದ ಕುರಿತು ಮತ್ತು ಈ ವಿಷಯದಲ್ಲಿ ಜಗತ್ತಿನಲ್ಲಿ ನಡೆಯುವ ಹಲವಾರು ವಿದ್ಯಮಾನಗಳ ಕುರಿತು ಈದಿನ.ಕಾಮ್ನಲ್ಲಿ ಪ್ರಕಟವಾಗುತ್ತಿರುವ ಈ ಬರೆಹಗಳು ಮೂಲದಲ್ಲಿ ಡಾ.ಟಿ.ಎಸ್.ವೇಣುಗೋಪಾಲ್ ಮತ್ತು ಡಾ.ಶೈಲಜಾ ಅವರು ಹೊರತರುತ್ತಿರುವ ʼಅರ್ಥʼ ಎಂಬ ಇ-ಮ್ಯಾಗಜೀನ್ನಲ್ಲಿ ಪ್ರಕಟವಾದಂಥವು. ಇವುಗಳನ್ನು ನಮ್ಮಲ್ಲಿ ಪ್ರಕಟಿಸಲು ಅನುಮತಿ ಕೊಟ್ಟಿರುವ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಮೂಲ ಲೇಖನಗಳ ಜೊತೆಗೆ ಅವರ ಕೆಲವು ಪುಸ್ತಕಗಳನ್ನು ನೇರವಾಗಿ ಓದಲು ಬಯಸುವವರು ಇಲ್ಲಿ ಕ್ಲಿಕ್ ಮಾಡಿ.





