ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐಸಿಸ್ ಬಗ್ಗೆ ಸಹಾನುಭೂತಿ ಹೊಂದಿರುವ ವ್ಯಕ್ತಿಯೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಬಡಬಡಾಯಿಸಿದ್ದರು. ತನಿಖೆಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಎನ್ಐಎಗೆ ಪತ್ರ ಬರೆದಿದ್ದರು. ಯತ್ನಾಳ್ ಯಾರ ವಿರುದ್ಧ ಐಸಿಸ್ ನಂಟಿನ ಆರೋಪ ಮಾಡಿದ್ದರೋ, ಅವರ ಜೊತೆಯೇ ಸ್ವತಃ ಯತ್ನಾಳ್ ಅವರೇ ಉದ್ಯಮ ಒಂದರಲ್ಲಿ ಪಾಲುದಾರರಾಗಿದ್ದಾರೆ ಎಂದು ಇದೀಗ ಬಹಿರಂಗವಾಗಿದೆ.
ವಿಜಯಪುರದ ಮೌಲ್ವಿ, ಜಮಾಅತ್ ಎ ಅಹ್ಲೇ ಸುನ್ನತ್ ರಾಜ್ಯಾಧ್ಯಕ್ಷ ಸೈಯದ್ ಮೊಹಮ್ಮದ್ ತನ್ವೀರ್ ಹಾಶ್ಮಿ ಅವರು ಐಸಿಸ್ ಜೊತೆ ನಂಟು ಹೊಂದಿದ್ದಾರೆಂದು ಯತ್ನಾಳ್ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದರು. ಅವರ ಆರೋಪ ಸುಳ್ಳೆಂಬುದು ಈಗಾಗಲೇ ಬಹಿರಂಗವಾಗಿದೆ. ಇದೀಗ, ಅದೇ ತನ್ವೀರ್ ಹಾಶ್ಮಿ ಅವರೊಂದಿಗೆ ಯತ್ನಾಳ್ ಉದ್ಯಮದ ಪಾಲುದಾರರು ಎಂಬುದು ಕೂಡ ಕಂಡುಬಂದಿದೆ.
ವಿಜಯಪುರದ ಗಾಂಧಿ ವೃತ್ತದಲ್ಲಿರುವ ‘ಟೂರಿಸ್ಟ್ ಹೋಟೆಲ್’ನಲ್ಲಿ ತನ್ವೀರ್ ಹಾಶ್ಮಿ ಮತ್ತು ಯತ್ನಾಳ್ ಪಾಲುದಾರರಾಗಿದ್ದಾರೆ. ಅಲ್ಲದೆ, ಅವರಿಬ್ಬರೂ ಮಹಲ್ ಐನಾಪುರ ಗ್ರಾಮದಲ್ಲಿ ನೆರೆಹೊರೆಯ ಮನೆಯಲ್ಲಿಯೇ ವಾಸಿಸುತ್ತಿದ್ದಾರೆ. ವಾಣಿಜ್ಯ ಮಳಿಗೆಗಳನ್ನು ಕೂಡ ಅಕ್ಕ-ಪಕ್ಕದಲ್ಲಿಯೇ ಹೊಂದಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ ಪಾಟೀಲ್ ತಿಳಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಟೂರಿಸ್ಟ್ ಹೋಟೆಲ್‌ನಲ್ಲಿ ಯತ್ನಾಳ್ ಮತ್ತು ತನ್ವೀರ್ ಹಾಶ್ಮಿ ಕುಟುಂಬವು ಪಾಲುದಾರರಾಗಿದ್ದಾರೆ. ಹಾಶ್ಮಿ ಅವರು ಐಸಿಸ್ ಜೊತೆ ನಂಟು ಹೊಂದಿದ್ದಾರೆ ಎಂಬುದು ಗೊತ್ತಿದ್ದಿದ್ದರೆ, ಇಷ್ಟು ವರ್ಷ ಏಕೆ ಸುಮ್ಮನಿದ್ದರು? ಒಂದೇ ಉದ್ಯಮದ ಪಾಲುದಾರರಾಗಿ ಅವರಿಗೆ ಆರೋಪ ಮಾಡುವ ನೈತಿಕತೆ ಇದೆಯೇ” ಎಂದು ಪ್ರಶ್ನಿಸಿದ್ದಾರೆ.
“ಯತ್ನಾಳ್ ತಮ್ಮ ಆರೋಪಗಳನ್ನು ಸಾಬೀತು ಮಾಡಬೇಕು. ಇಲ್ಲವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು” ಎಂದು ಆಗ್ರಹಿಸಿದ್ದಾರೆ.
“ಯತ್ನಾಳ್ ಮತ್ತು ತನ್ವೀರ್ ಹಾಶ್ಮಿ ಅವರು ಹೆಚ್ಚು ಒಡನಾಟ ಹೊಂದಿದ್ದರು. ಈ ಇಬ್ಬರೂ ನಮ್ಮ ಮನೆಯಲ್ಲಿ ಭೇಟಿ ಮಾಡಿ, ಒಟ್ಟಿಗೆ ಊಟ ಮಾಡಿದ್ದರು. ಅಲ್ಲದೆ, ಹಲವು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ವೇದಿಕೆಯನ್ನೂ ಹಂಚಿಕೊಂಡಿದ್ದಾರೆ” ಎಂದು ಕರವೇ ಮುಖಂಡ ಎಂ.ಸಿ. ಮುಲ್ಲಾ ತಿಳಿಸಿದ್ದಾರೆ.
“ಕಳೆದ ಚುನಾವಣೆಯಲ್ಲಿ ಹಾಶ್ಮಿ ಅವರು ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ್ದಾರೆ. ಆ ಕಾರಣಕ್ಕಾಗಿ ಯತ್ನಾಳ್ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ. ದ್ವೇಷದಿಂದ ಇಂತಹ ಆರೋಪ ಮಾಡುವುದು ಖಂಡನೀಯ” ಎಂದು ಹೇಳಿದ್ದಾರೆ.