ಸಮಪರ್ಕವಾಗಿ ಕುಡಿಯುವ ನೀರು ಪೂರೈಸದ ಗ್ರಾಮ ಪಂಚಾಯಿತಿ ವಿರುದ್ಧ ತೀವ್ರ ಆಕ್ರೋಶಗೊಂಡ ಗ್ರಾಮಸ್ಥರು ಖಾಲಿ ಕೊಡ ಹಿಡಿದು ಕಚೇರಿಯೊಳಗೆ ನುಗ್ಗಿ ಪ್ರತಿಭಟನೆ ನಡೆಸಿದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.
ಉಡುಪಿ ನಗರದ ಸಮೀಪ ಇರುವ ಅಂಬಲಪಾಡಿ ಗ್ರಾಮ ಪಂಚಾಯಿತಿ ಕಚೇರಿಗೆ ಶನಿವಾರ ಕಿದಿಯೂರು ದಿಡ್ಡಿ ಗ್ರಾಮಸ್ಥರು ಮುತ್ತಿಗೆ ಹಾಕಿ ಕಚೇರಿ ಯೊಳಗೆ ಧರಣಿ ನಡೆಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಪಿಡಿಓ ಆಗಮಿಸಿ ನೀರಿನ ಸಮಸ್ಯೆ ಪರಿಹರಿಸಿ ಕೊಡುವಂತೆ ಒತ್ತಾಯಿಸಿದ ಗ್ರಾಮಸ್ಥರು, ಕಚೇರಿ ಸಿಬ್ಬಂದಿಯನ್ನು ತರಾಟೆಗೆ ತೆಗೆದು ಕೊಂಡರು.
“ಸುಮಾರು 80 ಮನೆಯವರು ಕಳೆದ ಎರಡು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿಯವರು ಸಮಸ್ಯೆ ಪರಿಹಾರಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ” ಪ್ರತಿಭಟನಕಾರರು ದೂರಿದರು.
ಬಳಿಕ ಕಚೇರಿಗೆ ಆಗಮಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಹಿಣಿ ಮತ್ತು ಪ್ರತಿಭಟನಕಾರ ನಡುವೆ ಮಾತಿನ ಚಕಮಕಿ ನಡೆಯಿತು. ಮೂರು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡುವುದಾಗಿ ಅಧ್ಯಕ್ಷರು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಅಧಿಕಾರಿಗಳ ಯಡವಟ್ಟು; ಬದುಕಿರುವ ವೃದ್ಧೆಗೆ ಮರಣ ಪ್ರಮಾಣ ಪತ್ರ
ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ರಂಜನ್ ಕಿದಿಯೂರು, ಜನಾರ್ದನ ಕಿದಿಯೂರು, ಯತಿರಾಜ್ ಕಿದಿಯೂರು, ದೇವರಾಜ್ ಕಿದಿಯೂರು, ಶಾರದಾ ಪೂಜಾರ್ತಿ, ಸುಮತಿ ಕಿದಿಯೂರು, ಅಂಬಾ, ಗೀತಾ, ವಿಜಯ, ಸತ್ಯವತಿ, ವಿಠಲ ಕರ್ಕೇರ ಮೊದಲಾದವರು ಭಾಗವಹಿಸಿದ್ದರು.