ಕೊಡಗು ಜಿಲ್ಲೆಯ ಬಿಜೆಪಿ ಕಾರ್ಯಕರ್ತ ವಿನಯ್ ಆತ್ಮಹತ್ಯೆ ಪ್ರಕರಣದ ತನಿಖೆ ಆರಂಭಿಸಿರುವ ಬೆಂಗಳೂರು ನಗರದ ಹೆಣ್ಣೂರು ಠಾಣೆ ಪೊಲೀಸರು, ಪ್ರಕರಣದ ಕುರಿತು ಶನಿವಾರ ಪ್ರಾಥಮಿಕ ಮಾಹಿತಿ ಕಲೆ ಹಾಕಿದ್ದು, ಜಿಲ್ಲಾ ಕಾಂಗ್ರೆಸ್ ವಕ್ತಾರ ತನ್ನೀರಾ ಮೈನಾ ವಿರುದ್ಧ ಎಫ್‌ಐಆರ್ ದಾಖಲಿಸಿ ಆರೋಪಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
“ವಿನಯ್ ಅವರ ಮೊಬೈಲ್, ಲ್ಯಾಪ್‌ಟಾಪ್ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದ ಮರಣ ಪತ್ರವನ್ನು ಜಪ್ತಿ ಮಾಡಿಕೊಂಡು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ(ಎಫ್‌ಎಸ್‌ಎಲ್) ರವಾನೆ ಮಾಡಲಾಗಿದೆ. ವಿನಯ್ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಯಾರಿಗೆಲ್ಲಾ ಕರೆ ಮಾಡಿದ್ದರು? ಯಾರೊಂದಿಗೆ ಎಷ್ಟು ಸಮಯ ಮಾತುಕತೆ ನಡೆಸಿದ್ದರು ಎಂಬುದನ್ನು ಪರಿಶೀಲನೆ ನಡೆಸಲಾಗುತ್ತಿದೆ. ಮೊಬೈಲ್ ಕರೆಗಳ ವಿವರ ಪಡೆದುಕೊಳ್ಳಲಾಗುತ್ತಿದೆ” ಎಂದು ಪೊಲೀಸ್ ಮೂಲಗಳು ತಿಳಿಸಿವೆ.
“ವಿರಾಜಪೇಟೆ ಕ್ಷೇತ್ರದ ಶಾಸಕರೂ ಆಗಿರುವ ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ ಎಸ್ ಪೊನ್ನಣ್ಣ ಹಾಗೂ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್‌ಗೌಡ ಅವರ ಹೆಸರನ್ನು ಎಫ್‌ಐಆರ್‌ನಲ್ಲಿ ಸೇರಿಸಬೇಕೆಂದು ವಿನಯ್ ಸಹೋದರ ಜೀವನ್ ಅವರು ಎರಡನೇ ಬಾರಿಗೆ ದೂರು ನೀಡಿದ್ದಾರೆ. ಅವರ ದೂರನ್ನೂ ಕೂಡಾ ಪರಿಶೀಲಿಸಲಾಗುತ್ತಿದೆ” ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ನಾಯಕರು ಹತಾಶರಾಗಿ ಮಾತನಾಡುತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ
“ಕಾಂಗ್ರೆಸ್ ಶಾಸಕರಾದ ಪೊನ್ನಣ್ಣ ಮಂಥರ್ ಗೌಡ ಅವರ ಹೆಸರನ್ನು ವಿನಯ್ ಆತ್ಮಹತ್ಯೆ ಪ್ರಕರಣದ ಎಫ್‌ಐಆರ್‌ನಲ್ಲಿ ಸೇರಿಸಬೇಕು ಎನ್ನುವ ಬಿಜೆಪಿ ನಾಯಕರ ಬೇಡಿಕೆ ಒಪ್ಪಲು ಆಗದು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗಾರರ ಜತೆ ಮಾತನಾಡಿ ಪ್ರತಿಕ್ರಿಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿನಯ್ ಆತ್ಮಹತ್ಯೆ | ಕಾಂಗ್ರೆಸ್ಸಿಗರ ಮೇಲಿನ ಆರೋಪವನ್ನು ರಾಯಕೀಯ ದಾಳವಾಗಿ ಬಳಸುತ್ತಿದೆಯೇ ಬಿಜೆಪಿ?
“ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣದಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ತನಿಖೆ ಆರಂಭವಾಗಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ತನಿಖೆ ನಡೆಯುವಾಗ ಪ್ರಕರಣ ಕುರಿತು ಮಾತನಾಡುವುದು ಸರಿಯಲ್ಲ. ಬಿಜೆಪಿ ನಾಯಕರು ಹತಾಶರಾಗಿ ಮಾತನಾಡುತ್ತಿದ್ದಾರೆ. ಸಾವಿನಲ್ಲೂ ರಾಜಕೀಯ ಮಾಡುವುದು ಅವರಿಗೆ ಕರಗತವಾಗಿದೆ” ಎಂದು ಸಿದ್ದರಾಮಯ್ಯ ಟೀಕಿಸಿದರು.