ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ, ಉಡುಪಿ ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಸಮಿತಿಯ ಪದಗ್ರಹಣ ಮತ್ತು ಸೌಹಾರ್ದ ಇಫ್ತಾರ್ ಕೂಟ ಕಾರ್ಯಕ್ರಮ ಇಂದು ಉಡುಪಿಯ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆ.ಪಿ.ಸಿ.ಸಿ. ಪ್ರಚಾರ ಸಮಿತಿಯ ಅಧ್ಯಕ್ಷರು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಪುತ್ತೂರಿನಲ್ಲಿ ಶಾಸಕನಾಗಿದ್ದಾಗಿನಿಂದಲೂ ಇಂತಹ ಇಪ್ತಾರ್ ಕೂಟವನ್ನು ನಡೆಸುತ್ತ ಬಂದಿದ್ದೇನೆ. ಇಸ್ಲಾಮ್ ಸಾರುವ ಸಮಾನತೆಯ ಸಂದೇಶ ನನಗೆ ಅಚ್ಚುಮೆಚ್ಚು, ಪ್ರವಾದಿ ಮುಹಮ್ಮದ್ ಶಾಂತಿ ಸಮಾನತೆಯನ್ನು ಸಾರಿದರು. ಎಲ್ಲಾ ಧರ್ಮಗಳು ಮಾನವ ಮಾನವನಾಗಿ ಬದುಕುವ ಸಂದೇಶ ಸಾರಿದೆ. ದೇಶಕ್ಕೆ ದೊಡ್ಡ ಕೊಡುಗೆ ಕೊಡಬೇಕಾದರೆ ನಾವು ಪರಸ್ಪರ ಸಹೋದರಂತೆ ಬದುಕಬೇಕು ಎಂದು ಹೇಳಿದರು.

ದೇಶ ವಿಭಜನೆ ಮಾಡಿದ್ದು ಮಹಮ್ಮದ್ ಅಲಿ ಜಿನ್ನಾ ಮತ್ತು ಸಾವರ್ಕರ್ ಆಗಿದ್ದರೂ ಸಹ ಅದನ್ನು ಕಾಂಗ್ರೆಸ್ ರವರ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಸ್ವಾತಂತ್ರ್ಯ, ಶಾಂತಿ, ಸಮಾನತೆಗಾಗಿಯೇ ಸ್ವಾತಂತ್ರ್ಯ ಸಂಗ್ರಾಮ ನಡೆದಿತ್ತು ಅದರಲ್ಲಿ ಸರ್ವ ಧರ್ಮಗಳು ಒಟ್ಟುಗೂಡಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟರು ದೇಶಕ್ಕೆ ಬೇಕಾದ ಸಂವಿಧಾನವು ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದರು, ಸಂವಿಧಾನ ಎಲ್ಲರನ್ನೂ ಒಟ್ಟು ಸೇರಿಸುತ್ತದೆ ಅದುವೇ ನಮ್ಮ ದಾರಿದೀಪ ಎಂದು ಹೇಳಿದರು.

ಇತ್ತೀಚಿಗೆ ಮಲ್ಪೆ ಬಂದರಿನಲ್ಲಿ ನಡೆದ ಘಟನೆ ನಿಜಕ್ಕೂ ಖಂಡನೀಯ. ತಪ್ಪು ಎರಡು ಕಡೆಯಿಂದಲೂ ಇರುತ್ತದೆ ಅದನ್ನು ಪರಿಹಾರ ಮಾಡಬೇಕೆ ವಿನಹ ಅದನ್ನು ರಾಜಕೀಯ ಮಾಡುವುದು ತಪ್ಪು, ಕಳೆದ ಹಲವಾರು ವರ್ಷಗಳಿಂದ ನಮ್ಮನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಮ್ಮೊಳಗಿನ ಅನ್ಯೋನ್ಯತೆ, ಸೌಹಾರ್ದತೆಯನ್ನು ಕಡೆಸುತ್ತಿದ್ದಾರೆ ಇದರ ಬಗ್ಗೆ ನಾವು ಜಾಗೃತರಾಗಿರಬೇಕು ಎಂದು ಹೇಳಿದರು.
ಪೊಲಿಪು ಜಾಮಿಯಾ ಮಸೀದಿ ಖತೀಬರಾದ ಇರ್ಷಾದ್ ಸಹದಿ ದುಅ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶರ್ಫುದ್ದೀನ್ ಶೇಖ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ಫಾದರ್ ವಿಲಿಯಮ್ ಮಾರ್ಟಿಸ್, ಕಾಂಗ್ರೆಸ್ ಮುಖಂಡರಾದ ಪ್ರಸಾದ್ ಕಾಂಚನ್ , ರಮೇಶ್ ಕಾಂಚನ್, ಇಸ್ಲಾಯಿಲ್ ಆತ್ರಾಡಿ, ನಕ್ವಾ ಯಯ್ಯಾ, ಮಲ್ಪೆ, ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಮುಸ್ತಾಕ್ ಅಹಮ್ಮದ್ ಬೆಳ್ವೆ, ಮುಸ್ಲಿಂ ಒಕ್ಕೂಟ ಉಡುಪಿ ಜಿಲ್ಲಾಧ್ಯಕ್ಷರಾದ ಮಹಮ್ಮದ್ ಮೌಲಾ, ಮುಸ್ಲಿಂ ಬಾಂಧ್ಯವ್ಯ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮುತ್ತಾಕ್ ಹೆನ್ನಾಬೈಲ್, ಸಹಬಾಳ್ವೆ ಸ್ಥಾಪಕ ಅಧ್ಯಕ್ಷ ಅಮೃತ್ ಶೆಣೈ, ಭಾರತೀಯ ಕ್ರೈಸ್ತ ಒಕ್ಕೂಟದ ರಾಜ್ಯದ್ಯಕ್ಷ ಪ್ರಶಾಂತ್ ಜತ್ತನ್ನ, ಹಾಜಿ ಹಸನ್ ಅಹಮ್ಮದ್ ಮುಂತಾದವರು ಉಪಸ್ಥಿತರಿದ್ದರು. ನಾಗೇಶ್ ಉದ್ಯಾವರ್ ಕಾರ್ಯಕ್ರಮ ನಿರೂಪಿಸಿದರು.