ನಮಗೆ ರಾಜಕೀಯ ಬೇಕು. ಆದರೆ ಓಟಿಗಾಗಿ ಇನ್ನೊಬ್ಬರಿಗೆ ತೊಂದರೆ ನೀಡಬಾರದು. ಈ ಓಟು ರಾಜಕೀಯದಿಂದ ಅಮಾಯಕರ ಸಾವು ನಿಲ್ಲಬೇಕು. ಮಂಗಳೂರು ಸೌಹಾರ್ದ ನಾಡು, ಇಲ್ಲಿ ಸೌಹಾರ್ದತೆ ಉಳಿಯಬೇಕು. ಕೋಮುದ್ವೇಷ ಅಳಿಯಬೇಕು ಎಂದು ತುಳು ರಂಗಭೂಮಿ, ಸಿನಿಮಾ ನಟ ನವೀನ್ ಡಿ ಪಡೀಲ್ ಹೇಳಿದರು.
ಮಂಗಳವಾರ ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ತ್ರಿಕಾ ಭವನದಲ್ಲಿ ನಡೆದ ಪ್ರೆಸ್ ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ನಟ, “ನಮ್ಮ ಮಂಗಳೂರು ಸೌಹಾರ್ದತೆಯ ಊರು, ಬುದ್ಧಿವಂತರ ಊರು. ಈಗ ಜಾತಿ, ಕೋಮು ಗಲಾಟೆಗಳು ನಡೆಯುತ್ತಿದೆ. ಹೀಗೆ ಮುಂದುವರೆದರೆ ಇಲ್ಲಿ ಬದುಕುವುದು ಕಷ್ಟ. ಯುವ ಜನರ ಭವಿಷ್ಯಕ್ಕೆ ಇದು ಮಾರಕವಾಗಬಹುದು” ಎಂದು ಆತಂಕ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ಮಂಗಳೂರು | ಯುವಕ ರಹಿಮಾನ್ ಕೊಲೆ ಪ್ರಕರಣ: ಸ್ಥಳೀಯ ಇಬ್ಬರು ಸೇರಿ 15 ಮಂದಿಯ ವಿರುದ್ಧ ಎಫ್‌ಐಆರ್
“ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೌಹಾರ್ದತೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿಯೇ ಸೌಹಾರ್ದತೆಗೆ ಸಂಬಂಧಿಸಿದ ಸಿನಿಮಾ ‘ನೆರೆ ಕೆರೆ’ ಶೀಘ್ರವೇ ತೆರೆಕಾಣಲಿದೆ. ಈ ಸೌಹಾರ್ದತೆಯ ಸಿನಿಮಾಕ್ಕೆ ಶಶಿರಾಜ್ ರಾವ್ ಕಾವೂರು ಕಥೆ, ಸಂಭಾಷಣೆ ಬರೆದಿದ್ಧಾರೆ. ನಾನೇ ನಿರ್ದೇಶನ ಮಾಡುತ್ತಿದ್ದೇನೆ” ಎಂದು ಈ ಸಂದರ್ಭದಲ್ಲೇ ವಿವರಿಸಿದರು.
“ಹಿಂದೂ, ಮುಸ್ಲಿಮರು ಮತ್ತು ಕ್ರೈಸ್ತರು ಹೊಂದಾಣಿಕೆಯಿಂದ ಬದುಕಿದರೆ ಯಾವುದೇ ಸಮಸ್ಯೆಯಾಗುವುದಿಲ್ಲ. ಗಲಾಟೆ ಮಾಡಿ ಮನಸ್ಸಿನ ಶಾಂತಿ ಕದಡುವ ಬದಲಾಗಿ ನಾವೆಲ್ಲರೂ ಜೊತೆಯಾಗಿ ಇರಬಹುದಲ್ಲವೇ? ಈಶ್ವರ, ಅಲ್ಲಾ, ಯೇಸು ದೇವರುಗಳೇನು ಗಟ್ಟಿಯಾಗಿಲ್ಲವೇ? ನಮ್ಮ ಜನರಿಗೆ ಯಾಕೆ ಬುದ್ಧಿ ನೀಡುತ್ತಿಲ್ಲ” ಎಂದರು.
“ಕಲಾವಿದನಿಗೆ ಶಿಕ್ಷಣದ ಜೊತೆ ಸುತ್ತಮುತ್ತಲಿನ ಜನರ ಪ್ರೋತ್ಸಾಹ ಮುಖ್ಯ. ನಾನು ಸೌಹಾರ್ದತೆಯ ಪರಿಸರದಲ್ಲಿ ಬೆಳೆದವನು. ಎಲ್ಲಾ ಜಾತಿ, ಧರ್ಮದವರು ನನ್ನ ಕಲಾ ಪ್ರತಿಭೆ ಬೆಳವಣಿಗೆಗೆ ಸಹಾಯ ಮಾಡಿದ್ದಾರೆ. ನಾಟಕಕಾರರಾದ ಜಿ.ಕೆ.ಪುರುಷೋತ್ತಮ ಮತ್ತು ವಿಠಲ ಶೆಟ್ಟಿ ಕನಕವಾಡಿ ನನ್ನ ಗುರುಗಳು” ಎಂದರು. ಜೊತೆಗೆ ತನ್ನ ಬಾಲ್ಯದ ಸೌಹಾರ್ದ ನೆನಪುಗಳನ್ನು ಮೆಲುಕು ಹಾಕಿದರು.
ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ರಾಜಕಾರಣಿಗಳ ಕೋಮು ಧ್ರುವೀಕರಣದ ತಂತ್ರಕ್ಕೆ ಅದೆಷ್ಟೋ ಜೀವಗಳು ಬಲಿಯಾಗಿವೆ. ಕೋಮು ದ್ವೇಷದಿಂದಲೇ ಹಲವು ಕೊಲೆಗಳು ನಡೆದಿವೆ, ಹಾಗೆಯೇ ವೈಯಕ್ತಿಕ ಕಾರಣಗಳಿಂದ ನಡೆದ ಕೊಲೆಗಳಿಗೆ ಶರಣ್ ಪಂಪ್ವೆಲ್‌ನಂತಹ ವಿಎಚ್‌ಪಿ ಮುಖಂಡರುಗಳು ಕೋಮು ಬಣ್ಣ ಹಚ್ಚಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ನಿನ್ನೆ ರಾತ್ರಿಯಷ್ಟೇ(ಮೇ 27) ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ಈರಾಕೋಡಿ ಎಂಬಲ್ಲಿ ಕೊಳತ್ತಮಜಲು ಜುಮ್ಮಾ ಮಸೀದಿ ಕಾರ್ಯದರ್ಶಿ ಪಿಕಪ್ ಚಾಲಕ ಅಬ್ದುಲ್ ರಹಿಮಾನ್ ಎಂಬುವವರ ಹತ್ಯೆ ಮತ್ತು ಕಲಂದರ್ ಶಾಫಿ ಮೇಲಿನ ಕೊಲೆ ಯತ್ನ ನಡೆದಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಕರಾವಳಿಯ ಜನಪ್ರಿಯ ನಟ ನವೀನ್ ಡಿ ಪಡೀಲ್ ನೀಡಿರುವ ಹೇಳಿಕೆ ಮಹತ್ವ ಪಡೆದಿದೆ.
