ಬೀದರ್ ಜಿಲ್ಲೆಗೆ ಹೋಗಬೇಕೆಂದು ತುಂಬ ವರ್ಷದಿಂದ ಆಸೆಯಿತ್ತು. ಯಾಕಂದ್ರೆ ನಮ್ಮ ಕರ್ನಾಟಕ ಭೂಪಟದಲ್ಲಿ ತುತ್ತ ತುದಿಯಲ್ಲಿ ಆ ಜಿಲ್ಲೆ ಇದೆ. ಪ್ರತಿ ಬಾರಿ ಭೂಪಟ ನೋಡ್ದಾಗ ಒಂದು ಸರಿ ಹೋಗೋಣ ಅನ್ಸೋದು. ಆದ್ರೆ ಅಷ್ಟೊಂದು ದೂರ ಹೇಗೆ ಹೋಗೋದು ಅನ್ನೋದೇ ಪ್ರಶ್ನೆಯಾಗಿತ್ತು. ನನ್ನ ಸ್ನೇಹಿತರು ಹಾಗೂ ಕುಟುಂಬದವರೆಲ್ಲ ಅವಾಗವಾಗ ಹೇಳ್ತಾ ಇದ್ರು. ಎಲ್ಲ ಜಿಲ್ಲೆಗೆ ಹೋಗಿಯ ಇನ್ಯಾವ ಜಿಲ್ಲೆ ಬಿಟ್ಟಿದಿಯವ್ವ ಅಂತ ಹೇಳ್ತಿದ್ರು. ಹೇ.. ಬೀದರ್ ಎಲ್ಲಿ ಹೋಗಿನಿ ಎಂದು ಹೇಳ್ತಾ ಇದ್ದೆ.
ಒಂದಿನ ಒಬ್ರು ಸ್ನೇಹಿತರು ಮೇಡಂ ನಮ್ ಬೀದರ್ ಜಿಲ್ಲೆಗೆ ಬನ್ನಿ ಎಂದು ಕರೀತಿದ್ರು, ಅವ್ರು ಯಾರಂದ್ರೆ ಈ ದಿನ.ಕಾಮ್ ಮೀಡಿಯಾದಿಂದ ಘಟಪ್ರಭದಲ್ಲಿ ಈದಿನ ಸಮಾಗಮ ಕಾರ್ಯಾಗಾರಕ್ಕೆ ಬಂದಿದ್ದವರು. ಆ ಕಾರ್ಯಾಗಾರದಲ್ಲಿ ಎಲ್ಲ ಜಿಲ್ಲೆಯಿಂದ ಸ್ನೇಹಿತರಾಗಿ ಪರಿಚಯವಾದರು. ಅದೇ ರೀತಿ ನಮ್ಮ ಟೀಂನಲ್ಲಿ ಇದ್ದವರೇ ಲೋಕೇಶ್ ಕಾಂಬಳೆ ಅವ್ರು. ಸುಮಾರು 1-2 ವರ್ಷದಿಂದ ಈ ದಿನ.ಕಾಮ್‌ನಲ್ಲಿ ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಯ ವಿಶೇಷ ಸುದ್ದಿ ಹಾಗೂ ವಿಡಿಯೊಗಳನ್ನು ನಿರಂತರವಾಗಿ ನೋಡುತ್ತಿದ್ದರು. ತುಂಬಾ ಚೆನ್ನಾಗಿ ಜನರ ನಾಡಿಮಿಡಿತವನ್ನು ಗಮನಿಸಿ ಅವರಿಗೆ ಈ ಮೂಲಕ ಒಳ್ಳೆ ಕೆಲಸ ಮಾಡುತ್ತಿದ್ದೀರಾ ಎಂದು ಹೇಳುತ್ತಿದ್ದರು.
ಅಲ್ಲದೆ ನಮ್ಮ ಜಿಲ್ಲೆಯ ಭಾಗಕ್ಕೆ ಬನ್ನಿ ಮೇಡಂ, ಅಲ್ಲಿ ಪ್ರವಾಸಿ ತಾಣಗಳು ಇವೆ ಎನ್ನುತ್ತಿದ್ದರು. ಅದರಲ್ಲೂ ಬಸವಣ್ಣನವರ ಅನುಭವ ಮಂಟಪವಿದೆ ನೀವು ಅದನ್ನು ನೋಡಬಹುದು ಎಂದು ಹೇಳಿದಾಗ ನಂಗೆ ಮತ್ತಷ್ಟು ಆ ಜಾಗಕ್ಕೆ ಹೋಗಬೇಕು, ಅಲ್ಲಿನ ಜನರ ಜೀವನ ಶೈಲಿ, ಪ್ರವಾಸಿ ತಾಣಗಳು, ಅಲ್ಲಿನ ಸಂಸ್ಕೃತಿ, ಪದ್ಧತಿಯನ್ನು ತಿಳಿಯಬೇಕೆಂದು ಕುತೂಹಲ ಹೆಚ್ಚಾಯಿತು.

ಎರಡು ವರ್ಷದಿಂದ ಹೇಳ್ತಿದ್ದಾರೆ ಹೋಗ್ಬೇಕೆಂದು ಮನಸ್ಸು ಮಾಡಿ ಫೆಬ್ರವರಿ 5ರಂದು ಸಂಜೆ ಹೊರಡುವಂತಾಯಿತು. ಮನೆಯಲ್ಲಿ ತಿಳಿಸಿದೆ, ನನ್ನ ತಾಯಿಯನ್ನು ಕರೆದುಕೊಂಡು ಹೋಗೋಣವೆಂದು ಅವರನ್ನು ಕರೆದೆ. ಆದರೆ ಅವ್ರು ಅಷ್ಟು ದೂರನಾ.. ಅಂದ್ರು, ನನ್ ಸ್ನೇಹಿತ ಶರಣುಗೆ ಕಾಲ್ ಮಾಡಿ ಮದ್ವೆ ಆಗಿ ಒಂದು ತಿಂಗಳು ಆಗದೆ. ನೀನು ಮತ್ತು ನಿನ್ ಹೆಂಡ್ತಿ ಕರ್ಕೊಂಡು ಬಾರಪ್ಪ ಬೀದರ ಹೋಗೋಣ ಅಂತ ಹೇಳ್ದೆ, ಮೊದ್ಲು ಒಪ್ಪಿದ ಆಯ್ತು ಅಂತ ಮತ್ತೆ ನನ್ ಹೆಂಡ್ತಿಗೆ ಹುಷಾರಿಲ್ಲ ಎಂದು ಹೇಳಿದ್ರು. ಮತ್ತೊಬ್ರು ಫ್ರೆಂಡ್‌ಗೆ ತಿಳಿಸಿದೆ, ಆಯ್ತೆಂದು ಹೇಳಿ ಬರಲು ಒಪ್ಪಿದ್ರು. ಒಂದು ದಿನ ಉಳಿಯೋದು ಎರಡನೇ ದಿನಕ್ಕೆ ವಾಪಸ್ ಆಗೋದೆಂದು ಪ್ಲಾನ್ ಆಯ್ತು. ಹಾಗೆಯೇ, ಟ್ರೈನ್ ಬುಕ್ ಆಯ್ತು. ಆದ್ರೆ ಈಕಡೆಯಿಂದ ಸ್ವಲ್ಪ ಕಷ್ಟ ಆಯ್ತು, ಆಕಡೆಯಿಂದ ಟ್ರೈನ್ ಬುಕ್ ಕನ್ಫರ್ಮ್ ಆಗಿತ್ತು.

ಫೆ.5ರಂದು ಮೀಟಿಂಗ್ ಮುಗಿಸಿ ಟ್ರೈನ್ ಹತ್ತಲು ಯಶವಂತಪುರ ರೈಲ್ವೆ ಸ್ಟೇಷನ್‌ಗೆ ಹೋಗುವಾಗ ನಂಗೆ ಒಂದು ಫೋನ್ ಕರೆ ಬಂತು. ನನ್ ಡಿಗ್ರಿ ಫ್ರೆಂಡ್ ಆಶಿತಾ ಸಿಕ್ತೀನಿ ಅಂದ್ಲು. ರೈಲ್ವೆ ಸ್ಟೇಷನ್‌ನಲ್ಲಿ ಇಬ್ರೂ ಭೇಟಿ ಮಾಡಿ ಮಾತಾಡುವ ವೇಳೆ ನಮ್ ಜೊತೆ ಪ್ರಯಾಣ ಬೆಳೆಸಬೇಕಾದ ಸ್ನೇಹಿತರು ಬಂದ್ರು. ಅವ್ರಿಗೆ ನನ್ ಫ್ರೆಂಡ್ ಪರಿಚಯ ಇದ್ದಳು. ನಂತರ ಮಾತಾಡಿ ಅಲ್ಲಿಂದ ಅವರವರ ಕೆಲ್ಸಕ್ಕೆ ಮರಳಲಾಯ್ತು. ನಮ್ಗೂ ಟ್ರೈನ್ ಅತ್ತೋದಕ್ಕೆ ಸಮಯವಾಯ್ತು. ನಾವ್ ಕೂಡ ಪ್ಲಾಟ್ ಫಾರ್ಮ್ ಹುಡುಕಿ ಸೀಟಿಗಾಗಿ ಹುಡುಕಿದೆವು. ಇಲ್ಲಿಂದ ಟ್ರೈನ್ ಜರ್ನಿ ಶುರುವಾಗುತ್ತೆ.

ಬೆಂಗಳೂರಿಂದ ಬೀದರ್ ಜಿಲ್ಲೆಗೆ ಹೋಗುವಾಗ ಟ್ರೈನ್ ಜರ್ನಿ ಹೇಗಿತ್ತು?
ಟ್ರೈನ್ ಅತ್ಕೊಂಡು ನಮ್ ಸೀಟುಗಳಲ್ಲಿ ಕುಳಿತ್ಕೊಂಡ್ವಿ, ನಾನು ಟ್ರೈನ್ ಅತ್ತಿದ್ಮೇಲೆ ನಾವು ಇದ್ದ ಬೋಗಿ ಕಥೆ. ನಾವು ಬುಕ್ ಮಾಡಿರುವ ಬೋಗಿಗಳಿಗೆ ಎಲ್ಲ ಜನ ಹತ್ತಕ್ಕೆ ಶುರು ಮಾಡಿದ್ರು, ಯಪ್ಪಾ ಇದು ಬುಕ್ ಮಾಡಿದ್ದೀವಾ ಅಥವಾ ಜನರಲ್ ಬೋಗಿಗೆ ಬಂದ್ವ ಅನ್ನಿಸಿಬಿಡ್ತು. ಕಾಲಿಡಲು ಒಂದಿಷ್ಟು ಜಾಗ ಇರಲಿಲ್ಲ, ಆ ಪಾಟಿ ಜನರನ್ನು ನೋಡಿ ಬೇಜಾರಾಯ್ತು. ಆ ಮಾರ್ಗವಾಗಿ ಪ್ರಯಾಣ ಮಾಡುವ ಜನರೆಲ್ಲ ಒಟ್ಟಾಗಿ ಹೆಚ್ಚವರಿ ರೈಲುಗಳಿಗಾಗಿ ಪ್ರತಿಭಟನೆ ಮಾಡಬೇಕು ಅಂತ ಒಂದೊಮ್ಮೆ ಸಿಟ್ಟಲ್ಲಿ ಮನಸಲ್ಲೇ ಅಂದುಕೊಂಡು ಸುಮ್ಮನಾದೆ. ಹಾಗೆಯೇ, ನಮ್ಮ ಜತೆಗಿದ್ದ ಸ್ನೇಹಿತರಿಗೂ ಹೇಳಿದೆ. ಅವ್ರು ಹೌದು ಮೇಡಂ ಎಂದರು. ದಾರಿ ಮಧ್ಯ ರಾತ್ರಿಯಲ್ಲಿ ಒಂದು ಜಾಗದಲ್ಲಿ ಟ್ರೈನ್ ನಿಲ್ಸಿದ್ರು, ಮೊಟ್ಟೆ ಬಿರಿಯಾನಿ ಅಂತ ಸಾರಿಕೊಂಡು ಹೋಗ್ತಿದ್ರು. ನಿಲ್ಲಿಸಿ ಊಟ ತಗೊಂಡು ಊಟ ಮಾಡ್ಕೊಂಡು ಪ್ರಯಾಣ ಬೆಳೆಸಿದ್ವಿ. ಬೆಳಿಗ್ಗೆ ಬೀದರ್ ಜಿಲ್ಲೆ ತಲುಪಿದೆವು. ನಂಗೆ ಆಶ್ಚರ್ಯ ಏನಂದ್ರೆ ಆಟೋದವ್ರು ಆಟೋ.. ಆಟೋ.. ಅಂತಿದ್ರು ಅದರಲ್ಲೂ ಎಷ್ಟೊಂದು ಆಟೋ ಅಂದರೆ ನಂಗೆ ಒಂದ್ಸಲ ಬೆಂಗಳೂರು ಅಥವಾ ಮುಂಬೈ ನೆನಪು ಆಯ್ತಪ್ಪ.

ಬೀದರ್ ಜಿಲ್ಲೆಯ ಮೊದಲದಿನ ಪ್ರವಾಸ ಪ್ರಯಾಣ ಹೆಂಗಿತ್ತು?
ಫೆಬ್ರವರಿ 6ರಂದು ಬೀದರ್ ತಲುಪಿದೆವು. ನಮ್ಮನ್ನು ಬರಲು ತಿಳಿಸಿದ್ದ, ಸ್ನೇಹಿತರಿಗೆ ಫೋನ್ ಮಾಡ್ದೆ ನಾನ್ ಬರೋದು ಹತ್ತು ನಿಮಿಷ ತಡವಾಗುತ್ತೆ ಅಂದ್ರು, ನಾವ್ ಅಷ್ಟರೊಳಗೆ ಬೀದರ್ ಬಸ್ಟ್ಯಾಂಡ್ ಅತ್ರ ಹೋದ್ವಿ, ಸ್ನೇಹಿತ್ರು ಬಂದ್ರು ಪರಿಚಯ ಮಾಡ್ಕೊಂಡು ಫ್ರೆಶ್ ಅಪ್ ಆಗಿ ಬೆಳಿಗ್ಗೆ ತಿಂಡಿ ಮಾಡಿ ಹೊರಟೆವು. ಬೀದರ್ ಬಸ್ ಸ್ಟ್ಯಾಂಡ್ ಹತ್ರ ಇರುವ ಸಿಖ್ ಧರ್ಮಕ್ಕೆ ಸೇರಿದ ಗುರುದ್ವಾರ ನಾನಕ್ ಜೀರಾ ಸಾಹಿಬ್ ಸ್ಥಳ ವೀಕ್ಷಿಸಿ ಬಹಮನಿ ಸುಲ್ತಾನ್ ಅಹಮದ್ ಷಾ ಕಾಲದ ಬೀದರ್ ಕೋಟೆಗೆ ಬಂದೆವು. ಕೋಟೆಯಲ್ಲಿ ನೆಲ ಮಾಳಿಗೆ, ಗಮನ ಸೆಳೆಯುವ ಕಲ್ಲು, ಗೋಡೆ, ಸುರಂಗಗಳು, ಸ್ತಂಭ ಹಾಗೆಯೇ ಪ್ರತಿಧ್ವನಿಸುವ ಎತ್ತರವಾದ ಗುಂಬದಾಕಾರದ ಗೋಡೆಗಳು. ಇನ್ನೂ ಒಳಗೆ ಹೋಗ್ತಾ ಹಿಂದೆ ಉಪಯೋಗಿಸಿದಂತಹ ಪಿರಂಗಿ, ಕೋವಿ, ಹಳೆಯ ವಸ್ತುಗಳು, ಶಿಲೆಗಳು ಕಂಗೊಳಿಸಿದವು.

ಭೀಮ್ ಅರ್ಮಿಯಲಿದ್ದ ಪ್ರಕಾಶ್ ಹಾಗೂ ವಿಷ್ಣು ಅವ್ರು ಬಂದು ಅವರ ಪರಿಚಯ ಮಾಡ್ಕೊಂಡು ರಂಗಿನ ಮಹಲ್, ತರ್ಕಶ್ ಮಹಲ್, 16 ಸ್ತಂಭದ ಮಸೀದಿ, ಗುಂಬಜ್ ಕೊಠಡಿ, ಬಂಧಿಖಾನೆ ಇನ್ನೂ ಹಲವಾರು ಸ್ಥಳವನ್ನು ವೀಕ್ಷಿಸಿದೆವು. ಮಧ್ಯಾಹ್ನದ ಊಟ ಬೀದರ್ ಶೈಲಿಯಲ್ಲಿ ವಿಶೇಷವಾಗಿತ್ತು. 71 ಅಡಿ ಎತ್ತರವಿರುವ ಚೌಬಾರ್ ಟವರ್ ಹಾಗೂ ಗವಾನನ ಮದರಸವನ್ನು ವೀಕ್ಷಣೆ ಮಾಡಿ, ಎರಡನೆಯ ಅಲ್ಲಾವುದ್ದೀನ್ ಅಹಮದ್ ಶಾಹನ ಗೋರಿ ಹಾಗೂ ಇನ್ನೂ ಹಲವಾರು ಗೋರಿಗಳಿರುವ ಸ್ಥಳ ನೋಡಿ, ಹಜರತ್ ಖಲೀಲ ಉಲ್ಲಾಹನ ಸಮಾಧಿ, ಬರೀದ್ ಶಾಹ ಪಾಪನಾಶ ದೇವಾಲಯ ನೋಡ್ಕೊಂಡು ರಾತ್ರಿ ಊಟದ ಸಮಯ ಸ್ನೇಹಿತರೆಲ್ಲ ಸೇರಿ ಖಾನಾವಳಿಯಲ್ಲಿ ಊಟಕ್ಕೆ ಹೋದ್ವಿ, ಪ್ರಕಾಶ್ ಕಾಂಬಳೆ ಅವ್ರು ಹೆಂಡ್ತಿ ಕರ್ಕೊಂಡು ಬಂದಿದ್ರು ಇಬ್ರೂ ಪರಿಚಯ ಆದ್ವಿ, ಊಟ ಮುಗಿಸಿದ ನಂತರ ಮತ್ತಷ್ಟು ಬೀದರ್ ಸ್ನೇಹಿತರು ಸಿಕ್ಕಿದ್ದರು. ಮತ್ತೊಮ್ಮೆ ಎಲ್ಲರೂ ಕೂಡಿ ಚಹಾ ಕುಡಿದು ಎಲ್ಲರೂ ಅವರವರ ಜಾಗಕ್ಕೆ ಮರಳಿದರು.
ಎರಡನೇ ದಿನದ ಬೀದರ್ ಜಿಲ್ಲೆ ಪ್ರವಾಸ:
ಬೆಳಿಗ್ಗೆ ಬೇಗ ಹೋಗ್ಬೇಕು ಅಂತ 8-30 ಆಯ್ತು ಹೊರಡೋದು. ಕಾರ್ ತಗೊಂಡು ರತ್ನದೀಪ್ ಹಾಗೂ ಲೋಕೇಶ್ ಕಾಂಬಳೆ ಅವ್ರು ಬಂದ್ರು ಎಲ್ಲರೂ ಹೊರಟ್ವಿ. ಮತ್ತೊಬ್ಬ ಸ್ನೇಹಿತ ಬರ್ತಾನೆ ಅಂದ್ರು ಸರಿ ಬರ್ಲಿ ಅವ್ರೂ ಕೂಡ, ಎಲ್ರೂ ಒಟ್ಟಿಗೆ ಹೋಗಬಹುದು ಅಂದೆ. ಆಗ ನಾಗಾರ್ಜುನ್ ಅವ್ರು ಬಂದ್ರು. ಒಟ್ಟಿಗೆ ಐದು ಜನ ಹೊರಟ್ವಿ, ಮೊದ್ಲು ಹೋಗಿದ್ದು ಕಾರಂಜಿ ಡ್ಯಾಂಗೆ. ಅಲ್ಲಿ ವಾರದ ಹಿಂದೆ ಪ್ರೇಮಿಗಳು ಆತ್ಮಹತ್ಯೆ ಮಾಡ್ಕೊಂಡಿದ್ರು ಅಂತ ನಮ್ಮನ್ನು ಒಳಗೆ ಕಳುಹಿಸಲು ಒಪ್ಲಲಿಲ್ಲ. ಹೆಂಗೋ ಮಾಡಿ ಹೋಗಿ ಬಂದ್ವಿ.

ಅಲ್ಲಿಂದ ಸೀದಾ ಹುಮನಾಬಾದ್‌ಗೆ ಪ್ರಯಾಣ ಬೆಳ್ಸಿ ಮಾಣಿಕ್ಯ ಪ್ರಭು, ವೀರಭದ್ರೇಶ್ವರ ಹಾಗೂ ರಾಜರಾಜೇಶ್ವರಿ ದೇವಸ್ಥಾನ ವೀಕ್ಷಿಸಿದೆವು. ತಿಂಡಿ ಮಾಡಿದ್ದ ಜಾಗದಲ್ಲಿ ಚಹಾ ಮಾತ್ರ ಸಕ್ಕತ್ತಾಗಿತ್ತು. ಅಲ್ಲಿಂದ ಬಸವಕಲ್ಯಾಣಕ್ಕೆ ಹೋಗಿ 108 ಅಡಿ ಎತ್ತರವಿರುವ ಬಸವಣ್ಣನವರ ಪ್ರತಿಮೆ ಮುಂದೆ ಸುಮಾರು ಹೊತ್ತು ಕಳೆದು ಒಳಗೆ ಹೋಗಿ ಅಲ್ಲೆಲ್ಲ ಬಸವಣ್ಣನವರ ಜೀವನ ಶೈಲಿ, ಅನುಭವ ಮಂಟಪ, ಅಕ್ಕಮಹಾದೇವಿಯ ಕಥೆಗಳನ್ನು ತಿಳಿದುಕೊಂಡೆವು. ಅಲ್ಲಿಯೇ, ಫಲಕದಲ್ಲಿ ಹಾಕಿದ್ದ ವಚನಗಳನ್ನು ಓದುತ್ತ ಒಂದು ಕ್ಷಣ ಮೈ ಮರೆಯುವಂತಿತ್ತು. ಭಾಲ್ಕಿ ಮಾರ್ಗವಾಗಿ ಪ್ರಯಾಣ ಬೆಳೆಸುತ್ತ ಲೋಕೇಶ್, ನಾಗಾರ್ಜುನ, ರತ್ನದೀಪ್ ಅವರ ಊರುಗಳನ್ನು ದೂರದಿಂದ ಪರಿಚಯಿಸಿದರು.
ನಾಗಾರ್ಜುನವರ ಚಿಕ್ಕಪ್ಪನ ಮಗ ಬೌರ್ನ್ ವಿಟಾ ಮಾಡಿ ಕೊಟ್ರು, ಮತ್ತೊಬ್ಬರಿಂದ ಪಾನ್ ಬೀಡ ಕೊಟ್ರು ತಿಂದುಕೊಂಡು ಭಾಲ್ಕಿಯಲ್ಲಿ ಶರಣರ ಮಠಕ್ಕೆ ಹೋಗಿ ಶರಣರ ಪ್ರತಿಮೆ ಹಾಗೂ ಅಕ್ಕಮಹಾದೇವಿಯವರ ಪ್ರತಿಮೆ ನೋಡುತ್ತಿದ್ದಾಗ ಮತ್ತೊಬ್ಬರು ಸ್ನೇಹಿತರು ಸಿಕ್ಕಿದರು. ಅವರು ಮೈಕ್ರೋ ಫೈನಾನ್ಸ್ ಬಗ್ಗೆ ಸ್ವಲ್ಪ ಸಮಯ ಮಾತಾಡಿದೆವು. ಹಾಗೆಯೇ, ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮನೆ ಮುಂದೆ ಹಾದು, ಬೀದರ್ ಐತಿಹಾಸಿಕ ಮೈಲಾರೇಶ್ವರ ದೇವಾಲಯ ನೋಡಿ ಬರುವಾಗ ಕಬ್ಬಿನ ಹಾಲು ಕುಡಿಸಿದರು.

ಲೋಕೇಶ್ ಅವ್ರು ಖಾನಾವಳಿ ಸ್ಪೆಷಲ್ ಊಟ ಕಟ್ಟಿಸಿ ಕೊಟ್ರು. ಅಲ್ಲೇ ವಡಾಪಾವ್ ತಿನ್ಬೇಕು ಅನ್ನಿಸಿತ್ತು. ಹುಡುಕಿದ್ವಿ ಎಲ್ಲೂ ಸಿಗ್ಲಿಲ್ಲ. ಅಷ್ಟೊತ್ತಿಗೆ ನಮ್ ಇನ್ನೊಬ್ಬರು ಸ್ನೇಹಿತ್ರು ಚಿತ್ರರಾಜು ಅವ್ರು ಬಂದ್ರು, ಎಲ್ರೂ ಒಟ್ಟಿಗೆ ಮೊಟ್ಟೆ ಬಜ್ಜಿ ಹಾಗೂ ಮಿರ್ಚಿ ತಿಂದು ಟ್ರೈನ್ ಹತ್ತೋಕೆ ಹೊರಟ್ವಿ. ಕೊನೆಗೆ ಬೋಗಿ ಹುಡುಕಿದೆವು. ಆದರೆ ಊಟ ಕಾರಿನಲ್ಲೇ ಉಳಿಯಿತು. ಆಗ ಎಲ್ರಿಗೂ ಗೊತ್ತಾಗಿ ರತ್ನದೀಪ್ ಅವ್ರು ಹೋಗಿ ಟ್ರೈನ್ ಹೊರಡುವ ಹೊತ್ತಿಗೆ ಊಟ ತಂದು ಕೊಟ್ರು ಕೊನೆಯಲ್ಲಿ ಎಲ್ಲರೂ ಒಂದು ಸ್ಮೈಲ್ ಮಾಡಿ ಸೆಲ್ಫಿ ತೆಗೆದುಕೊಂಡು ಬಾಯ್ ಹೇಳಿ ಕಳಿಸಿದ್ರು.
ಇದನ್ನೂ ಓದಿದ್ದೀರಾ?ಹಾಸನ l ಮುಂದುವರೆದ ಮೈಕ್ರೋ ಫೈನಾನ್ಸ್ ಕಿರುಕುಳ; ಕೊಟ್ಟಿಗೆಗೆ ಬಿದ್ದಿದ್ದ ಕುಟುಂಬ ಮರಳಿ ಮನೆಗೆ
ಬೀದರ್ ಭಾಷೆ ಬೇರೆ ಇದ್ರೂ ಅಲ್ಲಿ ಜನ ನಮ್ ಜನ ಹಂಗ್ ಚನ್ನಾಗಿ ನೋಡಿ ಪ್ರೀತಿ, ವಿಶ್ವಾಸದಿಂದ ನೋಡಿ ಕಳ್ಸಿದ್ರು. ನಂಗಂತೂ ಬಹಳ ಖುಷಿ ಆಯ್ತು ಮತ್ತೊಮ್ಮೆ ಬೀದರ್ ಜಿಲ್ಲೆಗೆ ಹೋಗ್ಬೇಕು ಅನ್ಸೋ ಹಾಗೆ ತುಂಬ ಖುಷಿ ಆಯ್ತು. ನಮ್ಮನ್ನ, ನಿಮ್ಮ ಬೀದರ್ ಜಿಲ್ಲೆಗೆ ಬರಲು ತಿಳಿಸಿದ ಲೋಕೇಶ್ ಕಾಂಬಳೆ ಹಾಗೂ ಅಲ್ಲಿಗೆ ಬಂದಾಗ ಪ್ರೀತಿಯಿಂದ ನೋಡಿಕೊಂಡಿದ್ದ ಪ್ರಕಾಶ್, ರತ್ನದೀಪ್, ನಾಗಾರ್ಜುನ್, ಚಿತ್ತರಾಜು ಹಾಗೂ ಎಲ್ಲ ಸ್ನೇಹಿತರಿಗೂ ಪ್ರೀತಿಯ ಧನ್ಯವಾದ.