ಮುಸ್ಲಿಮರ ವಿರುದ್ಧ ಸದಾ ದ್ವೇಷ ಹರಡುವುದರಲ್ಲೇ ಕುಖ್ಯಾತಿ ಪಡೆದಿರುವ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ‘ವಕ್ಫ್’ ವಿಚಾರ ಪ್ರಸ್ತಾಪಿಸಿ, ಮುಖಭಂಗ ಅನುಭವಿಸಿದ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ತೇರದಾಳದಲ್ಲಿ ಅಲ್ಲಮಪ್ರಭು ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಯತ್ನಾಳ್ ಭಾಗವಹಿಸಿದ್ದರು. ತಮ್ಮ ಭಾಷಣದ ವೇಳೆ ‘ವಕ್ಫ್’ ವಿಚಾರ ಪ್ರಸ್ತಾಪಿಸಿದ್ದಾರೆ.
ಈ ವೇಳೆ ವೇದಿಕೆಯ ಬಳಿಯಲ್ಲಿದ್ದ ಊರಿನ ಹಿರಿಯರು ಹಾಗೂ ಸ್ಥಳೀಯರು, ‘ಇಲ್ಲಿ ರಾಜಕಾರಣ ಮಾಡಲು ಬರಬೇಡಿ’ ಎಂದು ತರಾಟೆಗೆ ತೆಗೆದುಕೊಂಡಿದ್ದಲ್ಲದೇ, ಛೀಮಾರಿ ಹಾಕಿದ್ದಾರೆ. ಇದರಿಂದ ಸಾರ್ವಜನಿಕರ ಎದುರಲ್ಲೇ ಮುಖಭಂಗ ಅನುಭವಿಸಿದ ಯತ್ನಾಳ್, ಅರ್ಧದಲ್ಲಿಯೇ ಮಾತು ಮೊಟಕುಗೊಳಿಸಿ ವೇದಿಕೆಯಿಂದ ಇಳಿದು ಹೋಗಿದ್ದಾರೆ. ಘಟನೆಯ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಬಾಗಲಕೋಟೆ ಪಟ್ಟಣದ ದೇವಸ್ಥಾನದ ಕಾರ್ಯಕ್ರಮದಲ್ಲಿ 'ವಕ್ಫ್' ವಿಚಾರ ಪ್ರಸ್ತಾಪಿಸಿದ ಬಿಜೆಪಿ ಶಾಸಕ @BasanagoudaBJP : ಸಾರ್ವಜನಿಕರಿಂದ ತರಾಟೆ
— eedina.com ಈ ದಿನ.ಕಾಮ್ (@eedinanews) November 11, 2024
ಅಲ್ಲಮಪ್ರಭು ದೇವಸ್ಥಾನದ ಲೋಕಾರ್ಪಣೆ ವೇಳೆ ನಡೆದ ಬೆಳವಣಿಗೆ. 'ಇಲ್ಲಿ ರಾಜಕಾರಣ ಮಾಡಲು ಬರಬೇಡಿ' ಎಂದು ತಿಳಿಸುತ್ತಿದ್ದಂತೆಯೇ, ಅರ್ಧದಲ್ಲಿಯೇ ಮಾತು ಮೊಟಕುಗೊಳಿಸಿ ವೇದಿಕೆಯಿಂದ ಇಳಿದ ಯತ್ನಾಳ್. pic.twitter.com/h8Hp9F3C9f
“ಇದು ಯಾವ ಕಾರ್ಯಕ್ರಮ ನೀವು ಏನು ಮಾತಾಡುತ್ತಿದ್ದೀರಿ. ದೇವಸ್ಥಾನ ನಿರ್ಮಾಣಕ್ಕೆ ಎಲ್ಲ ಸಮುದಾಯದವರು ದೇಣಿಗೆ ಕೊಟ್ಟಿದ್ದಾರೆ. ಮುಸ್ಲಿಮರು ಆರು ಲಕ್ಷ ರೂ.ದೇಣಿಗೆ ಕೊಟ್ಟಿದ್ದಾರೆ. ಇದು ರಾಜಕೀಯ ಮಾತಾನಾಡುವ ಸ್ಥಳ ಅಲ್ಲ’ ಎಂದು ಯತ್ನಾಳ್ ರನ್ನು ನೆರೆದಿದ್ದ ಜನರು ತರಾಟೆ ತೆಗೆದುಕೊಂಡರು. ಜನರಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆ ಯತ್ನಾಳ್ ವೇದಿಕೆಯಿಂದ ಇಳಿದು ಹೋಗಿದ್ದಾರೆ.
ಇದನ್ನು ಓದಿದ್ದೀರಾ? ಬಂಟ್ವಾಳ | ಯುವತಿಯನ್ನು ಭೇಟಿ ಮಾಡಲು ಬಂದಿದ್ದ ಯುವಕನನ್ನು ಕಂಬಕ್ಕೆ ಕಟ್ಟಿ ಹಲ್ಲೆ: ಆರು ಮಂದಿಯ ಬಂಧನ
ಮೊನ್ನೆಯಷ್ಟೇ ಬಸನಗೌಡ ಯತ್ನಾಳ್ ವಕ್ಫ್ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರದಲ್ಲಿ ರೈತರ ಪರ ಎನ್ನುತ್ತಾ ಮುಸ್ಲಿಮರ ವಿರುದ್ಧ ದ್ವೇಷ ಹರಡಲು ಯತ್ನಿಸಿದ್ದರು. ಈ ಧರಣಿಯ ಸ್ಥಳಕ್ಕೆ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ರಚಿಸಿರುವ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಂಬಿಕಾ ಪಾಲ್ ಕೂಡ ಭೇಟಿ ನೀಡಿದ್ದರು. ವಕ್ಫ್ ವಿಚಾರ ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದ ವಿಜಯಪುರ ಶಾಸಕ ಯತ್ನಾಳ್ ಈಗ ಸಾರ್ವಜನಿಕರಿಂದಲೇ ಛೀಮಾರಿ ಹಾಕಿಸಿಕೊಂಡಿರುವುದು, ಭಾರೀ ಚರ್ಚೆಗೆ ಗ್ರಾಸವಾಗಿದೆ.

ತಾನು ಲಿಂಗಾಯತನೆಂದು ಅರಿಯದ ಈ ಲಿಂಗಾಯತ ಧರ್ಮ ದ್ರೋಹಿಗೆ, ಸ್ವಾಭಿಮಾನಿಗಳು ಸರಿಯಾದ ಪಾಠವನ್ನು ಕಲಿಸಿದ್ದಾರೆ. ಇನ್ನಾದರೂ ಈ ಧರ್ಮ ದ್ರೋಹಿ ಸಮಾನತೆ ತತ್ವವನ್ನು ಪಾಲಿಸುತ್ತಾರ ಎಂದು ಕಾದು ನೋಡಬೇಕಿದೆ !