ರಾಜ್ಯದಲ್ಲಿ ಬಿಜೆಪಿ ಸೃಷ್ಟಿಸಿರುವ ವಕ್ಫ್ ಆಸ್ತಿ ವಿವಾದ ಭಾರೀ ಚರ್ಚೆಗೆ ಗ್ರಾಸವಾಗಿದೆ. ಉಪಚುನಾವಣೆ ನಡೆಯುತ್ತಿರುವ ಸಮಯದಲ್ಲಿ ಬಿಜೆಪಿ ವಕ್ಫ್ ಆಸ್ತಿ ವಿಚಾರವನ್ನು ವಿವಾದವನ್ನಾಗಿ ಮಾರ್ಪಡಿಸಿದೆ. ರೈತರ ಆಸ್ತಿಯನ್ನು ವಕ್ಫ್ ಕಿತ್ತುಕೊಳ್ಳುತ್ತಿದೆ. ಅದಕ್ಕಾಗಿ ರೈತರಿಗೆ ನೋಟಿಸ್ ನೀಡಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಕೋಮು ದ್ವೇಷ ರಾಜಕಾರಣ ಮಾಡುವ ಮೂಲಕ ಮತ ಗಟ್ಟಿಸಿಕೊಳ್ಳಲು ಯತ್ನಿಸುತ್ತಿದೆ. ಬಿಜೆಪಿ ಈ (ಕು)ತಂತ್ರವು ಮೊದಲ ಹಂತದಲ್ಲಿ ಯಶಸ್ವಿಯಾಗಿದೆ. ವಕ್ಫ್ ಆಸ್ತಿ ವಿಚಾರಕ್ಕೆ ಹಾವೇರಿ ಜಿಲ್ಲೆಯ ಕಡಕೋಳದಲ್ಲಿ ಕೋಮು ಗಲಭೆ ನಡೆದಿದೆ.
ಮುಖ್ಯ ಸಂಗತಿ ಎಂದರೆ, ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಉಪಚುನಾವಣೆ ನಡೆಯುತ್ತಿದೆ. ಈ ಚುನಾವಣೆಯಲ್ಲಿ ಶಿಗ್ಗಾಂವಿಯ ಮತದಾರರು ಬಿಜೆಪಿ ಮತ ಚಲಾಯಿಸುವಂತೆ ಅವರನ್ನು ಪಕ್ಷದತ್ತ ಬಿಜೆಪಿಗರು ಸೆಳೆಯಬೇಕಿದೆ. ಆದರೆ, ಆಡಳಿತಾರೂಢ ಕಾಂಗ್ರೆಸ್, ಗ್ಯಾರಂಟಿ ಯೋಜನೆಗಳು ಮತ್ತು ಸಿದ್ದರಾಮಯ್ಯ ಅವರ ಜನಪ್ರಿಯತೆಯಿಂದ ಮುನ್ನುಗ್ಗುತ್ತಿದೆ. ಅದನ್ನು ತಡೆಯಲು ಬಿಜೆಪಿಯ ಬಳಿ ಬೇರಾವುದೇ ಅಸ್ತ್ರವಿಲ್ಲ. ಹೀಗಾಗಿ, ಬಿಜೆಪಿ ಯಥಾಪ್ರಕಾರ ಕೋಮುದ್ವೇಷದ ಮೊರೆ ಹೋಗಿದೆ. ಶಿಗ್ಗಾಂವಿ ಕ್ಷೇತ್ರವನ್ನು ಒಳಗೊಂಡಿರುವ ಹಾವೇರಿಯಲ್ಲಿ ಕೋಮುದ್ವೇಷ ಫಲಿಸಿದೆ. ಕಡಕೋಳದಲ್ಲಿ ಕೋಮು ಸಂಘರ್ಷ ಭುಗಿಲೆದ್ದಿದೆ.
ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಡಕೋಳ ಗ್ರಾಮದಲ್ಲಿ ವಕ್ಫ್ ಹೆಸರಿನಲ್ಲಿದ್ದ ಆಸ್ತಿಯನ್ನು ವಶಕ್ಕೆ ಪಡೆಯಲು ವಕ್ಫ್ ಬೋರ್ಡ್ ಮುಂದಾಗಿದೆ ಎಂಬ ವದಂತಿ ಮುನ್ನೆಲೆಗೆ ಬಂದಿತ್ತು. ಒಂದು ವೇಳೆ, ವಕ್ಫ್ ಆಸ್ತಿಯನ್ನು ವಕ್ಫ್ ಬೋರ್ಡ್ ಮರಳಿ ಪಡೆದರೆ, ತಾವು ವಾಸವಿರುವ ಮನೆಗಳನ್ನು ಖಾಲಿ ಮಾಡಬೇಕಾಗುತ್ತದೆ ಎಂಬ ಆತಂಕ ಅಲ್ಲಿನ ಜನರಲ್ಲಿತ್ತು. ಈ ವದಂತಿ, ಊಹಾಪೋಹಗಳಿಂದಲೇ ಉದ್ರಿಕ್ತಗೊಂಡ ಗುಂಪು ಬುಧವಾರ ರಾತ್ರಿ ಮುಸ್ಲಿಂ ಮುಖಂಡರ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ, ದಾಂಧಲೆ ಎಬ್ಬಿಸಿದೆ.
ಕಡಕೋಳದ ಮುಸ್ಲಿಂ ಮುಖಂಡ ಮೊಹಮ್ಮದ್ ರಫಿ ಅವರ ಮನೆ ಮೇಲೆ ದಾಳಿ ಮಾಡಿರುವ ಉದ್ರಿಕ್ತರ ಗುಂಪು, ಮನೆಯ ಮುಂದೆ ನಿಲ್ಲಿಸಲಾಗಿದ್ದ ವಾಹನಗಳನ್ನು ಧ್ವಂಸಗೊಳಿಸಿದೆ. ಇನ್ನೂ, ಹಲವಾರು ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದೆ. ಗಲಾಟೆಯಲ್ಲಿ ಐವರಿಗೆ ಗಾಯಗಳಾಗಿವೆ.
ಪರಿಸ್ಥಿತಿ ಉದ್ರಿಕ್ತಗೊಂಡಿದ್ದರಿಂದ, ಹಾವೇರಿ ಜಿಲ್ಲಾಧಿಕಾರಿ ವಿಜಯ್ ಮಹಾಂತೇಶ್, ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ವಕ್ಫ್ ಆಸ್ತಿ ವಿಚಾರವಾಗಿ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲವೆಂದು ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸಿದ್ದಾರೆ. ಗಲಾಟೆಗೆ ಕಾರಣರಾದವನ್ನು ಬಂಧಿಸುತ್ತಿದ್ದಾರೆ. ಜೊತೆಗೆ, ಪ್ರಚೋದನೆ ನೀಡಿದವರನ್ನು ಬಂಧಿಸಲು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಗಲಾಟೆಗೆ ಸಂಬಂಧಿಸಿದಂತೆ 15 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಗ್ರಾಮದಲ್ಲಿ ಉದ್ವಿಘ್ನ ವಾತಾವರಣವಿದ್ದು, ಭದ್ರತೆಗೆ 4 ಕೆಎಸ್ಆರ್ಪಿ ತುಕಡಿಗಳು ಹಾಗೂ 200 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಸ್‌ಪಿ ಅಂಶು ಕುಮಾರ್ ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ಸೈದ್ಧಾಂತಿಕ ರಾಜಿಕೋರತನ: ಕಾಂಗ್ರೆಸ್ ತೆತ್ತ ದುಬಾರಿ ಬೆಲೆಯ ಇತಿಹಾಸ
“ಕಡಕೋಳದಲ್ಲಿ ಮೂರು ವಕ್ಫ್ ಆಸ್ತಿ ಇದೆ. ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಜನರು ಪ್ರತಿದಿನ ಪತ್ರಿಕೆಗಳಲ್ಲಿ ಓದಿ ತಮ್ಮ ಆಸ್ತಿಯೂ ಕೈಜಾರಬಹುದೆಂದು ಭಯಗೊಂಡಿದ್ದಾರೆ. ತಮ್ಮ ಆಸ್ತಿ ವಕ್ಫ್ ಆಸ್ತಿಯೆಂದು ಉಲ್ಲೇಖಿಸಿ, ತಮ್ಮನ್ನು ಖಾಲಿ ಮಾಡಿಸಬಹುದೆಂಬ ಭಯದಿಂದ ಗಲಾಟೆ ಮಾಡಿದ್ದಾರೆ” ಎಂದು ಹಾವೇರಿ ಜಿಲ್ಲಾಧಿಕಾರಿ ವಿಜಯ್ ಮಹಾಂತೇಶ್ ಹೇಳಿದ್ದಾರೆ.
ಆದರೆ, ವಕ್ಫ್ ಆಸ್ತಿ ಸಂಬಂಧ ಕಡಕೋಳದಲ್ಲಿ ಯಾರಿಗೂ ನೋಟಿಸ್ ನೀಡಲಾಗಿಲ್ಲ. ಹಿಂದೆ ಇದ್ದ ಪಟ್ಟಿಗಳಿಗೆ ಸಂಬಂಧಿಸಿದಂತೆ ಮುಂದಿನ ಕ್ರಮಕ್ಕಾಗಿ ಪತ್ರ ಬರೆದಿದ್ದೆವು. ಆದರೆ, ತಮ್ಮ ಮನೆಗಳಿಗೂ ವಕ್ಫ್ ಆಸ್ತಿ ಎಂದು ನಮೂದಿಸುತ್ತಾರೆಂದು ಗ್ರಾಮದ ಜನರು ಭಯಗೊಂಡಿದ್ದಾರೆ. ಅದೇ ಭಯದಿಂದ ಗಲಾಟೆ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಅಂದಹಾಗೆ, ಗೊಂದಲವೇ ಇಲ್ಲದ ವಿಚಾರದಲ್ಲಿ ವಿವಾದ ಸೃಷ್ಟಿಸುವುದು ಬಿಜೆಪಿಯ ಹುನ್ನಾರವಾಗಿತ್ತು. ಆದುದರಿಂದಲೇ, ಉಪಚುನಾವಣೆಯಲ್ಲಿ ಮತದ ಬೆಳೆ ತೆಗೆಯುವುದು ಕೇಸರಿ ಪಕ್ಷದ ತಂತ್ರವಾಗಿತ್ತು. ಮಾತ್ರವಲ್ಲದೆ, ಇಂಥದ್ದೊಂದು ಗಲಭೆ ಅಥವಾ ಘರ್ಷಣೆ ನಡೆದರೂ ತಮಗೆ ಹೆಚ್ಚು ಮತಗಳು ಭದ್ರ ಎಂಬುದೂ ಬಿಜೆಪಿ ಗೊತ್ತಿತ್ತು. ಆ ಕಾರಣಕ್ಕಾಗಿ, ವಕ್ಫ್ ಆಸ್ತಿ ಬಗ್ಗೆ ಗುಲ್ಲೆಬ್ಬಿಸಿತ್ತು.
ಈಗ, ಜನರ ಮನದಲ್ಲಿ ಕಾಂಗ್ರೆಸ್ ಸರ್ಕಾರ ಮುಸ್ಲಿಮರಿಗೆ, ವಕ್ಫ್ ಬೋರ್ಡ್‌ಗೆ ರೈತರ ಜಮೀನನ್ನು ಕಿತ್ತುಕೊಡುತ್ತಿದೆ ಎಂಬ ಅಭಿಪ್ರಾಯ ರೂಪುಗೊಳ್ಳುವಂತೆ ಮಾಡುವಲ್ಲಿ ಬಿಜೆಪಿ ಸಫಲವಾಗಿದೆ. ಹಾಗಾಗಿಯೇ, ಕಡಕೋಳದಲ್ಲಿ ಗಲಭೆ ನಡೆದಿದೆ. ಬಿಜೆಪಿಯ (ಕು)ತಂತ್ರ ಫಲಿಸಿದೆ.