ಬಾಗಲಕೋಟೆ ಜಿಲ್ಲೆ ಬರದಿಂದ ತತ್ತರಿಸಿಹೋಗಿದೆ. ಜಿಲ್ಲಾಡಳಿತ ಬರ ನಿರ್ವಹಣೆಗೆ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಿದೆ. ಆದರೆ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಯೇ ಪ್ರತೀ ದಿನ ನೀರು ಪೋಲಾಗುತ್ತಿದ್ದರೂ ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ಕಂಡೂಕಾಣದಂತಿದ್ದಾರೆ.
ಬಾಗಲಕೋಟೆ ಬರಪೀಡಿತ ಜಿಲ್ಲೆಯಾಗಿದ್ದು, ರೈತರು ಸೇರಿದಂತೆ ಎಲ್ಲ ವರ್ಗದ ಜನರು ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿದ್ದಾರೆ. ನೀರಿನ ಮೂಲಗಳು ಬತ್ತುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಹನಿ ನೀರಿಗೂ ಪರಿದಾಡುವ ಸ್ಥಿತಿ ನಿರ್ಮಾಣವಾಗುವ ಭೀತಿ ಇದೆ. ಈ ಮಧ್ಯೆ ರೈತರು ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಟ್ಯಾಂಕರ್‌ಗಳ ಮೊರೆಹೋಗಿದ್ದು, ಬೆಳೆ ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ.
ಈಗಾಗಲೇ ಆದೆಷ್ಟೊ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ಜನರು ನೀರಿಗಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿ ಹೀಗಿರುವಾಗ, ಜಿಲ್ಲಾಧಿಕಾರಿಗಳ ಕಚೇರಿಯ ಅದೊಂದು ಸ್ಥಳದಲ್ಲಿ, ನಲ್ಲಿ ನೀರು 24ತಾಸು ಬೇಕಾಬಿಟ್ಟಿಯಾಗಿ ಹರಿಯುತ್ತಿರುವುದು ಕಂಡುಬಂದಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿರುವಂತ ಪುರುಷರ ಶೌಚಾಲಯದಲ್ಲಿ ಈ ಮಟ್ಟಿಗೆ ನೀರು ನಿರಂತರವಾಗಿ ಹರಿದು ಪೋಲಾಗುತ್ತದೆ. ಶೌಚಾಲಯದಲ್ಲಿ ಕೈ ತೊಳೆಯುವ ಸಿಂಕ್ ನಲ್ಲಿ ನೀರು 24 ಗಂಟೆಯೂ ಹರಿಯುತ್ತಿದೆ. ನಲ್ಲಿ ದುರಸ್ತಿಯ ಅಗತ್ಯವಿದ್ದರೂ ರಿಪೇರಿ ಮಾಡಿಸಿಲ್ಲ. ಬದಲಾಗಿ ನಲ್ಲಿ ಮೇಲೊಂದು ಕಲ್ಲಿಟ್ಟಿದ್ದಾರೆ.
ಎರಡು ತಿಂಗಳಿಂದ ಇದೇ ರೀತಿ ಸಮಸ್ಯೆ ಇದ್ದರೂ ಕಡಿಮೆ ಕರ್ಚಿನಲ್ಲಿ ರಿಪೇರಿ ಆಗುವ ಈ ಕೆಲಸವನ್ನು ಹಣ ಕೊಟ್ಟು ರಿಪೇರಿ ಮಾಡಿಸಲು ಜಿಲ್ಲಾಡಳಿತ ಭವನ ಸಿಬ್ಬಂದಿ ಮನಸ್ಸು ಮಾಡದೇ ಇರುವುದು ವಿಪರ್ಯಾಸ. ಜಿಲ್ಲಾಡಳಿತ ಸಿಬ್ಬಂದಿಗಳ ಈ ಬೇಜವಾಬ್ದಾರಿತನಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.