ಶ್ರೀರಾಮ ಮಂದಿರ ಉದ್ಘಾಟನೆಯ ಆಹ್ವಾನ ನೀಡುವುದರಲ್ಲಿ ತಾರತಮ್ಯ ಆಗಿದೆ. ನಿಜಕ್ಕೂ ಇದನ್ನು ಯಾರೂ ಸಹಿಸಲು ಸಾಧ್ಯವಿಲ್ಲ. ಶ್ರೀರಾಮನನ್ನು ಬಿಜೆಪಿಯವರು ಗುತ್ತಿಗೆ ತೆಗೆದುಕೊಂಡಿಲ್ಲ. ನಾವೂ ಹಿಂದುಗಳೇ, ಹಿಂದುತ್ವ ವಾದಿಗಳೇ ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ಹೇಳಿದರು.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಹಿಂದೆ ಅಂಬೇಡ್ಕರ್ ಹಿಂದು ಧರ್ಮ ತ್ಯಜಿಸುವಂತೆ ಮಾಡಲಾಗಿತ್ತು. ಈಗ ದೇಶದಲ್ಲಿ ಆದೇ ರೀತಿಯ ವಾತಾವರಣ ಸೃಷ್ಟಿ ಮಾಡಲಾಗುತ್ತಿದೆ. ಬಿಜೆಪಿಯವರಿಗೆ ಯಾರು ಹಿಂದುತ್ವದ ಪವರ್ ಆಫ್ ಅಟಾರ್ನಿ ಕೊಟ್ಟಿಲ್ಲ. ಆದರೆ, ಬಿಜೆಪಿ ಅನಗತ್ಯವಾಗಿ ಈ ವಿಚಾರವಾಗಿ ಗೊಂದಲ ಸೃಷ್ಟಿಯಾಗುತ್ತಿದೆ” ಎಂದು ಆರೋಪಿಸಿದರು.
“ರಾಜಕಾರಣಕೋಸ್ಕರ, ಓಟಿಗೋಸ್ಕರ ಕಾಂಗ್ರೆಸ್ ಸರ್ಕಾರವನ್ನು ಹಿಂದು ವಿರೋಧಿ ಸರ್ಕಾರವೆಂದು ಹೇಳುವುದನ್ನು ನಾವು ಖಂಡಿಸಬೇಕು. ಹಿಂದುತ್ವವನ್ನು ಬಂಡವಾಳ ಮಾಡಿಕೊಂಡು ಬೇರೆ ಹಿಂದುಗಳಿಗೆ ಅವಮಾನ ಮಾಡುತ್ತಿರುವುದು ಸರಿಯಲ್ಲ. ಈ ರೀತಿಯ ಹಿಂದುತ್ವದ ದುರುಪಯೋಗವನ್ನು ನೋಡಿಯೇ ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಹೋಗಿದ್ದು” ಎಂದರು.
“ಹುಬ್ಬಳ್ಳಿ ಕರಸೇವಕನ ಬಂಧಿಸಲು ಆತನ ಮೇಲಿನ ಪ್ರಕರಣಗಳು ಕಾರಣ. ಹದಿಮೂರು ಕೇಸ್‌ಗಳು ಆತನ ಮೇಲಿದೆ. ಅವನೊಬ್ಬನನ್ನು ಬಂಧಿಸಿದ ತಕ್ಷಣ ಎಲ್ಲ ಕರಾಸೇವಕರನ್ನು ಬಂಧಿಸುತ್ತಾರೆ ಎನ್ನುವುದು ಸರಿ ಅಲ್ಲ. ಪೆಂಡಿಂಗ್ ಕೇಸುಗಳನ್ನು ಪರಿಶೀಲನೆ ಮಾಡುವ ವೇಳೆ ಅವರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಹಿಂದೂಗಳೊಬ್ಬರಿಂದಲೇ ದೇಶ ಕಟ್ಟಲು ಆಗುವುದಿಲ್ಲ. ಎಲ್ಲ ಧರ್ಮದ ಜನರನ್ನ ಸೇರಿಸಿಕೊಂಡು ದೇಶ ಕಟ್ಟಿರುವುದು. ಈಗ ಪ್ರಸ್ತುತ ಇರುವ ರಾಕೇಟ್ ಟೆಕ್ನಾಲಜಿ ಟಿಪ್ಪು ಟೆಕ್ನಾಲಜಿ ಅಂತಾನೆ ಫೇಮಸ್ ಆಗಿದೆ. ಟಿಪ್ಪುವಿನಿಂದಾಗಿ ರಾಕೇಟ್ ಟೆಕ್ನಾಲಜಿ ಅಭಿವೃದ್ಧಿಪಡಿಸಿದ್ದೇವೆ. ಅಬ್ದುಲ್ ಕಲಾಂ ಕೂಡ ರಾಕೇಟ್ ಟೆಕ್ನಾಲಜಿ ಅಭಿವೃದ್ಧಿಪಡಿಸಿದ್ದಾರೆ” ಎಂದರು.
“ಗಾಂಧೀಜಿ ಕೊಂದ ಗೋಡ್ಸೆನೂ ಕೂಡ ಹಿಂದುನೇ. ಶ್ರೀರಾಮನ ಜಪ ಮಾಡುತ್ತಿದ್ದ ಗಾಂಧಿನ ಗೋಡ್ಸೆ ಕೊಂದ.
ಮೋದಿ ಹೋಗಿ ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠಾಪನೆ ಮಾಡಿದ ತಕ್ಷಣ ನಾವೆಲ್ಲ ನಮ್ಮ ಊರಿನ ರಾಮನನ್ನು ಬಿಟ್ಟು ಅಲ್ಲಿಗೆ ಹೋಗಲ್ಲ. ಬಿಜೆಪಿಯವರ ಶ್ರೀರಾಮ ಎಂದು ಬರೆದುಕೊಳ್ಳಲಿ ನಮಗೇನೂ ಅಡ್ಡಿಯಿಲ್ಲ.
ಶ್ರೀ ರಾಮನನ್ನು ಪರಿಚಯಿಸಿದಂತಹ ವಾಲ್ಮೀಕಿಯ ದೇವಸ್ಥಾನ ಕಟ್ಟಬೇಕೆಂದು ಒತ್ತಾಯ ಮಾಡುತ್ತೇವೆ.
ಈ ಒತ್ತಾಯಕ್ಕೆ ಮೋದಿ ಅವರು ಸ್ಪಂದಿಸಬೇಕು. ಇಲ್ಲದಿದ್ದರೆ ಇಡೀ ದೇಶದಲ್ಲಿ ಹೋರಾಟ ಮಾಡುತ್ತೇವೆ” ಎಂದರು.
“ಗೋಡ್ಸೆ ಹಿಂದೂಗಳು ಮತ್ತು ಮಹಾತ್ಮ ಗಾಂಧಿ ಹಿಂದೂಗಳು ಎಂದು ನಾವು ಬದಲಾವಣೆ ಮಾಡಬೇಕಾಗುತ್ತದೆ.
ಮಹಾತ್ಮ ಗಾಂಧಿ ಅವರ ಪ್ರತಿಪಾದನೆಯ ಹಿಂದುತ್ವ ಬೇರೆ. ಗೋಡ್ಸೆ ಹಿಂದುತ್ವ ಬೇರೆ. ನಾವೆಲ್ಲ ಮಹಾತ್ಮ ಗಾಂಧಿ ಅವರ ಹಿಂದುತ್ವದ ಪ್ರತಿಪಾದಕರು” ಎಂದು ಹೇಳಿದರು.