“ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ 25 ಸಾವಿರ ರೂ. ಹಾಗೂ ಸಹಾಯಕಿಯರಿಗೆ 12 ಸಾವಿರ ರೂ. ನಿಗದಿ ಮಾಡಬೇಕು” ಎಂದು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಆಗ್ರಹಿಸಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ನೇತೃತ್ವದಲ್ಲಿ ಕಳೆದ ಮೂರು ದಿನಗಳಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದ 12 ಸಾವಿರಕ್ಕೂ ಹೆಚ್ಚು ಕಾರ್ಯಕರ್ತೆಯರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಕನಿಷ್ಠ ವೇತನದ ಜತೆಗೆ, ಕಾರ್ಯಕರ್ತೆಯರನ್ನು ‘ಸಿ’ ದರ್ಜೆ ಹಾಗೂ ಸಹಾಯಕಿಯರನ್ನು ‘ಡಿ’ ದರ್ಜೆ ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ.
“ಮಹಿಳೆಯರು, ಮಕ್ಕಳು, ಗರ್ಭಿಣಿಯರು, ಬಾಣಂತಿಯರು ಎದುರಿಸುತ್ತಿರುವ ಅಪೌಷ್ಟಿಕತೆ, ರಕ್ತಹೀನತೆ ಆರೋಗ್ಯ ಸಮಸ್ಯೆಗಳನ್ನು ತೊಡೆದು ಹಾಕಲು 1975ರಲ್ಲಿ ‘ಸಮಗ್ರ ಶಿಶು ಅಭಿವೃದ್ಧಿ ಯೋಜನೆ’ (ಐಸಿಡಿಎಸ್) ಪ್ರಾರಂಭಿಸಲಾಗಿತ್ತು. ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಅಂಗನವಾಡಿ ಕಾರ್ಯಕರ್ತೆಯರು ಶ್ರಮ ಹಾಕುತ್ತಿದ್ದಾರೆ. ಆದರೆ, ಯಾವುದೇ ಸೌಲಭ್ಯ ಕಲ್ಪಿಸುತ್ತಿಲ್ಲ. ಮೂರರಿಂದ ಆರು ವರ್ಷದ ಮಕ್ಕಳಿಗೆ ಶಾಲಾಪೂರ್ವ ಶಿಕ್ಷಣ, ಪೂರಕ ಪೌಷ್ಟಿಕ ಆಹಾರ ವಿತರಣೆ, ಮಕ್ಕಳಿಗೆ ಚುಚ್ಚುಮದ್ದು ಕೊಡಿಸುವುದು, ಭಾಗ್ಯಲಕ್ಷ್ಮಿ ಅರ್ಜಿ, ಮಾತೃವಂದನಾ ಅರ್ಜಿಗಳನ್ನು ಫಲಾನುಭವಿಗಳಿಗೆ ನೀಡುತ್ತಿದ್ದೇವೆ. ಕೋವಿಡ್ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡಿದ್ದೇವೆ. ಕೆಲಸದ ಜತೆಗೆ ಇತರ ಇಲಾಖೆಗಳ ಕೆಲಸಗಳನ್ನೂ ಹಲವು ವರ್ಷಗಳಿಂದ ಮಾಡುತ್ತಿದ್ದೇವೆ. ಆದರೆ, ಸರ್ಕಾರ ಕನಿಷ್ಠ ಕೂಲಿ ನೀಡಲು ವಿಫಲವಾಗಿದೆ” ಎಂದು ಅಂಗನವಾಡಿ ಕಾರ್ಯಕರ್ತೆಯರು ಆಕ್ರೋಶ ಹೊರಹಾಕಿದರು.
ಸಂಘಟನೆಯ ಪದಾಧಿಕಾರಿಗಳು ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಮನವಿಯಲ್ಲಿ ಇರುವ ಬೇಡಿಕೆಗಳ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ. ಈಗ ಪ್ರತಿಭಟನೆ ಹಿಂಪಡೆದುಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿ ನ್ಯಾಯ ಸಿಗುವವರೆಗೂ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ ಎಂದು ಕಾರ್ಯಕರ್ತೆಯರು ಪಟ್ಟು ಹಿಡಿದಿದ್ದಾರೆ.
ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸ್ವತಂತ್ರ ಸಂಘಟನೆಯ ರಾಜ್ಯಾಧ್ಯಕ್ಷೆ ಪ್ರೇಮಾ ಈ ದಿನ.ಕಾಮ್ ಜತೆಗೆ ಮಾತನಾಡಿ, “ಇವತ್ತಿನ ಹೋರಾಟ ಮೂರನೇ ದಿನಕ್ಕೆ ಕಾಲಿಟ್ಟಿದ್ದೆ. ಸಾವಿರಾರು ಕಾರ್ಯಕರ್ತೆಯರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಶತಾಯಗತಾಯ ನಮಗೆ ನ್ಯಾಯ ಬೇಕು. ನಮಗೆ ನ್ಯಾಯ ಸಿಗುವವರೆಗೂ ನಾವು ಈ ಜಾಗ ಬಿಟ್ಟು ಕದಲುವುದಿಲ್ಲ. ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೂ ಕೆಲಸ ಮಾಡುತ್ತೇವೆ. ಜತೆಗೆ, ಮೊಬೈಲ್ ಫೋನ್ ಕೆಲಸವನ್ನ ಕೊಟ್ಟಿದ್ದಾರೆ. 12 ಗಂಟೆಗೂ ಹೆಚ್ಚು ಸಮಯ ಕೆಲಸ ಮಾಡುತ್ತೇವೆ. ನಮಗೆ ಕನಿಷ್ಠ ಕೂಲಿ ವೇತನ ಕೊಡಿ ಎಂದು ಕೇಳುತ್ತಿದ್ದೇವೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಇಎಸ್ಐ ಇಲ್ಲ. ಬಸ್ ಸೌಲಭ್ಯ ಇಲ್ಲ. ಕನಿಷ್ಠ ವೇತನ ನಿಗದಿ ಮಾಡುವ ಬಗ್ಗೆ ಲಿಖಿತ ರೂಪದಲ್ಲಿ ಸರ್ಕಾರ ಬರೆದುಕೊಡಬೇಕು. ಆಗ ಮಾತ್ರ ನಾವು ಪ್ರತಿಭಟನೆಯನ್ನ ಹಿಂದಕ್ಕೆ ತೆಗೆದುಕೊಳ್ಳುತ್ತೇವೆ” ಎಂದರು.
“ಬೇರೆ ಊರಿನಿಂದ ಬಂದು ಕಳೆದ ಮೂರು ದಿನದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ. ಆದರೆ, ಸರ್ಕಾರದಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಸಿಗುತ್ತಿಲ್ಲ. ಕಳೆದ 50 ವರ್ಷಗಳಿಂದ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆಯರಾಗಿ ಸಹಾಯಕಿಯರಿಗಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದೇವೆ. ಆದರೆ, ಇಷ್ಟು ವರ್ಷವಾದರೂ ಕೂಡ ಕಾರ್ಯಕರ್ತೆಯರಿಗೆ 11 ಸಾವಿರ ಮತ್ತು ಸಹಾಯಕಿಯರಿಗೆ 6 ಸಾವಿರ ಗೌರವಧನ ನೀಡುತ್ತಿದ್ದಾರೆ. ನಮ್ಮ ಸಮುದಾಯದಲ್ಲಿ ನಮಗೆ ಗೌರವ ಇದೆ. ಇಲಾಖೆಯಿಂದ ಕೊಡುವ ಗೌರವಧನ ನಮಗೆ ಬೇಡ. ನಮಗೆ ಕನಿಷ್ಠ ವೇತನವನ್ನ ಸರ್ಕಾರ ನಿಗದಿ ಮಾಡಲೇಬೇಕು. ಮೂರು ದಿನದಿಂದ ಚಳಿಯಲ್ಲಿಯೇ ಮಲಗಿದ್ದೇವೆ. ಹಲವರಿಗೆ ಆರೋಗ್ಯ ಸಮಸ್ಯೆ ಆಗಿದೆ. ನಮ್ಮ ಬೇಡಿಕೆ ಈಡೇರಿಕೆಯಾಗುವವರೆಗೂ ಈ ಜಾಗ ಬಿಟ್ಟು ನಾವು ಕದಲುವುದಿಲ್ಲ” ಎಂದು ಅಂಗನವಾಡಿ ಕಾರ್ಯಕರ್ತೆ ಉಮಾ ಈ ದಿನ.ಕಾಮ್‌ಗೆ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆ ಸುಜಾತ ಮಾತನಾಡಿ, “ಕಳೆದ 23 ವರ್ಷದಿಂದ ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದೇನೆ. ನಾನು ಅಂಗನವಾಡಿ ಕೆಲಸಕ್ಕೆ ಸೇರಿದಾಗ 750 ರೂಪಾಯಿ ಹಣ ಸಿಗುತ್ತಿತ್ತು. ಹಂತ ಹಂತವಾಗಿ 100, 500 ರೂಪಾಯಿ ಹೆಚ್ಚಳ ಮಾಡಿ 50 ವರ್ಷಕ್ಕೆ 11 ಸಾವಿರದವರೆಗೆ ಗೌರವಧನ ನೀಡುತ್ತಿದ್ದಾರೆ. ಕನಿಷ್ಠ ವರ್ಷಕ್ಕೆ 500 ನೀಡಿದ್ದರೂ ಕೂಡ ಈ ಹೊತ್ತಿಗೆ ನಮಗೆ 25 ಸಾವಿರ ಸಿಗುತ್ತಿತ್ತು. ಆದರೆ, ನಮ್ಮಿಂದ ಹೆಚ್ಚು ಕೆಲಸ ಮಾಡಿಸಿಕೊಂಡು ಕನಿಷ್ಠ ಗೌರವಧನ ನೀಡುತ್ತಿದ್ದಾರೆ. ರಾಜ್ಯ ಸರ್ಕಾರದಿಂದ 7 ಸಾವಿರ ಕೇಂದ್ರ ಸರ್ಕಾರದಿಂದ 4,500 ರೂಪಾಯಿ ಬರುತ್ತಿದೆ. ಹಾಗಾಗಿ, ಕನಿಷ್ಠ ವೇತನ ಕಾರ್ಯಕರ್ತೆಯರಿಗೆ 25 ಸಾವಿರ ಸಹಾಯಕಿಯರಿಗೆ 12 ಸಾವಿರ ಕೊಡಬೇಕು. ಕಳೆದ ಹಲವು ವರ್ಷಗಳಿಂದ ವೇತನಕ್ಕಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್‌ಗೆ ಬಂದು ಪ್ರತಿಭಟನೆ ಮಾಡುತ್ತಿದ್ದೇವೆ. ಆದರೆ, ನಮಗೆ ಸರ್ಕಾರ ವೇತನ ಹೆಚ್ಚಳ ಮಾಡುತ್ತಿಲ್ಲ. ಕೇಂದ್ರ ಸರ್ಕಾರವಂತೂ ನಮ್ಮ ಸಮಸ್ಯೆ ಆಲಿಸುತ್ತಿಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ತಂತ್ರಜ್ಞಾನ ಜಗತ್ತನ್ನು ಬೆಚ್ಚಿ ಬೀಳಿಸಿದ ಚೀನಾದ ಡೀಪ್‌ಸೀಕ್, ಅಮೆರಿಕದ ಅಹಂಕಾರಕ್ಕೆ ಪೆಟ್ಟು ಕೊಟ್ಟಿತೇ?
“ಮೂರು ತಿಂಗಳು 150 ರೂಪಾಯಿಗೆ ದುಡಿದಿದ್ದೇನೆ. 12 ವರ್ಷ 90 ರೂಪಾಯಿಗೆ ದುಡಿದಿದ್ದೇನೆ. ನನಗೆ ಯಾವುದೇ ರೀತಿಯ ಸೌಲಭ್ಯ ನೀಡಿಲ್ಲ. 42 ವರ್ಷ ಆಯಿತು ಈ ಕೆಲಸಕ್ಕೆ ಸೇರಿ. ಇಲ್ಲಿಯವರೆಗೂ ನನಗೆ ಬರುತ್ತಿರುವ ಸಂಬಳ ಕೇವಲ 6,500 ರೂಪಾಯಿ ಮಾತ್ರ. ಜತೆಗೆ, ನನಗೆ ಸರ್ಕಾರದಿಂದ ಯಾವುದೇ ರೀತಿಯ ಸೌಲಭ್ಯ ಸಿಗಲಿಲ್ಲ. ಕನಿಷ್ಟ ವೇತನ ಪಡೆಯುವುದಕ್ಕಾಗಿ ಮನೆ ಬಿಟ್ಟು ಬಂದು ನಾಲ್ಕು ದಿನ ಆಯಿತು. ಮನೆ ಮಕ್ಕಳನ್ನ ಬಿಟ್ಟು ಬಂದು ಬೀದಿಲಿ ಕುಳಿತಿದ್ದೀವಿ. ಆದರೂ ಕೂಡ ಪ್ರತಿಭಟನಾ ಸ್ಥಳಕ್ಕೆ ಸರ್ಕಾರದವರು ಯಾರು ಬರುತ್ತಿಲ್ಲ. ನಮ್ಮ ಸಮಸ್ಯೆಯನ್ನು ಯಾರು ಆಲಿಸುತ್ತಿಲ್ಲ” ಎಂದು ಈ ದಿನ.ಕಾಮ್ ಜತೆಗೆ ಮಾತನಾಡಿದ ಅಂಗನವಾಡಿ ಸಹಾಯಕಿ ಲಕ್ಷ್ಮೀ ತಮ್ಮ ನೋವನ್ನ ಹೊರಹಾಕಿದರು.
ಎಂಎಲ್‌ಸಿ ಐವಾನ್ ಡಿಸೋಜಾ ಈ ದಿನ.ಕಾಮ್ ಜತೆಗೆ ಮಾತನಾಡಿ, “ಅಂಗನವಾಡಿ ಕಾರ್ಯಕರ್ತೆಯರಿಗೆ ತಿಂಗಳಿಗೆ 25 ಸಾವಿರ ಮತ್ತು ಸಹಾಯಕಿಯರಿಗೆ 12 ಸಾವಿರ ನಿಗದಿ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಆದರೆ, ಸರ್ಕಾರದ ಇತಿಮಿತಿಯಲ್ಲಿ ಮತ್ತು ಆರ್ಥಿಕತೆಯನ್ನು ಹೊಂದಿಕೊಂಡು ಮುಖ್ಯಮಂತ್ರಿಗಳು ವೇತನ ನಿಗದಿ ಮಾಡಬೇಕಾಗುತ್ತದೆ. ಮುಖ್ಯಮಂತ್ರಿಗಳು ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯರ ಮನವಿಯನ್ನು ಸ್ವೀಕಾರ ಮಾಡಿದ್ದಾರೆ. ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಮನದಲ್ಲಿ ಇಟ್ಟುಕೊಂಡು ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಎಲ್ಲ ಸಚಿವರ ಜತೆಗೆ ಚರ್ಚೆ ಮಾಡಿ ಒಳ್ಳೆಯ ತೀರ್ಮಾನಕ್ಕೆ ಬರುತ್ತಾರೆ ಎಂಬ ಭರವಸೆ ನನ್ನಲ್ಲಿದೆ. ಹಾಗೆಯೇ, ನಾನು ಕೂಡ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಅಂಗನವಾಡಿ ಕಾರ್ಯಕರ್ತೆಯರು ನಮ್ಮ ಮಕ್ಕಳನ್ನ ನೋಡಿಕೊಳ್ಳುವವರು. ಅವರ ಹೋರಾಟಕ್ಕೆ ನಮ್ಮ ಬೆಂಬಲವೂ ಕೂಡ ಇದೆ” ಎಂದು ತಿಳಿಸಿದರು.