- ಹಸಿವು, ಕಾಯುವಿಕೆ ಮತ್ತು ಕನಸುಗಾರಿಕೆ ಜೀವನದ ಪ್ರಕ್ರಿಯೆಗಳು
- ಸಾಹಿತ್ಯದಿಂದ ಹೊಸ ಅನುಭವ ಚಿಂತನೆ ಹುಟ್ಟಲು ಸಾಧ್ಯ
ಹಸಿವು, ಕಾಯುವಿಕೆ ಮತ್ತು ಕನಸುಗಾರಿಕೆ ಈ ಮೂರು ಅಂಶಗಳು ಬದುಕಿನ ಬಹುದೊಡ್ಡ ಪ್ರಕ್ರಿಯೆಗಳಾಗಿವೆ. ಈ ಮೂರು ಅಂಶಗಳು ಯಾರಿಗೂ ಬಿಟ್ಟಿಲ್ಲ. ಹಸಿವು, ಕನಸು, ಕಾಯುವಿಕೆ, ಸಹನೆ ಭವಿಷ್ಯ ಮತ್ತು ಆತ್ಮವಿಶ್ವಾಸದ ಸೂಚಕವಾಗಿವೆ ಎಂದು ಕಲಬುರಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಅಧ್ಯಯನಾಂಗದ ನಿರ್ದೇಶಕ ಪ್ರೊ. ಬಸವರಾಜ ಡೋಣುರ ಅಭಿಪ್ರಾಯಪಟ್ಟರು.
ಬಸವಕಲ್ಯಾಣದ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಉಪನ್ಯಾಸ ಸರಣಿಯಲ್ಲಿ ಮಾತನಾಡಿದ ಅವರು, “ಇಂದು ಕನಸು ಕಾಣುವುದನ್ನು ನಿಲ್ಲಿಸಿದ್ದೇವೆ. ನಮ್ಮ ವ್ಯಕ್ತಿತ್ವ ರೂಪಿಸುವ ಕನಸು ನಮ್ಮಲ್ಲಿರಬೇಕು. ಕನಸಿನ ಬಗ್ಗೆ ಮಾತನಾಡುವ ಜನ ಈ ಕಾಲದಲ್ಲಿ ಕಡಿಮೆಯಾಗಿದ್ದಾರೆ. ಕನಸಿನಲ್ಲಿ ನಮ್ಮ ಭವಿಷ್ಯ, ವರ್ತಮಾನ ಮತ್ತು ಹಿಂದಿನ ಬದುಕಿನ ಛಾಯೆ ಕೂಡ ಅಡಗಿದೆ. ಕನಸುಗಾರಿಕೆ ಎಂಬುದು ಅದ್ಭುತವಾದ ಆತ್ಮವಿಶ್ವಾಸವಾಗಿದೆ. ಯಾರು ನನ್ನನ್ನು ಸೋಲಿಸಲಾಗದು. ಗೆಲುವಿಗಾಗಿಯೇ ಇರುವ ಆತ್ಮವಿಶ್ವಾಸ ಕನಸಾಗಿದೆ” ಎಂದರು.
“ಸಾಹಿತ್ಯದಿಂದ ಬದುಕಿನಲ್ಲಿ ನೆಮ್ಮದಿಯನ್ನು ಪಡೆಯುತ್ತೇವೆ. ಬೇರಾವ ವಿಷಯಗಳು ಉಂಟುಮಾಡದ ಹೊಸ ಅನುಭವ ಹೊಸ ಚಿಂತನೆ ಸಾಹಿತ್ಯದಿಂದ ಸಾಧ್ಯ. ಸಾಹಿತ್ಯದ ಓದು ವಿಶ್ವಾಸ ಹುಟ್ಟಿಸುತ್ತದೆ. ಕನಸು ಕಾಣಲು ಹಚ್ಚುವ ಶಕ್ತಿ ಸಾಹಿತ್ಯಕ್ಕಿದೆ. ಕಾಯುವ ಪ್ರಕ್ರಿಯೆ ಇಡೀ ಬದುಕನ್ನೇ ಆವರಿಸಿದೆ. ಮನುಷ್ಯ ಹಲವು ಸಂಗತಿಗಳನ್ನು ಜೀವನದಲ್ಲಿ ಕಾಯುವುದು ಒಂದು ಸಹಜ ಪ್ರಕ್ರಿಯೆಯಾಗಿದೆ. ಜೀವನ ಅಂದರೆ ಕಾಯುವುದು. ಹಸಿವು, ಕಾಯುವಿಕೆ, ಕನಸಿನ ಸಂದರ್ಭದಲ್ಲಿ ಸಹನೆ ಕ್ರಿಯಾತ್ಮಕವಾಗಿರುತ್ತದೆ. ಸಹನೆ ಇದ್ದರೇನೇ ಏನನ್ನಾದರು ಸಾಧಿಸಲು ಸಾಧ್ಯವಿದೆ. ಟಾಲ್ ಸ್ಟಾಯ್, ಓ ಹೆನ್ರಿ, ಶೇಕ್ಸಪೀಯರ್, ಕುವೆಂಪು, ಬೇಂದ್ರೆ, ಕಾರ್ನಾಡ್ ಮೊದಲಾದವರ ಬರಹದ ಮೂಲಕ ಭಾಷೆಯನ್ನು ಬೆಳೆಸಿಕೊಂಡಿದ್ದೇವೆ. ಅವರೆಲ್ಲರೂ ಸೇರಿ ಹಸಿವು, ಕನಸು, ಕಾಯುವಿಕೆ ಮತ್ತು ಸಹನೆಯ ಕುರಿತು ಗಾಢವಾಗಿ ಬರೆದಿದ್ದಾರೆ” ಎಂದು ಹೇಳಿದರು.
ಮುಡಬಿ ಗ್ರಾ.ಪಂ. ಪಿಡಿಓ ಪ್ರಭು ಬಿರಾದಾರ ಅವರು ‘ಜೈವಿಕ ತಂತ್ರಜ್ಞಾನದ ಸಾಧ್ಯತೆಗಳು’ ಕುರಿತು ಮಾತನಾಡಿ, “ನಮ್ಮ ಜಗತ್ತನ್ನು ಆವರಿಸಿದ ಅನೇಕ ಸೂಕ್ಷ್ಮ ಜೀವಿಗಳ ಇರುವಿಕೆ, ಅವುಗಳ ಕ್ಷಮತೆ, ಕಾರ್ಯನಿರ್ವಹಣೆ ಕುರಿತು ಆಳದ ಅಧ್ಯಯನ ಜೈವಿಕ ತಂತ್ರಜ್ಞಾನದಲ್ಲಿ ಸಾಧ್ಯವಿದೆ” ಎಂದರು.
ಈ ಸುದ್ದಿ ಓದಿದ್ದೀರಾ ? ಕಲಬುರಗಿ | 6 ವರ್ಷದ ಬಾಲಕಿ ಮೇಲೆ 75 ವರ್ಷ ವೃದ್ಧನಿಂದ ಲೈಂಗಿಕ ದೌರ್ಜನ್ಯ; ಆರೋಪಿ ಬಂಧನ
ಕಾರ್ಯಕ್ರಮದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶ್ರೀಕಾಂತ ಬಡದಾಳೆ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಡಾ. ಮಲ್ಲಿಕಾರ್ಜುನ ಲಕ್ಕಶೆಟ್ಟಿ, ಶ್ರೀ ಬಸವೇಶ್ವರ ಸ್ನಾತಕೋತ್ತರ ಕೇಂದ್ರದ ಮುಖ್ಯಸ್ಥೆ ಶಾಂತಲಾ ಪಾಟೀಲ, ಡಾ ಬಸವರಾಜ ಖಂಡಾಳೆ, ಶ್ರೀನಿವಾಸ ಉಮಾಪುರೆ, ಶಾಂತಲಿಂಗ ಧಬಾಲೆ, ಸಚಿನ್ ಬಿಡವೆ, ವಿವೇಕಾನಂದ ಶಿಂದೆ, ಅಶೋಕ ರೆಡ್ಡಿ , ಪ್ರಶಾಂತ ಬುಡಗೆ ಮುಂತಾದವರಿದ್ದರು. ಸಂಸ್ಥೆಯ ಆಡಳಿತಾಧಿಕಾರಿ ಡಾ. ಮಲ್ಲಿಕಾರ್ಜುನ ಲಕ್ಕಶೆಟ್ಟಿ ಸ್ವಾಗತಿಸಿದರು. ಡಾ. ಬಸವರಾಜ ಖಂಡಾಳೆ ನಿರೂಪಿಸಿದರು. ಕಾಲೇಜು ಪ್ರಾಚಾರ್ಯ ಡಾ. ಭೀಮಾಶಂಕರ ಬಿರಾದಾರ ವಂದಿಸಿದರು.