ಕೊಡಗಿನ ಬುಡಕಟ್ಟು, ಆದಿವಾಸಿ ಜನಾಂಗದ ನಿವಾಸಿಗಳ ಜೊತೆ ನಾವಿರುತ್ತೇವೆ ಎಂದು ಮಾನವೀಯತೆ ಚಾರಿಟಬಲ್ ಟ್ರಸ್ಟ್‌ನ ಶಿವಕುಮಾರ್ ಹೂಟಗಳ್ಳಿ ಹೇಳಿದರು.
ಟ್ರಸ್ಟ್‌ನ ಕಾನೂನು ಘಟಕದ ಮುಖ್ಯಸ್ಥೆ ಮೊನಾಲಿಸಾ ಪಟ್ಟಡ ಅವರ ತಂಡದೊಂದಿಗೆ ರಂಗ ಸಮುದ್ರದ ನಂಜರಾಯಪಟ್ಟಣ ಕುಶಾಲನಗರದ ಕಟ್ಟೆಹಾಡಿ ಆದಿವಾಸಿ ಸಮುದಾಯಗಳ ಸಮಸ್ಯೆಗಳ ಹಾಗೂ ಕುಂದು ಕೊರತೆಗಳ ಬಗ್ಗೆ ಆದಿವಾಸಿ ಮುಖಂಡ, ಅರಣ್ಯ ಸಮಿತಿಯ ಅಧ್ಯಕ್ಷ ಮತ್ತು ಆದಿವಾಸಿ ಬುಡಕಟ್ಟು ಜನಾಂಗದ ನಿವಾಸಿಗಳೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಕಟ್ಟೆಹಾಡಿ ಮಾತ್ರವಲ್ಲ ಕೊಡಗಿನ ಬುಡಕಟ್ಟು ಜನಾಂಗದ ಜನರೊಂದಿಗೆ ನಾವು ಇರುತ್ತೇವೆ. ಕರ್ನಾಟಕದ ಯಾವುದೇ ಮೂಲೆಯಲ್ಲಿದ್ದರೂ ಸಹಾಯ ಮಾಡುತ್ತೇವೆ. ನೊಂದವರ ಪರ ನಿಂತು ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ. ನಾವು ಯಾವುದೇ ರಾಜಕೀಯ ಪಾರ್ಟಿಗೆ ಸೇರಿದವರಲ್ಲ. ಶಾಸಕ ಮಂತರಗೌಡ ಅವರೊಂದಿಗೆ ಮಾತನಾಡುತ್ತೇನೆ. ಶಾಸಕರೊಂದಿಗೆ ಕಳೆದ ಬಾರಿ ಕಟ್ಟೆಹಾಡಿಗೆ ಭೇಟಿ ನೀಡಿದಾಗ ಉತ್ತಮವಾಗಿ ಸ್ಪಂದಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಕೆಲವು ಹಾಡಿಗಳಿಗೂ ಭೇಟಿ ನೀಡಿದ್ದರು. ಐಟಿಡಿಪಿ ಇಲಾಖೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ಶಾಸಕರು ಎಲ್ಲಾ ಹಾಡಿಗಳಿಗೂ ಭೇಟಿ ನೀಡಬೇಕು ಶಾಸಕರ ಮಾತು ಕೇಳದ ಅಧಿಕಾರಿಗಳಿಗೆ ನಾವು ಕಾನೂನು ಪಾಠ ಕಲಿಸೋಣ” ಎಂದು ಹೂಟಗಳ್ಳಿ ತಿಳಿಸಿದರು.
ಹಾಡಿ ಜನರು ಮಾತನಾಡಿ, “ಇಲ್ಲಿ ನಮಗೆ ಯಾವುದೇ ರೀತಿಯ ರಕ್ಷಣೆ ಇಲ್ಲ ಹಾಗೂ ಹೆಣ್ಣು ಮಕ್ಕಳಿಗೆ ತೊಂದರೆಯಾದಾಗ ನಾವು ಪೊಲೀಸ್ ಸ್ಟೇಷನ್‌ಗೆ ತೆರಳಿ ದೂರು ನೀಡಿದರೂ ನಮ್ಮ ದೂರನ್ನು ತೆಗೆದುಕೊಳ್ಳಲು ಹಿಂದೇಟು ಹಾಕುತ್ತಾರೆ. ಕಳೆದ 10 ವರ್ಷಗಳಿಂದ ಅರಣ್ಯ ಅಧಿಕಾರಿಗಳೂ ಸೇರಿದಂತೆ ಯಾವೊಬ್ಬ ಅಧಿಕಾರಿಯೂ ಕೂಡ ಈ ಬುಡಕಟ್ಟಿನ ಕಡೆ ಮುಖ ಹಾಕಿಲ್ಲ. ಆನೆ ದಾಳಿಯ ಭೀತಿಯಿಂದ ಜೀವನ ನಡೆಸುವಂತಾಗಿದೆ. ಕಾಡು ಪ್ರಾಣಿಗಳಿಂದ ರಕ್ಷಣೆ ನೀಡಬೇಕಿರುವ ಆಡಳಿತ ವ್ಯವಸ್ಥೆ ತಮಗೂ ಅದಕ್ಕೂ ಸಂಬಂಧವಿಲ್ಲದಂತೆ ವರ್ತಿಸುತ್ತಿದೆ. ಕಡೆಪಕ್ಷ ಇಲ್ಲಿ ಹೆಣ್ಣುಮಕ್ಕಳಿಗೆ ಶೌಚಾಲಯ ಕೂಡ ಇಲ್ಲ” ಎಂದು ಅಳಲು ತೋಡಿಕೊಂಡರು.
ಕಾನೂನು ಘಟಕದ ಮುಖ್ಯಸ್ಥೆ ಲಾಯರ್ ಮೊನಾಲಿಸಾ ಪಟ್ಟಡ ಮಾತನಾಡಿ, “ಕೊಡಗಿನ ಪೊಲೀಸ್ ಇಲಾಖೆ ಇನ್ನಾದರೂ ನಿದ್ದೆಯಿಂದ ಎದ್ದೇಳಬೇಕಾಗಿದೆ. ಕಟ್ಟೆಹಾಡಿ ಜನರಿಗೆ ರಕ್ಷಣೆ ನೀಡಬೇಕು ಹಾಗೂ ತಮಗೆ ಆದ ಅನ್ಯಾಯದ ವಿರುದ್ಧ ದೂರು ಕೊಟ್ಟರೂ ತೆಗೆದು ಕೊಳ್ಳದೆ ನಿರ್ಲಕ್ಷ್ಯ ತೋರಿದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು. ಜಿಲ್ಲೆಯ ಎಸ್.ಪಿ ಈ ಕೂಡಲೇ ಕಡು ಬಡತನದಲ್ಲಿ ಜೀವನ ನಡೆಸುತ್ತಿರುವ ಕಟ್ಟೆಹಾಡಿ ನಿವಾಸಿಗಳೊಂದಿಗೆ ಮುಕ್ತವಾಗಿ ಚರ್ಚೆ ನಡೆಸಿ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಹಾಗೂ ಕಟ್ಟೆ ಹಾಡಿಗೆ ಭೇಟಿ ನೀಡಬೇಕು ಮತ್ತು ಮಾದಕವಸ್ತುಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕು” ಎಂದು ತಿಳಿಸಿದರು.
ಇದನ್ನೂ ಓದಿ: ಕೊಡಗು | ಬಜೆಟ್ ಟೀಕಿಸಿದ ಮಾಜಿ ಶಾಸಕರು ; ಬಹಿರಂಗ ಚರ್ಚೆಗೆ ಬರುವಂತೆ ಸವಾಲ್
ಈ ವೇಳೆ ಕೊಡಗು ಉಸ್ತುವಾರಿ ಹಾಗೂ ಖಜಾಂಚಿ ಏಳನೇ ಹೋಸಕೋಟೆಯ ಸೌಮ್ಯಶ್ರೀ, ಮುಖಂಡ ಆರ್.ಕೆ ಚಂದ್ರು, ಕಟ್ಟೆಹಾಡಿ ಅರಣ್ಯ ಸಮಿತಿಯ ಅಧ್ಯಕ್ಷ ಅಪ್ಪು ಹಾಜರಿದ್ದರು.
