ಬೆಂಗಳೂರು ಮತ್ತು ರಾಜ್ಯದ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಸದ್ಯದಲ್ಲೇ ಮುಂಗಾರುಪೂರ್ವ ಮಳೆ ಬೀಳುವ ಸೂಚನೆಗಳಿವೆ ಎಂದು ಹವಾಮಾನ ಇಲಾಖೆ ಹೇಳಿದೆ.
ಕೊಡಗು, ಹಾಸನ, ಮೈಸೂರು ಕೋಲಾರ ಹಾಗೂ ಬೆಂಗಳೂರು ಜಿಲ್ಲೆಗಳಲ್ಲಿ ಗುಡುಗು ಮತ್ತು ಗಾಳಿಯಿಂದ ಕೂಡಿದ ಲಘು- ಸಾಧಾರಣ ಮಳೆ ಬೀಳುವ ಸಂಭವ ಇದೆ. ಈ ಸಲ ಧಗೆ ಮತ್ತು ಶುಷ್ಕ ಹವೆ ಕಾಲಕ್ಕೆ ಮುನ್ನವೇ ಕಾಲಿಟ್ಟಿದೆ. ಈಗಾಗಲೆ 34 ಡಿಗ್ರಿಗಳನ್ನು ದಾಟಿರುವ ಉಷ್ಣಾಂಶ, ಕೆಲ ದಿನಗಳ ಮಟ್ಟಿಗಾದರೂ ತಣಿಯಲಿದೆ.
ಹಿಂದೂ ಮಹಾಸಾಗರದ ಈಶಾನ್ಯ ಮತ್ತು ಬಂಗಾಳಕೊಲ್ಲಿಯ ವಾಯುವ್ಯ ಭಾಗಗಳಲ್ಲಿ ಎತ್ತರ ವಾಯು ಚಕ್ರವಾತ ಸಂಚಾರ ವಾತಾವರಣದ ಕಾರಣ ರಾಜ್ಯದ ದಕ್ಷಿಣ ಜಿಲ್ಲೆಗಳಲ್ಲಿ ಮಾರ್ಚ್ 10ರಿಂದ 13ರವರೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆಯೆಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಕೂಳೂರು ರಸ್ತೆ ಹೋರಾಟಗಾರರ ಮೇಲಿನ ಕಾವೂರು ಪೊಲೀಸರ ಎಫ್ಐಆರ್‌ಗೆ ಹೈಕೋರ್ಟ್ ತಡೆಯಾಜ್ಞೆ
ಬೆಂಗಳೂರು, ಕೋಲಾರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು ಹಾಗೂ ಹಾಸನದಲ್ಲಿ ಗುಡುಗು-ಗಾಳಿಯಿಂದ ಕೂಡಿದ ಮಳೆ ಬೀಳಲಿದೆ.
ಮುಂದಿನ ಕೆಲವು ವಾರಗಳ ಕಾಲ ಬೆಂಗಳೂರಿನ ಹವಾಮಾನ ಕೂಡ ಆಹ್ಲಾದಕರ ಆದೀತು. ಮೋಡ ತುಂಬಿದ ವಾತಾವರಣವು ಹಗಲನ್ನು ತಂಪಾಗಿಸುವ ಮತ್ತು ರಾತ್ರಿಗಳನ್ನು ಎಂದಿಗಿಂತ ತುಸು ಬಿಸಿಯಾಗಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.