ಕೊಪ್ಪಳ ಜಿಲ್ಲೆ ‘ಜೈನ ಕಾಶಿ’ ಎಂದೇ ಕರೆಸಿಕೊಂಡಿದೆ. ಕರ್ನಾಟಕದ ಭತ್ತದ ಕಣಜವಾಗಿ ಗವಿಸಿದ್ದೇಶ್ವರಮಠ ಐತಿಹಾಸಿಕವಾಗಿ ಭಾವೈಕ್ಯತೆಯ ಮಠವಾಗಿದೆ. ಆದರೆ, ಜಿಲ್ಲೆಯಾಗಿ ಉಗಮವಾದಾಗಿನಿಂದಲೂ ಅಭಿವೃದ್ಧಿಯಲ್ಲಿ ಸಾಕಷ್ಟು ಹಿಂದುಳಿದ ಜಿಲ್ಲೆಯಾಗಿದೆ. ಸರ್ಕಾರಗಳು ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಹೆಸರಲ್ಲಿ ಬೃಹತ್ ಕೈಗಾರಿಕಾ ಕಾರ್ಖಾನೆಗಳನ್ನು ಸ್ಥಾಪಿಸುತ್ತಿವೆ. ಅದಕ್ಕಾಗಿ ಯುವಕರಿಗೆ ಉದ್ಯೋಗದ ಆಮಿಷವೊಡ್ಡಿ ರೈತರ ಸಾವಿರಾರು ಎಕರೆ ಭೂಮಿಯನ್ನು ಕಡಿಮೆ ದರಕ್ಕೆ ಖರೀದಿಸುತ್ತಿವೆ. ಆದರೆ, ಅದರ ಲಾಭ ಸಿಕ್ಕಿದ್ದು ಯಾರಿಗೆ? ನಷ್ಟ ತಟ್ಟಿದ್ದು ಯಾರಿಗೆ ಎಂಬ ಪ್ರಶ್ನೆ ಕಾಡುತ್ತಿದೆ.
ಕೊಪ್ಪಳ ಐತಿಹಾಸಿಕವಾಗಿ ಎಷ್ಟು ಪ್ರಸಿದ್ಧವೋ ಅಷ್ಟೇ ಪ್ರಮಾಣದಲ್ಲಿ ಕೈಗಾರಿಕಾ ಕಾರ್ಖಾನೆಗಳಿಗೂ ಪ್ರಸಿದ್ದವಾಗಿದ್ದು, ಕೈಗಾರಿಕೆಗಳು ಕೆಲವೇ ಕಿಮೀ ದೂರದಲ್ಲಿವೆ. ಅದರೆ, ಇದರಿಂದ ಅಲ್ಲಿಯ ನಾಗರಿಕರಿಗೆ ಅನುಕೂಲವಾಗಿರುವುದಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ. ‘ಒಂದು ಕೈಗಾರಿಕಾ ಕಾರ್ಖಾನೆ ತೆರೆದರೆ ಒಂದು ಊರಿಗೆ ಉಚಿತ ಖಾಯಿಲೆ’ ಎಂಬಂತಿದೆ. ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಸರ್ಕಾರಗಳು ಅನೇಕ ರೀತಿಯ ಆರೋಗ್ಯಕರ ಯೋಜನೆಗಳನ್ನು ಜಾರಿಗೆ ತಂದರೆ, ಕೊಪ್ಪಳಕ್ಕೆ ಉದ್ಯೋಗ ಸೃಷ್ಟಿ ಹಾಗೂ ಅಭಿವೃದ್ಧಿಯ ಹೆಸರಲ್ಲಿ ‘ಖಾಯಿಲೆ’ಗಳ ಯೋಜನೆಯನ್ನು, ಕೊಡುಗೆ ಕೊಡುತ್ತಿವೆ.
ಜಿಲ್ಲೆಯ ಹಾಗೂ ತಾಲೂಕಿನ ಗಿಣಿಗೇರಿ, ಅಲ್ಲಾನಗರ, ಹಿರೇಬಣಗಾಳ, ಚಿಕ್ಕಬಣಗಾಳ, ಹಾಲವರ್ತಿ, ಕನಕಾಪುರ, ಕಿಡದಾಳ, ಬೇವಿನಹಳ್ಳಿ, ಹಿರೇಕಾಸನಕಿಂಡಿ, ಕುಣಿಕೇರಿ ಮತ್ತು ತಾಂಡಾ ಸೇರಿದಂತೆ ಕೊಪ್ಪಳ ಕೂಗಳತೆಯ ದೂರದಲ್ಲಿ ಸುಮಾರು 50 ಸ್ಪಾಂಜ್ ಕಬ್ಬಿಣ, ಉಕ್ಕು, ಸಿಮೆಂಟ್, ರಾಸಾಯನಿಕ ಗೊಬ್ಬರ ಇತರೆ ಉತ್ಪನ್ನಗಳನ್ನು ತಯಾರಿಸುವ ಬೃಹತ್ ಕಾರ್ಖಾನೆಗಳು ಸ್ಥಾಪನೆಯಾಗಿವೆ. ಹಲವು ಕಾರ್ಖಾನೆಗಳು ನಿಯಮಗಳನ್ನು ಉಲ್ಲಂಘಿಸಿ ಪರಿಸರ ಮಾಲಿನ್ಯ ಉಂಟುಮಾಡುತ್ತಿವೆ. ಧೂಳು, ಹೊಗೆ ಹಾಗೂ ತ್ಯಾಜ್ಯನೀರನ್ನು ಸಂಸ್ಕರಿಸದೇ ಹೊರ ಬಿಡುತ್ತಿದ್ದಾರೆ. ಇದು ಜನರ ಆರೋಗ್ಯಕ್ಕೆ ಕುತ್ತು ಉಂಟಾಗಿ ಅಸ್ತಮಾ, ಟಿಬಿ, ಹೃದಯ ರೋಗ, ಕರಳು ಬೇನೆ ಖಾಯಿಲೆಗೆ ತುತ್ತಾಗುತ್ತಿದ್ದಾರೆ. ಅಲ್ಲದೆ ಧೂಳು, ಹೊಗೆಯಿಂದ ಸೂಸುವ ಕಪ್ಪು ಮಸಿಯಿಂದ ಕೃಷಿ ಬೆಳೆಗಳೂ ಕೂಡಾ ಹಾನಿಗೊಳಗಾಗುತ್ತಿವೆ. ಜಾನುವಾರುಗಳು ಮತ್ತದೇ ಮೇವು ಸೇವಿಸಿಸುತ್ತಿವೆ.
ಈ ಸುದ್ದಿ ಓದಿದ್ದೀರಾ? ಕೊಪ್ಪಳವನ್ನು ಜಪಾನ್ ಮಾಡುವುದು ಬೇಡ, ಜೋಪಾನ ಮಾಡಿ ಸಾಕು: ಗವಿಸಿದ್ದ ಸ್ವಾಮೀಜಿ
ಇಂಥ ದಾರಣ ಪರಿಸ್ಥಿತಿ ಇರುವಾಗಲೇ ಬಲ್ಡೋಟಾ ಮಾಲೀಕತ್ವದ ಎಂಎಸ್‌ಪಿಎಲ್, ಬಿಎಸ್‌ಪಿಎಲ್ ಹೆಸರಿನಲ್ಲಿ ಬೃಹತ್ ಉಕ್ಕಿನ ಕಾರ್ಖಾನೆಯ ವಿಸ್ತರಣೆ ಕೊಪ್ಪಳ ಜಿಲ್ಲೆಯ ನಾಗರಿಕರಲ್ಲಿ ಆತಂಕ ಸೃಷ್ಟಿಸಿದೆ. ಕಾರ್ಖಾನೆಯ ಒಂದು ಚಿಮಣಿಯಿಂದ ಸೂಸುವ ಹೊಗೆ, ಧೂಳು ಕೊಪ್ಪಳ ನಗರವನ್ನಷ್ಟೇ ಅಲ್ಲದೆ ಸುತ್ತಲ ಗ್ರಾಮಗಳನ್ನೂ ಆವರಿಸಿದೆ. 25-30 ವರ್ಷಗಳಿಂದ ಸ್ಥಾಪನೆಯಾಗಿರುವ ಘಟಕಗಳನ್ನು ಮುಚ್ಚಲು ಜಿಲ್ಲೆಯ ನಾಗರಿಕರು ಒತ್ತಡ ಹಾಕುತ್ತಿದ್ದಾರೆ. ಆದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳದಿರುವುದು ನೋವಿನ ಸಂಗತಿ.
ಬೃಹತ್ ಕೈಗಾರಿಕಾ ಕರ್ಖಾನೆಗಳಿಂದ ಯಾರಿಗೆ ಲಾಭ, ಯಾರಿಗೆ ನಷ್ಟ
ಕೈಗಾರಿಕಾ ಕಾರ್ಖಾನೆಗಳು ಸ್ಥಾಪನೆಯಾಗುವುದರಿಂದ ಉದ್ಯೋಗವೇನೋ ಸೃಷ್ಟಿಯಾಗುತ್ತವೆ. ಆದರೆ, ಸ್ಥಳೀಯವಾಗಿ ಎಷ್ಟು ನಿರುದ್ಯೋಗ ಯುವಕರಿಗೆ ಕಂಪೆನಿಗಳು ಕೆಲಸ ಕೊಟ್ಟಿವೆ?, ಸ್ಥಳೀಯ ಉದ್ಯೋಗಿಗಳಿಗೆ ಸಂಬಳವೆಷ್ಟು ಕೊಡುತ್ತಿದ್ದಾರೆ ಎಂಬ ಪ್ರಶ್ನೆ ಮುನ್ನಲೆಗೆ ಬರುತ್ತದೆ. ಗಿಣಿಗೇರಿ, ಅಲ್ಲಾನಗರ, ಹಿರೇಬಗನಾಳ, ಚಿಕ್ಕಬಗನಾಳ ಸುತ್ತಮುತ್ತಲೂ 30-35 ಕೈಗಾರಿಕಾ ಕಾರ್ಖಾನೆಗಳಿವೆ. ಈ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಎಷ್ಟು ದೊರೆತಿವೆ? ಪ್ರತಿ ಕಾರ್ಖಾನೆಗಳಲ್ಲಿ ಸ್ಥಳೀಯರನ್ನು ಗುತ್ತಿಗೆ ಆಧಾರದಲ್ಲಿ ಕಡಿಮೆ ₹13,000 ಸಂಬಳಕ್ಕೆ ದುಡಿಸಿಕೊಳ್ಳುತ್ತಾರೆ. ಹೊರರಾಜ್ಯದ ಉದ್ಯೋಗಿಗಳಿಗೆ ₹60,000ದಿಂದ ಲಕ್ಷದವರೆಗೂ ಹೆಚ್ವಿನ ಸಂಬಳ ಕೊಟ್ಟು ಖಾಯಂ ಉದ್ಯೋಗಿಗಳಾಗಿ ಮಾಡಿಕೊಂಡಿದ್ದಾರೆ. ‘ಭೂಮಿ ಕೊಟ್ಟವರ ಮಕ್ಕಳಿಗೂ ಕಾಯಂ ನೌಕರಿ ಇಲ್ಲ’ವೆಂದು ತಿಳಿದುಬಂದಿದೆ. ಕಾರ್ಖಾನೆಯ ಮಾಲೀಕರು ಶ್ರೀಮಂತಗೊಳ್ಳುತ್ತಿದ್ದಾರೆ. ಭೂಮಿ ಕೊಟ್ಟ ರೈತರು ಬೀದಿಗೆ ಬಂದಿದ್ದಾರೆ.
ಕಾರ್ಖಾನೆಗಳಿಗೆ ಕೊಪ್ಪಳ ಜನರ ವಿರೋಧ ಯಾಕೆ?
ಪ್ರಗತಿಪರರು, ಪರಿಸರವಾದಿಗಳು, ವೈದ್ಯರು, ಮಠಾಧೀಶರು, ಕೈಗಾರಿಕಾ ಕಂಪನಿಗಳನ್ನು ವಿರೋಧ ಮಾಡುತ್ತಿರುವುದು ಯಾಕೆಂಬ ಸಹಜ ಪ್ರಶ್ನೆ ಕಾಡುತ್ತದೆ. ಕೊಪ್ಪಳ ಭಾಗದ ಜನ ಈಗಾಗಲೇ ಇಂತಹ ಕಾರ್ಖಾನೆಗಳು ಸೂಸುವ ಹೊಗೆ, ಧೂಳಿನಿಂದ ತತ್ತರಿಸಿ ಅನಾರೋಗ್ಯಕ್ಕೆ ಈಡಾಗಿದ್ದಾರೆ. ದೊಡ್ಡಮಟ್ಟದ ಹಾನಿಯನ್ನೂ ಅನುಭವಿಸಿದ್ದಾರೆ. ಆ ಕೆಟ್ಟ ಅನುಭವವೇ ಕಾರ್ಖಾನೆಗಳ ಸ್ಥಾಪನೆಯ ವಿರೋಧಕ್ಕೆ ಮುಖ್ಯ ಕಾರಣವಾಗಿದೆ.
ಕಾರ್ಖಾನೆಗಳು ಜನವಸತಿ ಪ್ರದೇಶದಿಂದ ಸಾಕಷ್ಟು ದೂರ ಇರಬೇಕೆಂಬ ನಿಯಮವಿದೆ. ಕೈಗಾರಿಕಾ ಕಾರ್ಖಾನೆಗಳಿಂದ ಜನರಿಗೆ ಯಾವುದೇ ದುಷ್ಪರಿಣಾಮ ಆಗಬಾರದು ಎಂಬ ಕಾಯ್ದೆ ಇದ್ದರೂ, ಹಲವೆಡೆ ನಿಯಮ ಉಲ್ಲಂಘಿಸಿ ಕಾರ್ಖಾನೆಗಳು ಕೆಲಸ ನಿರ್ವಹಿಸುತ್ತಿವೆ ಎಂಬ ಆರೋಪ ಕೇಳಿಬರುತ್ತಿದೆ.
ಕಾರ್ಖಾನೆಗಳಿಂದ ಸಿಕ್ಕ ಉಚಿತ ಕೊಡುಗೆ ರೋಗ ಭಾಗ್ಯ
ರೈತರು ಕೈಗಾರಿಕಾ ಕಾರ್ಖಾನೆಗಳಿಗೆ ಸಾವಿರಾರು ಎಕರೆ ಭೂಮಿ ಕೊಟ್ಟು ರೋಗವನ್ನು ಬಳುವಳಿಯಾಗಿ ಪಡೆದಂತಾಗಿದೆ. ಕಾರ್ಖಾನೆಯ ಧೂಳು, ಕಪ್ಪು ಹೊಗೆಯಿಂದ ಜನರಲ್ಲಿ ದಮ್ಮು, ಕೆಮ್ಮು, ಅಸ್ತಮಾ, ಕ್ಯಾನ್ಸರ್, ಹೃದಯ ಕಾಯಿಲೆ, ನಪುಂಸಕತೆ, ಮಹಿಳೆಯರ ಗರ್ಭದಲ್ಲಿ ಶಿಶು ಬೆಳವಣಿಗೆ ಕುಂಠಿತ, ಇರಳುಗಣ್ಣು, ಹೀಗೆ ಅನೇಕ ರೋಗಗಳಿಗೆ ತುತ್ತಾಗಿ ಒಂದು ಸಣ್ಣ ಗ್ರಾಮದಲ್ಲಿ ಶೇ.22ರಷ್ಟು ಮಂದಿ ಖಾಯಿಲೆಯಿಂದ ನರಳುತ್ತಿರುವುದು ಕಂಡುಬರುತ್ತದೆ.
ಸ್ಥಳೀಯರು ಮತ್ತು ವೈದ್ಯೆರು ಹೇಳುವುದೇನು?
9ನೇ ತರಗತಿ ವಿದ್ಯಾರ್ಥಿನಿ ಮಾತನಾಡಿ, “ನಮ್ಮ ಶಾಲೆಯಲ್ಲಿ ಕಪ್ಪು ಬೋರ್ಡಿನ ಮೇಲೆಯೇ ಧೂಳು ಅಂಟಿರುತ್ತದೆ. ಟೀಚರ್, ಬೋರ್ಡ್ ಮೇಲೆ ಬರೆಯಲು ಹೋದರೆ ಕಪ್ಪು ಇಲಾಣು(ಮಸಿ)ಹತ್ತಿರುತ್ತದೆ. ನನ್ನದೇ ಉದಾಹರಣೆ ತೆಗೆದುಕೊಂಡರೆ ‘ನನಗೆ ಉಸಿರಾಟದ ತೊಂದರೆಯಾಗಿ ಡಾಕ್ಟರ್ ಬಳಿ ಹೋದ್ರೆ, ಅಸ್ತಮಾ ಖಾಯಿಲೆ ಇದು ಅಂತ ಹೇಳಿದರು. ನಾನೂ ಕೂಡಾ ಎಲ್ಲರಂತೆ ಫ್ರೆಂಡ್ಸ್ ಜತೆ ಆಟ ಆಡಲು ಹೋದರೆ ಕೆಮ್ಮು, ತೇಕು, ಉಸಿರಾಟಕ್ಕೆ ತೊಂದರೆ ಆಗುತ್ತದೆ. ಈಗ ಔಷಧಿ ತೆಗೆದುಕೊಳ್ಳಲು ರೊಕ್ಕ ಇಲ್ಲ ಅಂತ ನಮ್ಮಪ್ಪ ಔಷಧಿ ತಂದುಕೊಡೋದು ಬಿಟ್ಟಿದ್ದಾರೆ” ಎಂದು ದುಃಖಿತಳಾದಳು.
ವೈದ್ಯ ಡಾ. ರಾಜಶೇಖರ್ ನಾರನಾಳ ಮಾತನಾಡಿ, “ಜಾಗತೀಕರಣದ ಭರಾಟೆಯಲ್ಲಿ ಕೈಗಾರಿಕಾ ಕಾರ್ಖಾನೆಗಳನ್ನು ಸ್ಥಾಪಿಸುವುದರಿಂದ ನೆಲ, ಜಲ ಮತ್ತು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಕೊಪ್ಪಳದ ಸುತ್ತಮುತ್ತ 30 ಸ್ಪಂಜ್ ಐರನ್ ಸ್ಟೀಲ್ ಘಟಕಗಳಿವೆ; 170 ವಿವಿಧ ಕೈಗಾರಿಕಾ ಘಟಕಗಳಿವೆ. ಕೊಪ್ಪಳ ಈಗಾಗಲೇ ಉಸಿರಾಡಲು ಯೋಗ್ಯವಲ್ಲದ ಗಾಳಿ ಹೊಂದಿದೆ. ಕಾರ್ಖಾನೆಯಿಂದ ಸೂಸುವ ಹೊಗೆಯಿಂದ ಜನರ ಶರೀರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅಸ್ತಮಾ, ಮಹಿಳೆಯರಲ್ಲಿ ಅವಧಿಪೂರ್ವ ಶಿಶು ಜನನ, ಕ್ಯಾನ್ಸರ್, ಖಿನ್ನತೆ, ಚರ್ಮದ ಖಾಯಿಲೆ ಸೇರಿದಂತೆ ಮುಂತಾದ ರೋಗಗಳು ಜನರಲ್ಲಿ ಕಾಣಿಸುತ್ತವೆ. ಕಾರ್ಬನ್ ಡೈಆಕ್ಸೈಡ್ ಮತ್ತು ಸಾರಜನಕದಿಂದ ನಮ್ಮ ಉಸಿರಾಟದಲ್ಲಿ ಸೇರಿ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ” ಎಂದು ಹೇಳಿದರು.
“ವಾಯುಮಾಲಿನ್ಯದಿಂದ ಒಬ್ಬ ವ್ಯಕ್ತಿಯ ಆಯುಷ್ಯ ಸರಾಸರಿ 5 ವರ್ಷ ಕಡಿಮೆಯಾಗುತ್ತದೆ ಎಂದು ಡಬ್ಲೂಎಚ್‌ಒ ವರದಿ ಹೇಳುತ್ತದೆ. ವಾಯುಮಾಲಿನ್ಯ ಪರಿಣಾಮದಿಂದ 5 ವರ್ಷಕ್ಕಿಂತ ಕಡಿಮೆ ಮಕ್ಕಳಲ್ಲಿ ಶೇ.27ರಷ್ಟು ಸಾವು ಕಂಡುಬರುತ್ತಿದೆ. ಅದು ನ್ಯುಮೋನಿಯಾದಿಂದ ಬರುತ್ತದೆ” ಎಂದು ನಿಯಮ ಉಲ್ಲಂಘಿಸಿ ಸ್ಥಾಪನೆಯಾಗಿರುವ ಕಾರ್ಖಾನೆಗಳಿಂದಾಗುವ ದುಷ್ಪರಿಣಾಮಗಳ ಕುರಿತು ಹೇಳಿದರು.
ಕೈಗಾರಿಕಾದಿಂದ ದುಷ್ಪರಿಣಾಮಗಳು
ರೈತರಿಂದ ಭೂಮಿ ಪಡೆದ ಕಂಪನಿಗಳು ಉದ್ಯೋಗದ ಆಮಿಷವೊಡ್ಡಿ ಹುದ್ದೆಗೆ ತಕ್ಕ ಸಂಬಳ ಕೊಡದೆ ಯಾಮಾರಿಸಿ ಬೀದಿಪಾಲು ಮಾಡಿವೆ. ನಿಯಮ ಉಲ್ಲಂಘಿಸಿ ಕಾರ್ಖಾನೆಗಳನ್ನು ಸ್ಥಾಪಿಸಿ ಜನರ ಆರೋಗ್ಯದ ಜತೆ ಚಲ್ಲಾಟವಾಡುತ್ತಿವೆ. ಅತಿಯಾದ ವಾಯುಮಾಲಿನ್ಯದಿಂದ ಕೊಪ್ಪಳ ಜಿಲ್ಲೆಯ ನಾಗರಿಕರ ಆರೋಗ್ಯದಲ್ಲಿ ಮಾರಕ ರೋಗಗಳು ಕಾಣಿಸಿಕೊಳ್ಳುತ್ತಿವೆ. ಭೂಮಿಯ ಫವತ್ತತೆಯು ಕಡುಮೆಯಾಗುತ್ತಿದೆ. ಸೇವಿಸುವ ನೀರೂ ಕೂಡ ಯೋಗ್ಯವಿಲ್ಲದಿರುವುದು ಕಂಡುಬರುತ್ತಿದೆ.
ʼಕಾರ್ಖಾನೆ ತೊಲಗಿಸಿ ಕೊಪ್ಪಳ ಉಳಿಸಿ’ ಆಂದೋಲನದಲ್ಲಿ ಭ್ರಷ್ಟರೂ ಭಾಗಿ
“ವಿಪರ್ಯಾಸವೆಂದರೆ, ದೇಶದ ಮಣ್ಣು ನುಂಗಿ, ರಾಜ್ಯದ ಗಡಿರೇಖೆಯನ್ನೇ ಮಾಯ ಮಾಡಿದ ಭ್ರಷ್ಟರು ಮತ್ತು ಇಲ್ಲಿನ ಹಳ್ಳಿಗಳಲ್ಲಿ ತಮ್ಮ ಪ್ರಬಲ ರಾಜಕೀಯ ಪ್ರಭಾವ ಬಳಸಿ ಕಾರ್ಖಾನೆ ಸ್ಥಾಪನೆಯ ಮುಂಚೂಣಿಯಲ್ಲಿದ್ದರು, ಕಾರಣವೂ ಆಗಿದ್ದರು. ಆದರೆ, ಅದೇ ರಾಜಕಾರಣಿಗಳು ಇವತ್ತು ಕೊಪ್ಪಳ ಬಚಾವೋ ಆದೊಲನದಲ್ಲಿ ಭಾಗಿಯಾಗಿದ್ದರು. ಅಂದು ಈ ರಾಜಕಾರಣಿಗಳೇ 30ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕಾರ್ಖಾನೆ ಸ್ಥಾಪನೆಗೆ ಮೂಲ ಕಾರಣರು ಎಂಬುದನ್ನು ಮರೆಯುವಂತಿಲ್ಲ” ಎಂದು ಕೊಪ್ಪಳ ಜನರ ಮಾತುಗಳೂ ಕೇಳಿ ಬಂತು
ಮುಂದಿನ ದಾರಿ ಯಾವುದು?
ಇಲ್ಲಿ ಒಂದೇ ನಿರ್ಧಾರದ ಮೂಲಕ ಅಭಿವೃದ್ಧಿ ಭೋರ್ಗರೆಯಬೇಕು. ಜಿಲ್ಲೆಯ ಜನ, ಸರ್ಕಾರ ಮತ್ತು ಕಾರ್ಖಾನೆ ಮೂವರೂ ಸಮಯ ತೆಗೆದುಕೊಂಡು ಚರ್ಚೆ ಮಾಡಬೇಕು. ಕೊಪ್ಪಳ ಜನತೆಯ ಸಮಸ್ಯೆ ಏನು? ಅವರ ವಿರೋಧಕ್ಕೆ ಕಾರಣ ಏನು? ಎನ್ನವ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ಪ್ರಾಮಾಣಿಕ ಚರ್ಚೆಯಾಗಬೇಕು.
ಬಿಎಸ್‌ಪಿಎಲ್ ಹಾಗೂ ಎಂಎಸ್‌ಪಿಎಲ್ ಸಂಸ್ಥೆ ಕೂಡ ತನ್ನ ಮುಂದಿನ ಭವಿಷ್ಯದ ವಿಚಾರ ಏನು? ಎಂದು ಸ್ಪಷ್ಟಪಡಿಸಬೇಕು. ಸ್ಥಳೀಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಕಲ್ಪಿಸುತ್ತದಯೇ? ಅಥವಾ ಅದರ ಪ್ರಾಮುಖ್ಯತೆ ಏನಾಗಿರುತ್ತದೆ? ಸ್ಥಳೀಯ ಜನರಿಗೆ ಆರೋಗ್ಯ ಸಮಸ್ಯೆ ಕಂಡುಬಂದಲ್ಲಿ ಆದರ ಚಿಕಿತ್ಸೆ ವೆಚ್ಚ ಪೂರ್ಣ ಭರಿಸುತ್ತದಯೆ? ಹಾಗೂ ಜೀವವಿಮೆ ಒದಗಿಸಬಹುದಾ? ಅಥವಾ ಆರೋಗ್ಯ ಸಮಸ್ಯೆ ಆಗದಿರುವಂತೆ ನೋಡಿಕೊಳ್ಳುತ್ತಾ? ಎಂಬುದನ್ನು ಸ್ಪಷ್ಟ ಪಡಿಸಬೇಕು ಎಂದು ಸ್ಥಳೀಯರು ಒಕ್ಕೊರಲಿನಿಂದ ಕೇಳಿದರು.

ಕೇಶವ ಕಟ್ಟಿಮನಿ
ಕೃಷಿ, ಪುಸ್ತಕ ಓದುಗ,
ಫೀಲ್ಡ್ ಕೋರ್ಡಿನೇಟರ್,
ಕೊಪ್ಪಳ ಮತ್ತು ಬಳ್ಳಾರಿ, ಮಾಸ್ ಮೀಡಿಯಾ ಫೌಂಡೇಶನ್