- 47,601 ಶಾಲೆಗಳಲ್ಲಿ 464 ಶಾಲೆಗಳಲ್ಲಿ ಶೌಚಾಲಯಗಳಿಲ್ಲ
- ಸ್ವಯಂ ಪ್ರೇರಿತ ಪಿಐಎಲ್ ದಾಖಲಿಸಿಕೊಂಡಿರುವ ಹೈಕೋರ್ಟ್
ಸರ್ಕಾರಿ ಶಾಲೆಗಳ ಅವ್ಯವಸ್ಥೆ ಕಂಡ ಯಾವ ಪೋಷಕರು ತಮ್ಮ ಮಕ್ಕಳನ್ನು ಆ ಶಾಲೆಗಳಿಗೆ ಕಳಿಸುವುದಿಲ್ಲ. ಸರ್ಕಾರಿ ಶಾಲೆಗಳ ಶೌಚಾಲಯಗಳು ದಯನೀಯ ಸ್ಥಿತಿಯಲ್ಲಿವೆ ಎಂದು ಹೈಕೋರ್ಟ್ ಕಿಡಿಕಾರಿದೆ.
ಸರ್ಕಾರಿ ಶಾಲೆಗಳಿಗೆ ಸರ್ಕಾರದ ಬಜೆಟ್ ಹಂಚಿಕೆಯಲ್ಲಿನ ಧೋರಣೆಯನ್ನು ಗಮನಿಸಿದ ಹೈಕೋರ್ಟ್, ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿತ್ತು. ಗುರುವಾರ, ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರಿದ್ದ ವಿಭಾಗೀಯ ಪೀಠವು ಅರ್ಜಿಯ ವಿಚಾರಣೆ ನಡೆದಿದೆ.
ಲಭ್ಯವಿರುವ ಅನುದಾನದ ಆಧಾರದ ಮೇಲೆ ಮುಂದಿನ ಐದು ವರ್ಷಗಳಲ್ಲಿ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತೇವೆಂದು ರಾಜ್ಯ ಸರ್ಕಾರ ಹೇಳಿದೆ. ಸರ್ಕಾರ ಈ ನಿಲುವಿಗೆ ಹೈಕೋರ್ಟ್ ಅತೃಪ್ತಿ ವ್ಯಕ್ತಪಡಿಸಿದೆ. ಬಜೆಟ್‌ನಲ್ಲಿ ಅನುದಾನವನ್ನು ಮೀಸಲಿಡಬೇಕು ಎಂದು ಪುನರುಚ್ಚರಿಸಿದೆ.
ಶಾಲೆಗಳಿಗೆ ಸರಿಯಾಗಿ ಅನುದಾನ ಹಂಚಿಕೆಯಾಗದೇ ಇರುವುದು ನೋವಿನ ಮತ್ತು ಆಘಾತಕಾರಿ ಸಂಗತಿಯಾಗಿದೆ. ಆರ್‌ಟಿಇ ಕಾಯ್ದೆ ಮತ್ತು ನಿಯಮಗಳಲ್ಲಿ ನಿರ್ದಿಷ್ಟಪಡಿಸಿದಂತೆ ಮೂಲಭೂತ ಸೌಕರ್ಯಗಳುಳ್ಳ ಶಾಲಾ ಕಟ್ಟಡವನ್ನು ಪೋಷಕರು ನಿರೀಕ್ಷಿಸುತ್ತಾರೆ. ಅದೇನು ದೂರದ ಕನಸಲ್ಲ. ಸರ್ಕಾರ ತನ್ನ ಬಜೆಟ್‌ನಲ್ಲಿ ಸರಿಯಾಗಿ ಅನುದಾನ ಹಂಚಿಕೆ ಮಾಡಬೇಕು ಎಂದು ಕೋರ್ಟ್ ಹೇಳಿದೆ.
ಬಜೆಟ್‌ನಲ್ಲಿ ಮೂಲಸೌಕರ್ಯಕ್ಕೆ ಹಣ ಮೀಸಲಿಡಲು ಕಾಲಮಿತಿ ನಿಗದಿಪಡಿಸಲು ಅಮಿಕಸ್ ಕ್ಯೂರಿ ಕೆ.ಎನ್ ಫಣೀಂದ್ರ ಅವರ ಶಿಫಾರಸನ್ನು ಉಲ್ಲೇಖಿಸಿದ ನ್ಯಾಯಾಲಯ, “2013ರಲ್ಲಿ ಹಣ ಮೀಸಲಿಡುವ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ. ಅಂದಿನಿಂದ ಇಲ್ಲಿಯವರೆಗೆ ಮೂರು ಸರ್ಕಾರಗಳು ಬದಲಾಗಿವೆ. ಆದರೂ, ಹಣ ಮಂಜೂರು ಮಾಡಲು ಸರ್ಕಾರ ಇನ್ನೂ ಐದು ವರ್ಷಗಳ ಕಾಲಾವಕಾಶ ಕೋರಿರುವುದು ಖಂಡನೀಯ” ಎಂದು ಹೇಳಿದೆ.
“ಇಂತಹ ಪ್ರತಿಕ್ರಿಯೆಯು ನಿಸ್ಸಂಶಯವಾಗಿ ಅನುದಾನ ಹಂಚಿಕೆಯ ಶಿಫಾರಸುಗಳನ್ನು ವಿಳಂಬಗೊಳಿಸುತ್ತವೆ. ಬಜೆಟ್‌ನಲ್ಲಿ ಅನುದಾನ ಹಂಚಿಕೆ ಮಾಡದ ಹೊರತು, ಯಾವುದೇ ಫಲಪ್ರದ ಉದ್ದೇಶವನ್ನು ಪೂರೈಸಲಾಗುವುದಿಲ್ಲ. ರಾಜ್ಯ ಸರ್ಕಾರವು ನಿಗದಿತ ಅವಧಿಯೊಳಗೆ ಬಜೆಟ್‌ನಲ್ಲಿ ಹಣದ ಹಂಚಿಕೆಯನ್ನು ನಿರ್ದಿಷ್ಟಪಡಿಸಬೇಕೆಂದು ನಾವು ಪುನರುಚ್ಚರಿಸುತ್ತೇವೆ” ಎಂದು ನ್ಯಾಯ ಪೀಠ ಹೇಳಿದೆ.
“2023ರ ಮಾರ್ಚ್‌ನಲ್ಲಿ ಶಿಕ್ಷಣ ಇಲಾಖೆ ಸಲ್ಲಿಸಿದ ಮಾಹಿತಿ ಪ್ರಕಾರ, ರಾಜ್ಯದ ಒಟ್ಟು 47,601 ಶಾಲೆಗಳಲ್ಲಿ 464 ಶಾಲೆಗಳಲ್ಲಿ ಶೌಚಾಲಯಗಳಿಲ್ಲ. ಆದರೆ, ಇತ್ತೀಚಿನ ಮತ್ತೊಂದು ಅಂಕಿಅಂಶ ಬಿಡುಗಡೆಯಾಗಿದ್ದು, ಅದರಲ್ಲಿ 38 ಶಾಲೆಗಳಲ್ಲಿ ಮಾತ್ರ ಶೌಚಾಲಯವಿಲ್ಲ ಎಂದು ಹೇಳಲಾಗಿದೆ. ಮೂರು ತಿಂಗಳೊಳಗೆ ಇಷ್ಟು ದೊಡ್ಡ ಪ್ರಗತಿ ಹೇಗೆ ಸಾಧ್ಯವಾಯಿತು” ಎಂದು ನ್ಯಾಯಾಲಯ ಪ್ರಶ್ನಿಸಿದೆ.
ಈ ಸುದ್ದಿ ಓದಿದ್ದೀರಾ?: ಶಾಲಾ ಮಕ್ಕಳ ಬ್ಯಾಗ್ ತೂಕ ಕಡಿತ: ಶಿಕ್ಷಣ ಇಲಾಖೆ ಆದೇಶ
“ಇಲಾಖೆ ಸಲ್ಲಿಸಿದ ವರದಿಯು ನಮ್ಮ ಆತ್ಮಸಾಕ್ಷಿಯನ್ನು ಆಘಾತಗೊಳಿಸುತ್ತದೆ. ಉತ್ತರ ಕರ್ನಾಟಕದ ಶಾಲೆಯೊಂದರ ಶೌಚಾಲಯದ ಛಾಯಾಚಿತ್ರವನ್ನು ಗಮನಿಸಿದ್ದೇವೆ. ಆ ಶೌಚಾಲಯ ಹುಡುಗರಿಗೆ ಅಥವಾ ಹುಡುಗಿಯರಿಗೆ ಎಂಬ ಫಲಕವನ್ನೇ ಹೊಂದಿಲ್ಲ. ಅದರ ಮುಂದೆ ಪೊದೆಗಳು ಬೆಳೆದುಕೊಂಡಿವೆ. ಅಷ್ಟೊಂದು ಕಳಪೆ ಮಟ್ಟದಲ್ಲಿ ಅವುಗಳನ್ನು ನಿರ್ವಹಿಸಲಾಗುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದೆ.
“ಅದೇ ರೀತಿ, ಇನ್ನೊಂದು ಶೌಚಾಲಯದಲ್ಲಿ ನೀರು ಸಿಗುತ್ತಿಲ್ಲ. ಅಟೆಂಡರ್ ಒಬ್ಬರು ಹೊರಗಿನಿಂದ ಕುಡಿಯುವ ನೀರನ್ನು ತಲೆಯ ಮೇಲೆ ಹೊತ್ತುಕೊಂಡು ಹೋಗುತ್ತಾರೆ. ಇದು ಆಘಾತಕಾರಿಯಾಗಿದೆ. ಶೌಚಾಲಯದ ವ್ಯವಸ್ಥೆಯೂ ಇಲ್ಲದ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಲು ಯಾವ ಪೋಷಕರೂ ಇಷ್ಟಪಡುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.
ಎರಡು ವಾರಗಳಲ್ಲಿ ಕುಡಿಯಲು ಮತ್ತು ಸ್ವಚ್ಛಗೊಳಿಸಲು ನೀರು ಒದಗಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ಜೊತೆಗೆ, ತಾಲೂಕು ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಗಳನ್ನು ಒಳಗೊಂಡ ತಂಡದೊಂದಿಗೆ ಶಾಲೆಗಳ ಕುರಿತ ಹೊಸ ಸಮೀಕ್ಷೆ ನಡೆಸುವಂತೆ ನಿರ್ದೇಶನ ನೀಡಿದೆ.