ಬೆಳಗಾವಿ ಜಿಲ್ಲಾ ವಿಭಜನೆ ಯಾಕ್ ಮಾಡವಲ್ರಿ. ಬಳ್ಳಾರಿ ಜಿಲ್ಲಾ ವಿಭಜನೆ ಮಾಡಿದ್ರಿ. ಆದ್ರ ನಮ್ಮ ಬೆಳಗಾವಿ ಜಿಲ್ಲಾ ವಿಭಜನೆ ಮಾಡಾಕ ನಿಮ್ಮಗೆ ಎನು ತೊಂದರೆ ಆಗೈತಿ ಅಂತ ಬೆಳಗಾವಿ ಜಿಲ್ಲಾ ಜನ ಕೇಳುದು ಕರೆಕ್ಪ್ ಐತ್ರಿ. ಬೆಳಗಾವಿ ಜಿಲ್ಲೆ ರಾಜ್ಯದಾಗ ದೊಡ್ಡ ಜಿಲ್ಲೆ ಐತಿ. 13,433 ಚ.ಕಿ.ಮೀ ವಿಸ್ತೀರ್ಣ, 15 ತಾಲೂಕುಗಳು, 3 ಲೋಕಸಭಾ ಕ್ಷೇತ್ರಗಳಲ್ಲಿ ಜಿಲ್ಲೆಯ ಹರಡಿಕೊಂಡಿದೆ.
ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿ ಜಿಲ್ಲೆಯನ್ನು ಕದಂಬರು, ರಾಷ್ಟ್ರಕೂಟರು, ಚಾಲುಕ್ಯರು, ಬಹುಮನಿ ಸುಲ್ತಾನರು, ವಿಜಯನಗರದ ಅರಸರು, ಮೋಘಲರು, ಪೇಶ್ವೆಗಳು ಆಳಿದ್ದಾರೆ. 1947ರಲ್ಲಿ ಭಾರತ ಸ್ವಾತಂತ್ರವಾದ ನಂತರ ಬೆಳಗಾವಿ ಮುಂಬೈ ರಾಜ್ಯದ ಭಾಗವಾಗಿತ್ತು. 1956ರಲ್ಲಿ ಭಾಷಾವಾರು ರಾಜ್ಯಗಳ ಮರುವಿಂಗಡನೆಯ ನಂತರ ಮೈಸೂರು ರಾಜ್ಯದಲ್ಲಿ ಸೆರ್ಪಡೆಯಾಯಿತು.
ಕರ್ನಾಟಕದ ಅತಿ ದೊಡ್ಡ ಜಿಲ್ಲೆಯಲ್ಲಿ ಸಮಸ್ಯೆಗಳ ಸಾಗರವೇ ತುಂಬಿದೆ. ಸರಿಯಾದ ನೀರಾವರಿ ಯೋಜನೆಗಳಿಲ್ಲ. ಜಿಲ್ಲೆ ಯ ಬಹುಸಂಖ್ಯಾತರು ಕೃಷಿಯನ್ನೇ ಅವಲಂಬಿಸಿದ್ದರೂ, ಕೃಷಿಗೆ ಪ್ರೋತ್ಸಾಹವಿಲ್ಲ. ಜಿಲ್ಲೆಯ ಯುವಜನರು ಉದ್ಯೋಗಕ್ಕಾಗಿ ಹೊರ ರಾಜ್ಯ ಹಾಗೂ ಬೆಂಗಳೂರಿಗೆ ವಲಸೆ ಹೋಗಬೇಕಾದ ಪರಿಸ್ಥಿತಿ ಇದೆ.
ಇಷ್ಟೆಲ್ಲ ಸಮಸ್ಯೆಗಳು ಇದ್ದರು ಬೆಳಗಾವಿ ಜಿಲ್ಲೆ ವೈವಿದ್ಯತೆಯಿಂದ ಕೂಡಿದೆ. ಇಲ್ಲಿ ಬೇರೆ ಬೇರೆ ಜನಾಂಗದ, ನಾನಾ ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ವಿವಿಧ ಧರ್ಮದ ಜನರು ಒಟ್ಟಾಗಿ ಬಾಳುತ್ತಿದ್ಧಾರೆ. ಭ್ರಿಟಿಷರ ವಿರುದ್ಧ ಹೋರಾಡಿದ ಕಿತ್ತೂರಿನ ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪರಂತಹ ಸ್ವಾತಂತ್ರ್ಯ ಹೋರಾಟಗಾರರ ತವರು ಜಿಲ್ಲೆಯಾಗಿದೆ. ಭವ್ಯ ಪರಂಪರೆಯನ್ನು ಹೊಂದಿರುವ ಜಿಲ್ಲೆಯನ್ನು ಆಡಳಿತಾತ್ಮಕ ದೃಷ್ಟಿಯಿಂದ ವಿಭಜನೆ ಮಾಡಬೇಕು ಎಂದು ಇಲ್ಲಿನ ಜನರು ಒತ್ತಾಯಿಸುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಜಕಾರಣಿಗಳು ಪ್ರಭಾವಿಗಳಾಗಿದ್ದಾರೆ. ಬಳ್ಳಾರಿ ಜಿಲ್ಲೆಯ ವಿಭಜನೆಯ ಮುಂಚೆಯೇ ಬೆಳಗಾವಿ ಜಿಲ್ಲೆ ವಿಭಜನೆ ಮಾಡಬೇಕಿತ್ತು. ಅದು ಯಾಕ್ ಸಾಧ್ಯವಾಗಿಲ್ಲ. ಜಿಲ್ಲೆಯ ಕೆಲವರು ಒಂದು ಸರ್ಕಾರವನ್ನೇ ಬೀಳಿಸಿ ಆಪರೇಷನ್ ಮೂಲಕ ಹೊಸ ಸರ್ಕಾರ ರಚನೆ ಮಾಡುವಷ್ಟು ಪ್ರಭಾವಿಯಾಗಿದ್ದಾರೆ. ಅಂತಹವರಿದ್ದರೂ, ಜಿಲ್ಲೆ ವಿಭಜನೆ ಮಾಡಲಾಗಿಲ್ಲ. ಅವರಿಗೆಲ್ಲ ಇಚ್ಛಾಸಕ್ತಿ ಕೊರತೆ ಇದೆ ಎಂದು ಜಿಲ್ಲೆಯ ಜನರು ಕಿಡಿಕಾರಿದ್ದಾರೆ.
“ನಮ್ಮ ಊರಿಂದ ಬೆಳಗಾವಿ ಎಷ್ಟ ದೂರ ಆಗತ್ತ್ ಅಂತ ನಿಮ್ಮಗೆ ಗೊತ್ತೆನ್ರಿ. ಬೆಳಗಾವಿ ಹೋಗಿ ಜಿಲ್ಲಾ ಕಚೇರಿಯಾಗಿನ ಕೆಲಸ ಮಾಡ್ಕೊಂಡ ಬರಬೇಕಂದ್ರ ರಾತ್ರಿಯಾಗಿರ್ತದ. ತಿರುಗಿ ಬರಬೇಕು ಅಂದ್ರ ಬಸ್ ಇರಾಂಗಿಲ್ಲ. ನಮ್ಮ ಸಮಸ್ಯೆ ನಿಮಗೆ ಅರ್ಥ ಆಗುದಿಲೆನು. ನಾವೇನು ಮಲತಾಯಿ ಮಕ್ಕಳೆನ್ರಿ” ಅಂತ ಅಥಣಿ, ಚಿಕ್ಕೊಡಿ, ರಾಯಭಾಗ, ಕುಡಚಿ, ಖಾನಾಪೂರ, ಕಾಘವಾಡ, ನಿಪ್ಪಾಣಿ ತಾಲೂಕಿನ ಜನರು ಸರ್ಕಾರಗಳಿಗೆ ಪ್ರಶ್ನೆ ಮಾಡುತ್ತಲೇ ಇದ್ದಾರೆ.

ಚಿಕ್ಕೊಡಿ ಲೋಕಸಭಾ ವ್ಯಾಪ್ತಿಯಲ್ಲಿರುವ ತಾಲೂಕಿನ ಜನರು ಜಿಲ್ಲಾ ಕಚೇರಿಗಳಿಗೆ ತೆರಳಬೇಕು ಅಂದ್ರೆ 200 ಕಿ.ಮೀ ಪ್ರಯಾಣ ಮಾಡಬೇಕು. ಅಷ್ಟು ದೂರ ಹೋದರೂ, ಅಂದು ತಮ್ಮ ಕೆಲಸ ಆಗುತ್ತದೆ ಎಂಬ ಭರವಸೆ ಇರುವುದಿಲ್ಲ. ಅಧಿಕಾರಿಗಳನ್ನು ಹಿಡಿದು, ಕೆಲಸ ಮುಗಿಸಿಕೊಂಡು ಊರಿಗೆ ವಾಪಸ್ ಹೋಗಬೇಕು ಅಂದ್ರೆ ರಾತ್ರಿ ಆಗೋಗಿರುತ್ತದೆ. ನಮ್ಮ ಕಷ್ಟ ಅರ್ಥ ಮಾಡಿಕೊಂಡು, ಜಿಲ್ಲೆಯನ್ನು ವಿಭಜನೆ ಮಾಡಬೇಕೆಂದು ಚಿಕ್ಕೋಡಿ ಭಾಗದ ಜನರು ಪ್ರತಿಭಟನೆ ಮಾಡುತ್ತಲೇ ಇದ್ದಾರೆ.
ಬೆಳಗಾವಿ ಜಿಲ್ಲಾ ವಿಭಜನೆ ಕೂಗೂ ಇವತ್ತು ನಿನ್ನೆಯದಲ್ಲ, 1980ರಲ್ಲಿ ಅಂದಿನ ಸರ್ಕಾರ ಎಮ್.ಬಿ ಪ್ರಕಾಶ ಆಯೋಗ, ವಾಸುದೇವ ಆಯೋಗ, ಹುಂಡೇಕರ ಸಮಿತಿ, ಗದ್ಧಿಗೌಡರ ಆಯೋಗ ರಚನೆ ಮಾಡಿ ಅಧ್ಯಯನ ನಡಸಿದ್ದವು. ಈ ಎಲ್ಲ ಆಯೋಗಗಳೂ ಬೆಳಗಾವಿಯನ್ನು ಎರಡು ಜಿಲ್ಲೆಗಳನ್ನಾಗಿ ವಿಭಜಿಸಬೇಕೆಂದು ವರದಿ ನೀಡಿದ್ದವು. ಆದರೆ, ಗಡಿ ವಿವಾದ ಎದುರಿಸುತ್ತಿರುವ ಬೆಳಗಾವಿಯನ್ನು ವಿಭಜನೆ ಮಾಡಿದರೆ ಮಹಾರಾಷ್ಟ್ರ ಬೆಂಬಲಿತ ಸಂಘಟನೆಗಳಿಂದ ಮತ್ತಷ್ಟು ಉಪಠಳ ಹೆಚ್ಚಾಗಬಹುದು, ಗಡಿ ವಿವಾದ ಮತ್ತಷ್ಟು ಉಲ್ಬಣಗೊಳ್ಳಬಹುದು ಎಂಬ ಕಾರಣಕ್ಕೆ ಜಿಲ್ಲಾ ವಿಭಜನೆ ಮಾಡಲು ಸರ್ಕಾರಗಳು ಮುಂದಾಗಲಿಲ್ಲ.
ಈ ಸುದ್ದಿ ಓದಿದ್ದೀರಾ?: ಕಲಬುರಗಿ | ಬರಗಾಲ ಪರಿಹಾರಕ್ಕೆ ಆಗ್ರಹಿಸಿ ರೈತಸಂಘ ಜಾಥಾ
ಚಿಕ್ಕೊಡಿ ಜಿಲ್ಲಾ ರಚನೆಗೆ ಯಾರ ಅಭ್ಯಂತರವೂ ಇಲ್ಲ. ಆದರೆ, ಗೋಕಾಕ ಅಥವಾ ಬೈಲಹೊಂಗಲವ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡುವುದು ಕಷ್ಟದಾಯಕವೆಂದು ಹೇಳಲಾಗುತ್ತಿದೆ. ಆದರೆ, ಗೋಕಾಕ ಜಿಲ್ಲೆ ಮಾಡಬೇಕೆಂದು ಗೋಕಾಕದ ಜನರು, ಬೈಲಹೊಂಗಲ ಐತಿಹಾಸಿಕ ತಾಲೂಕಾಗಿದೆ. ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಹೋರಾಡಿದ ಭೂಮಿ ಇದು. ಇದನ್ನೇ ಜಿಲ್ಲಾ ಕೇಂದ್ರ ಮಾಡಬೇಕೆಂದು ಆ ತಾಲೂಕಿನ ಜನರು ಒತ್ತಾಯಿಸುತ್ತಿದ್ದಾರೆ. ಅಲ್ಲದೆ, ಬೈಲಹೊಂಗಲದಲ್ಲಿ ಉಪ ವಿಭಾಗಧಿಕಾರಿ ಕಚೇರಿಯೂ ಇದೆ. ಹೀಗಾಗಿ, ಇದನ್ನೇ ಜಿಲ್ಲಾ ಕೇಂದ್ರ ಮಾಡಬೇಕೆಂಬ ಕೂಗು ಹೆಚ್ಚಾಗಿದೆ.
ಬೆಳಗಾವಿಯನ್ನು ವಿಭಜನೆ ಮಾಡುವುದಾದರೆ, ಚಿಕ್ಕೋಡಿಯನ್ನು ಜಿಲ್ಲಾ ಕೇಂದ್ರ ಮಾಡಿ. ಒಂದು ವೇಳೆ ಮೂರು ಜಿಲ್ಲೆಗಳಾಗಿ ವಿಂಗಡಿಸುವುದಾದರೆ, ಗೋಕಾಕವನ್ನು ಜಿಲ್ಲೆ ಮಾಡುವುದಾದರೆ, ಬೈಲಹೊಂಗಲವನ್ನೂ ಜಿಲ್ಲೆ ಮಾಡಿ. ಇಲ್ಲ ಅಂದ್ರೆ, ಅಖಂಡ ಜಿಲ್ಲೆ ಹಾಗೆಯೇ ಇರಲಿ ಎಂಬ ಅಭಿಪ್ರಾಯಗಳೂ ಬೈಲಹೊಂಗಲ ತಾಲೂಕಿನಲ್ಲಿ ವ್ಯಕ್ತವಾಗಿವೆ.
ಬೆಳಗಾವಿಯನ್ನು 3 ಜಿಲ್ಲೆಗಳಾಗಿ ವಿಂಗಡಿಸಬೇಕು ಎಂದು ಉಮೇಶ ಕತ್ತಿ ಸಚಿವರಾಗಿದ್ಧಾಗ ಜಿಲ್ಲೆ ವಿಭಜನೆಗೆ ಮುಂದಡಿ ಇಟ್ಟಿದ್ದರು. ಸದ್ಯ, ಕಾಂಗ್ರೆಸ್ ಸರ್ಕಾರದಲ್ಲಿ ಜಿಲ್ಲೆಯವರೇ ಆದ ಸತೀಶ ಜಾರಕಿಹೋಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಸಚಿವರಾಗಿದ್ದಾರೆ. ಅವರು ಬೆಳಗಾವಿ ಜಿಲ್ಲಾ ವಿಭಜನೆಗೆ ಒತ್ತುಕೊಡಬೇಕು ಎಂದು ಜಿಲ್ಲೆಯ ಜನರು ಒತ್ತಾಯಿಸಿದ್ದಾರೆ.