ಗಂಡನಿಂದ ವಿಚ್ಛೇದನ ಪಡೆಯಲು ಅರ್ಜಿ ಸಲ್ಲಿಸಿದ ಪತ್ನಿ ಬೇರೆ ಪುರುಷನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರೆ, ಅವರು ಜೀವನಾಂಶ ಕೇಳಲು ಅರ್ಹರಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಕೌಟುಂಬಿಕ ದೌರ್ಜನ್ಯ ಕಾಯ್ದೆಯ ಸೆಕ್ಷನ್ 12ರ ಪ್ರಕಾರ, ಬೇರೊಬ್ಬ ಪುರುಷನೊಂದಿಗೆ ಸಂಬಂಧ ಹೊಂದಿರುವ ಪತ್ನಿಯು ತನ್ನ ಗಂಡನಿಂದ ಜೀವನಾಂಶ ಪಡೆಯಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ವಿವರಿಸಿದೆ. ಮಹಿಳೆಯೊಬ್ಬರು ಜೀವನಾಂಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ಅರ್ಜಿದಾರ ಮಹಿಳೆಯು ಪತಿಯಿಂದ ವಿಚ್ಛೇದನ ಪಡೆದು, ಮತ್ತೊಬ್ಬ ಪುರುಷನೊಂದಿಗೆ ಸಂಬಂಧ ಬೆಳೆಸಿದ್ದರು. ಅಲ್ಲದೆ, ಪತಿಯಿಂದ ಜೀವನಾಂಶ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆಕೆಗೆ ಜೀವನಾಂಶ ನೀಡುವಂತೆ ಆಕೆಯ ಪತಿಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶ ನೀಡಿತ್ತು. ಆದೇಶವನ್ನು ಪ್ರಶ್ನಿಸಿ ಆಕೆಯು ಪತಿ ಸೆಷನ್ಸ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಸೆಷನ್ ನ್ಯಾಯಾಲಯವು ಮ್ಯಾಜಿಸ್ಟ್ರೇಟ್ ಕೋರ್ಟ್‌ನ ಆದೇಶವನ್ನು ರದ್ದುಗೊಳಿಸಿತ್ತು. ಆ ಬಳಿಕ ಪ್ರಕರಣವು ಹೈಕೋರ್ಟ್ ಮೆಟ್ಟಿಲೇರಿತ್ತು.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ಅವರು ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದಾರೆ. ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದ್ದಾರೆ.
“ಕಾನೂನುಬದ್ಧವಾಗಿ ಮದುವೆಯಾದ ಪತ್ನಿಯು ಜೀವನಾಂಶಕ್ಕೆ ಅರ್ಹರಾಗಿರುತ್ತಾರೆ. ವಿವಾಹೇತರ ಸಂಬಂಧ ಹೊಂದಿರುವವರು ಜೀವನಾಂಶವನ್ನು ಕೋರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಹೀಗಾಗಿ, ಅರ್ಜಿದಾರ ಮಹಿಳೆಯರು ಕಾನೂನುಬದ್ದ ವಿವಾಹಕ್ಕೆ ಬದ್ದರಾಗಿಲ್ಲ. ಅವರು ಪ್ರಾಮಾಣಿಕರಲ್ಲ ಮತ್ತು ವಿವಾಹೇತರ ಸಂಬಂಧ ಹೊಂದಿದ್ದಾರೆ. ಅವರು ಪತಿಯಿಂದ ಜೀವನಾಂಶ ಪಡೆಯಲು ಅರ್ಹರಲ್ಲ” ಎಂದು ನ್ಯಾಯಮೂರ್ತಿ ಬಾದಾಮಿಕರ್ ಹೇಳಿದ್ದಾರೆ.
“ಅರ್ಜಿದಾರ ಮಹಿಳೆ ಕಾನೂನುಬದ್ಧವಾಗಿ ಮದುವೆಯಾಗಿದ್ದರೂ, ಪರ ಪುರುಷನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಾರೆ. ಅವರು ಯಾವುದೇ ಜೀವನಾಂಶಕ್ಕೆ ಅರ್ಹರಲ್ಲ” ಎಂದು ಹೇಳಿದೆ.
ಈ ಸುದ್ದಿ ಓದಿದ್ದೀರಾ?: 1000 ಮದ್ಯದಂಗಡಿಗಳನ್ನು ನಾವು ತೆರೆಯುವುದಿಲ್ಲ: ಸಿಎಂ ಸಿದ್ದರಾಮಯ್ಯ
ಪತಿಯಿಂದ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದ ಮಹಿಳೆ, “ಕಾನೂನುಬದ್ಧವಾಗಿ ನಾನು ವಿವಾಹಿತ ಪತ್ನಿಯಾಗಿದ್ದೇನೆ. ಜೀವನಾಂಶವನ್ನು ಪಾವತಿಸುವುದು ಪತಿಯ ಕರ್ತವ್ಯವಾಗಿದೆ. ಅಲ್ಲದೆ, ಪತಿ ತನ್ನ ಸಂಬಂಧಿ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಾರೆ. ಪ್ರಕರಣದಲ್ಲಿ ಕೌಟುಂಬಿಕ ಹಿಂಸಾಚಾರವನ್ನು ಊಹಿಸುವ ಅಗತ್ಯವಿದೆ” ಎಂದು ವಾದಿಸಿದ್ದರು.
ಆಕೆಯ ವಾದವನ್ನು ಆಲಿಸಿದ ಹೈಕೋರ್ಟ್, “ಅರ್ಜಿದಾರರು ಕಾನೂನುಬದ್ದ ವಿವಾಹಕ್ಕೆ ಪ್ರಾಮಾಣಿಕಳು ಎಂದು ಸಾಬೀತುಪಡಿಸಬೇಕು” ಎಂದು ಹೇಳಿದೆ. ಅರ್ಜಿಯನ್ನು ವಜಾಗೊಳಿಸಿದೆ.