ಪತ್ನಿಯ ನಡೆತೆ ಶಂಕಿಸಿ, ಆಕೆಯನ್ನು ದುರುಳ ಪತಿಯೊಬ್ಬ 12 ವರ್ಷ ಗೃಹ ಬಂಧನದಲ್ಲಿಟ್ಟಿದ್ದ ಪ್ರಕರಣ ಮೈಸೂರು ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನ ಹೈರಿಗೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಪತ್ನಿಯ ಮೇಲೆ ದೌರ್ಜನ್ಯ ಎಸಗಿರುವ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹೈರಿಗೆ ಗ್ರಾಮದ ಸಣ್ಣಾಲಯ್ಯ ಎಂಬಾತ ತನ್ನ ಪತ್ನಿ ಸುಮಾ ಅವರನ್ನು 12 ವರ್ಷಗಳಿಂದ ಗೃಹಬಂಧನದಲ್ಲಿಟ್ಟಿದ್ದ. ಈ ಬಗ್ಗೆ ಪೊಲೀಸರಿಗೆ ಇತ್ತೀಚೆಗೆ ಮಾಹಿತಿ ದೊರೆತಿದ್ದು, ಗ್ರಾಮಕ್ಕೆ ತೆರಳಿ ಮಹಿಳೆಯನ್ನು ರಕ್ಷಿಸಿದ್ದಾರೆ. ಆತನನ್ನು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.
ಸುಮಾ ಅವರು ಸಣ್ಣಾಲಯ್ಯನ ಮೂರನೇ ಪತ್ನಿಯಾಗಿದ್ದಾರೆ. ಮದುವೆಯಾದ ದಿನದಿಂದಲೂ ಆಕೆಯ ನಡತೆ ಬಗ್ಗೆ ಶಂಕೆ ಹೊಂದಿದ್ದ ಆತ, ಆಕೆಯನ್ನು ಗೃಹಬಂಧನದಲ್ಲಿ ಇರಿಸಿದ್ದ ಎಂದು ತಿಳಿದುಬಂದಿದೆ.
ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.