- ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸಿಡಬ್ಲ್ಯೂಎಂಎ ಆದೇಶ
- ‘ನಾವು ನಮ್ಮ ಕಾನೂನು ಹೋರಾಟವನ್ನು ಮುಂದುವರಿಸುತ್ತೇವೆ’
ತಮಿಳುನಾಡಿಗೆ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇವೆ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಕಾವೇರಿ ನೀರು ಬಿಡುವ ಆದೇಶ ಕುರಿತು ಮಂಗಳವಾರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಅವರು, “ತಮಿಳುನಾಡಿಗೆ ಇನ್ನೂ 15 ದಿನಗಳ ಕಾಲ 5,000 ಕ್ಯೂಸೆಕ್ ನೀರು ಬಿಡುವುದನ್ನು ಮುಂದುವರಿಸುವಂತೆ ಸಿಡಬ್ಲ್ಯೂಎಂಎ ಆದೇಶಿಸಿದೆ. ಈ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಲು ನಮ್ಮ ಸರ್ಕಾರ ನಿರ್ಧರಿಸಿದೆ” ಎಂದರು.
“ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುತ್ತೇವೆ. ಯಾವುದೇ ಕಾರಣಕ್ಕೂ ನೀರು ಬಿಡುವುದಿಲ್ಲ. ಈ ವಿಚಾರವಾಗಿ ನಾವು ನಮ್ಮ ಕಾನೂನು ಹೋರಾಟವನ್ನು ಮುಂದುವರಿಸುತ್ತೇವೆ” ಎಂದು ತಿಳಿಸಿದರು.
ಬೊಮ್ಮಾಯಿ ಹೇಳಿಕೆಗೆ ತಿರುಗೇಟು
“ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು ಕಾನೂನು ಹೋರಾಟ ಮಾಡಬೇಕು” ಎಂಬ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿ, “ನಾವು ಬಸವರಾಜ ಬೊಮ್ಮಾಯಿ ಅವರ ಸಲಹೆ ಪಡೆದುಕೊಳ್ಳುತ್ತೇವೆ. ಹಾಗಾದರೆ, ಹಿಂದೆ ಅವರದೇ ಸರ್ಕಾರ ಇದ್ದಾಗ ಏನು ಮಾಡಿದ್ರು? ಬೊಮ್ಮಾಯಿಯವರೇ ನೀರಾವರಿ ಸಚಿವರಾಗಿದ್ದರು, ಸಿಎಂ ಆಗಿದ್ದರು, ಅವರ ಸರ್ಕಾರ ನೇಮಕ ಮಾಡಿದ ತಜ್ಞರೇ ಇರೋದು. ಹೀಗಿದ್ದೂ ರಾತ್ರೋ ರಾತ್ರಿ ತಮಿಳುನಾಡಿಗೆ ನೀರು ಬಿಡಲಿಲ್ಲವಾ? ಮೊದಲು ದೆಹಲಿಗೆ ನಡೀರಿ, ನಿಮ್ಮ ಅಧಿಕಾರ ಬಳಸಿ ರಾಜ್ಯದ ಹಿತ ಕಾಪಾಡಿ” ಎಂದು ತಿರುಗೇಟು ನೀಡಿದರು.