ಗರ್ಭಕೋಶದ ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಹೆಣ್ಣುಮಕ್ಕಳಿಗೆ ಈ ವರ್ಷದಿಂದ ಉಚಿತವಾಗಿ ಹೆಚ್‌ಪಿವಿ (HPV) ಲಸಿಕೆಯನ್ನು ನೀಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ರಾಯಚೂರಿನ ಮಾನ್ವಿಯಲ್ಲಿ ಬೃಹತ್ ಉಚಿತ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, “ಕಲ್ಯಾಣ ಕರ್ನಾಟಕದ ಭಾಗದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆ ತರುವ ಅಗತ್ಯತೆಯಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ” ಎಂದರು.
ಇದನ್ನು ಓದಿದ್ದೀರಾ? ನಕಲಿ ಔಷಧಿ ಜಾಲ ತಡೆಗಟ್ಟಲು ಕ್ರಮ, ಕೇಂದ್ರ ಸರ್ಕಾರಕ್ಕೂ ಪತ್ರ: ಸಚಿವ ದಿನೇಶ್ ಗುಂಡೂರಾವ್
“ಲಸಿಕಾ ಕಾರ್ಯಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಹೆಚ್‌ಪಿವಿ ಲಸಿಕೆ ನೀಡುವುದನ್ನು ಒಂದು ರಾಷ್ಟ್ರೀಯ ಕಾರ್ಯಕ್ರಮವನ್ನಾಗಿ ಜಾರಿಗೊಳಿಸುವಂತೆ ಹಲವು ಬಾರಿ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಆದರೆ ಕೇಂದ್ರ ಸರ್ಕಾರ ಇಲ್ಲಿಯವರೆಗೂ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಿಲ್ಲ. ಹೀಗಾಗಿ ರಾಜ್ಯ ಸರ್ಕಾರವೇ ಈ ವರ್ಷದಿಂದ ಯೋಜನೆಯನ್ನ ಕೈಗೆತ್ತಿಕೊಳ್ಳಲು ನಿರ್ಧರಿಸಿದ್ದು, ಕಲ್ಯಾಣ ಕರ್ನಾಟಕ ಭಾಗದ 14 ವರ್ಷದ ಹೆಣ್ಣುಮಕ್ಕಳಿಗೆ HPV ಲಸಿಕೆ ನೀಡಲಿದೆ. ದೇಶದಲ್ಲಿಯೇ ಈ ರೀತಿಯ ಕಾರ್ಯಕ್ರಮವನ್ನ ನೀಡುತ್ತಿರುವ ಮೊದಲ ರಾಜ್ಯ ಕರ್ನಾಟಕ” ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
“ಅಲ್ಲದೇ ಕಲ್ಯಾಣ ಕರ್ನಾಟಕ ಭಾಗದಲ್ಲಿ ಗರ್ಭಿಣಿ ಸ್ತ್ರೀಯರಿಗೆ ವಾತ್ಸಲ್ಯ ತಾಯಿ ಕಿಟ್ ನೀಡಲು ಯೋಜಿಸಲಾಗಿದೆ. ವಿಶೇಷವಾಗಿ ರಾಜ್ಯದಲ್ಲಿ ತಾಯಿ ಮಗುವಿನ ಮರಣ ಪ್ರಮಾಣ ಶೂನ್ಯಕ್ಕೆ ಇಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಿಸ್ತೃತವಾದ ಯೋಜನೆ ಹಾಕಿಕೊಂಡಿದೆ. ಇದಕ್ಕಾಗಿ ಸಿಎಂ ಸಿದ್ದರಾಮಯ್ಯ ಅವರು 360 ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಅಲ್ಲದೇ ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 8 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನ ಕಲ್ಯಾಣ ಕರ್ನಾಟಕಕ್ಕೆ ನೀಡಲಾಗಿದೆ. ಮುದಗಲ, ಕವಿತಾಳ, ಜಾಲಹಳ್ಳಿ, ಅರಕೇರಾ ಸೇರಿದಂತೆ ಒಟ್ಟು ನಾಲ್ಕು ಸಮುದಾಯ ಆರೋಗ್ಯ ಕೇಂದ್ರಗಳನ್ನು 30 ಹಾಸಿಗೆಯಿಂದ 50 ಹಾಸಿಗೆಯ ಆಸ್ಪತ್ರೆಗಳನ್ನಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ರಾಜ್ಯದ ಹೋಟೆಲ್, ಉಪಾಹಾರ ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ: ಸಚಿವ ದಿನೇಶ್ ಗುಂಡೂರಾವ್
“ಲಿಂಗಸೂಗೂರು ತಾಲೂಕು ಆಸ್ಪತ್ರೆಯನ್ನು ಜಿಲ್ಲಾ ಮಟ್ಟದ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಮಾನ್ವಿ ಹಾಗೂ ರಾಯಚೂರಿನಲ್ಲಿ ನಗರ ಆರೋಗ್ಯ ಕೇಂದ್ರಗಳು ಮಂಜೂರಾಗಿದ್ದು, ಗಟ್ಟೂರು, ಪೋತ್ನಾಳ, ಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲಾಗುವುದು. ಮಸ್ಕಿ ಮತ್ತು ಸಿರಿವಾರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನ ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲು ಈ ಬಾರಿಯ ಬಜೆಟ್ ನಲ್ಲಿ ಘೋಷಿಸಲಾಗಿದೆ. ಕಲ್ಯಣ ಕರ್ನಾಟಕ ಭಾಗದಲ್ಲಿ ಆರೋಗ್ಯ ಕ್ಷೇತ್ರಕ್ಕೆ ರಾಜ್ಯ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿರುವುದರ ಜೊತೆಗೆ ಈ ಭಾಗದ ಜನರು ಉತ್ತಮ ಆರೋಗ್ಯ ಸೇವೆಗಳನ್ನ ಒದಗಿಸುವಲ್ಲಿ ಆರೋಗ್ಯ ಇಲಾಖೆ ಹೆಚ್ಚಿನ ಒತ್ತು ನೀಡಿದೆ” ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
