ಅಪ್ರಾಪ್ತ ಬಾಲಕಿ ಅಪಹರಣ ಪ್ರಕರಣದಲ್ಲಿ ಕೋರ್ಟ್‌ನಲ್ಲಿ ಸಾಕ್ಷಿ ಹೇಳಿದ್ದ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಹತ್ಯೆಗೈದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ತೂಬಿನಕೆರೆಯ ಬೋವಿ ಕಾಲೋನಿ ನಿವಾಸಿ ಜಯಪ್ಪ ಎಂಬವರನ್ನು ಕೊಲೆ ಮಾಡಲಾಗಿದೆ. ಜರಪ್ಪ ಅವರನ್ನು ಕಾಳೇನಹಳ್ಳಿ ಹಟ್ಟಿಯ ಅಣ್ಣಯ್ಯ ಎಂಬಾತ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಆತನನ್ನು ಅರಸೀಕೆರೆ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
2021ರಲ್ಲಿ ಅಪ್ರಾಪ್ರೆಯನ್ನು ಅಪಹರಿಸಿದ್ದ ಪ್ರಕರಣದಲ್ಲಿ ಆರೋಪಿ ಅಣ್ಣಯ್ಯನನ್ನು ಬಂಧಿಸಲಾಗಿತ್ತು. ಅಪರಹಣ ಪ್ರಕರಣದಲ್ಲಿ ಜಯಪ್ಪ ಸಾಕ್ಷಿಯಾಗಿದ್ದರು. ಆರೋಪಿ ಅಣ್ಣಯ್ಯ 2022ರ ಜುಲೈನಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದ. ಕೋರ್ಟ್‌ನಲ್ಲಿ ಸಾಕ್ಷಿ ಹೇಳದಂತೆ ಜಯಪ್ಪ ಅವರಿಗೆ ಅಣ್ಣಯ್ಯ ದುಂಬಾಲು ಬಿದ್ದದ್ದ. ಆದರೂ, ಜನವರಿ 31ರಂದು ಜಯಪ್ಪ ನ್ಯಾಯಾಲಯಕ್ಕೆ ಹಾಜರಾಗಿ, ಸಾಕ್ಷಿ ಹೇಳಿದ್ದರು. ನ್ಯಾಯಾಲಯದಿಂದ ತನ್ನೂರಿಗೆ ಮರಳಿ ಹೋಗುವಾಗ ಆತನ ಮೇಲೆ ಕಲ್ಲು ಎತ್ತಿಹಾಕಿ ಅಣ್ಣಯ್ಯ ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ.
ಜಯಪ್ಪ ಮನೆಗೆ ಬಾರದ ಹಿನ್ನೆಲೆಯಲ್ಲಿ ಆತನ ತಾಯಿ ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿದ್ದರು. ಈ ವೇಳೆ, ಫೆಬ್ರವರಿ 2ರಂದು ಹಾಸನದ ಹೊರವಲಯದ ರೈಲ್ವೇ ಟ್ರ್ಯಾಕ್ ಬಳಿ ಆತನ ಮೃತದೇಹ ಪತ್ತೆಯಾಗಿತ್ತು. ಪ್ರಕರಣದ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರು ಆರೋಪಿ ಅಣ್ಣಯ್ಯನನ್ನು ಬಂಧಿಸಿದ್ದಾರೆ.