ಗ್ರಾಮ ಪಂಚಾಯತಿಯಿಂದ ಆಶ್ರಯ ಮನೆ ಕೊಡಿಸುವುದಾಗಿ ನಂಬಿಸಿ ಮಹಿಳೆ ಮೇಲೆ ಪಂಚಾಯತಿ ಅಧ್ಯಕ್ಷೆಯ ಪುತ್ರ ಅತ್ಯಾಚಾರ ಎಸಗಿರುವ ಅಮಾನುಷ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯತಿ ಅಧ್ಯಕ್ಷೆ ನೀಲಾಂಭಿಕೆ ಎಂಬವರ ಪುತ್ರ ವೈದೇಶ್ ಅತ್ಯಾಚಾರ ಎಸಗಿರುವ ಕಾಮುಕ ಆರೋಪಿ. ಸಂತ್ರಸ್ತ ಮಹಿಳೆ ಆರೋಪಿ ವೈದೇಶ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
“ಗ್ರಾಮ ಪಂಚಾಯತಿಯಿಂದ ಮನೆ ಕಟ್ಟಿಸಿ ಕೊಡಬೇಕೆಂದರೆ ತನ್ನೊಂದಿಗೆ ಲೈಂಗಿಕವಾಗಿ ಸಹಕರಿಸಬೇಕೆಂದು ಪದೇ-ಪದೇ ಪೀಡಿಸುತ್ತಿದ್ದ. ತನ್ನ ಮನೆಗೆ ನುಗ್ಗಿ, ತನ್ನನ್ನು ವಿವಸ್ತ್ರಗಳಿಸಿ, ವಿಡಿಯೋ ಮಾಡಿಕೊಂಡು, ವಿಡಿಯೋವನ್ನು ವೈರಲ್ ಮಾಡುವುದಾಗಿ ಬೆದರಿಸಿ, ನಿರಂತರ ಅತ್ಯಾಚಾರ ಎಸಗಿದ್ದಾನೆ” ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾರೆ.
ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎನ್ನಲಾಗಿದ್ದು, ನೊಂದ ಮಹಿಳೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆಕೆಯ ದೂರಿನ ಆಧಾರದ ಮೇಲೆ ಕಾಮುಕ ಆರೋಪಿ ವೈದೇಶ್ ಮತ್ತು ವೀಡಿಯೋ ವೈರಲ್ ಮಾಡಿದ ಬಸಮಣಿ, ಶಿವಮ್ಮ ವಿರುದ್ದ ಐಪಿಸಿ ಸೆಕ್ಷನ್ 376, 384, 417, 509 ಮತ್ತು ಐಟಿ ಕಾಯ್ದೆ 66(ಇ), 67, 67(ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.