ಮಹಿಳೆಯೋರ್ವಳನ್ನು ಕಿಡ್ನ್ಯಾಪ್ ಮಾಡಿ ಕೊಲೆ ಮಾಡಲು ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.
ಬೆಂಗಳೂರು ಮೂಲದ ಯೋಗ ಶಿಕ್ಷಕಿ ಅರ್ಚನಾ ಕಿಡ್ನ್ಯಾಪ್ಗೆ ಒಳಗಾದ ಮಹಿಳೆ. 13 ವರ್ಷಗಳ ಹಿಂದೆ ವಿಶ್ವನಾಥ್ ಎಂಬುವರೊಂದಿ ಗೆ ವಿವಾಹವಾಗಿದ್ದ ಅರ್ಚನಾ ಕೌಟುಂಬಿಕ ಕಲಹದ ಹಿನ್ನೆಲೆ ಗಂಡನಿಂದ ದೂರವಾಗಿದ್ದಳು. ನಂತರ ಗಂಡನ ಸ್ನೇಹಿತ ಸಂತೋಷ ಎಂಬುವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು.
ಇದನ್ನು ತಿಳಿದ ಸಂತೋಷ್ ಹೆಂಡತಿ ಬಿಂದುಶ್ರೀ, ಖಾಸಗಿ ಡಿಟೆಕ್ಟಿವ್ ಏಜೆಂಟ್ ಸತೀಶ್ ರೆಡ್ಡಿ ಎಂಬುವನಿಗೆ ಅರ್ಚನಾ ಕೊಲೆ ಮಾಡುವಂತೆ ಸುಪಾರಿ ನೀಡಿದ್ದಳು ಎನ್ನಲಾಗಿದೆ. ಇದಕ್ಕಾಗಿ ಅರ್ಚನಾ ನಡೆಸುವ ಯೋಗ ತರಭೇತಿ ಕ್ಲಾಸ್ಗೆ ಸೇರಿಕೊಂಡಿದ್ದ ಸತೀಶ್ ರೆಡ್ಡಿ ಅರ್ಚನಾಳೊಂದಿಗೆ ಸಲುಗೆ ಬೆಳೆಸಿ, ಗನ್ ಶೂಟಿಂಗ್ ತರಬೇತಿ ನೆಪದಲ್ಲಿ ತನ್ನ ಸ್ನೇಹಿತರ ಸಹಾಯದಿಂದ ಅರ್ಚನಾಳನ್ನು ಕಿಡ್ನ್ಯಾಪ್ ಮಾಡಿದ್ದ. ಕಿಡ್ನ್ಯಾಪ್ ಮಾಡಿ ಕಾರಿನಲ್ಲಿ ಕರೆದೊಯ್ಯುವ ವೇಳೆ ಸತೀಶ್ ರೆಡ್ಡಿ ಹಾಗೂ ಆತನ ಸ್ನೇಹಿತರು ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದರು. ಇದನ್ನು ವಿರೋಧಿಸಿದ ಅರ್ಚನಾ ಮೇಲೆ ದೈಹಿಕ ಹಲ್ಲೆ ಕೂಡ ನಡೆಸಿದ್ದರು. ಈ ವೇಳೆ ಅರ್ಚನಾ ಪ್ರಜ್ಞೆ ತಪ್ಪಿದ್ದು, ಸಾವನ್ನಪ್ಪಿದ್ದಾಳೆ ಎಂದು ಭಾವಿಸಿದ ಆರೋಪಿಗಳು ಶಿಡ್ಲಘಟ್ಟ ಬಳಿಯ ಅರಣ್ಯ ಪ್ರದೇಶದಲ್ಲಿ ಮಹಿಳೆಯನ್ನು ಬೆತ್ತಲೆ ಮಾಡಿ ಸಣ್ಣ ಗುಂಡಿ ತೋಡಿ ಮಣ್ಣು ಮತ್ತು ಮರದ ಕೊಂಬೆಗಳಿಂದ ಮುಚ್ಚಿ ಪರಾರಿಯಾಗಿದ್ದರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ವಕ್ಫ್ ಧರಣಿಗೂ, ಬಿಜೆಪಿ ಬಂಡಾಯಕ್ಕೂ ಶೋಭಾ ನಾಯಕಿಯಾಗಿದ್ದೇಕೆ?
ರಾತ್ರಿ ಎಚ್ಚರಗೊಂಡ ಅರ್ಚನಾ ಅಲ್ಲಿಂದ ಹತ್ತಿರದ ಗ್ರಾಮಕ್ಕೆ ತೆರಳಿದ್ದು, ಸ್ಥಳೀಯರ ಸಹಾಯದಿಂದ ದಿಬ್ಬೂರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಮಹಿಳೆ ದೂರಿನ ಆಧಾರದಲ್ಲಿ ಸತೀಶ್ ರೆಡ್ಡಿ, ಬಿಂದುಶ್ರೀ, ರಮಣ, ನಾಗೇಂದ್ರ, ರಚಿಚಂದ್ರ ಎಂಬ ಐವರನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.