ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆಯಲ್ಲಿ ವ್ಯಕ್ತಿಯೋರ್ವ ಕೊಚ್ಚಿಕೊಂಡು ಹೋಗುತ್ತಿರುವುದನ್ನು ನೋಡಿ ಮಹಿಳೆಯೊಬ್ಬಳು ಉಟ್ಟ ಸೀರೆಯನ್ನು ಬಿಚ್ಚಿ ಕೊಟ್ಟು ಜೀವ ಉಳಿಸಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ರೋಡಲ್ ಬಂಡ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಬಲದಂಡೆ ನಾಲೆಯಲ್ಲಿ ಖಾಸಗಿ ಶಿಕ್ಷಕರೊಬ್ಬರು ಸ್ನಾನಕ್ಕೆ ಹೋದಾಗ ಕಾಲು ಜಾರಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಇದೇ ವೇಳೆ ಹೊಲದ ಕಡೆಗೆ ಮಹಿಳೆಯೊಬ್ಬರು ಆ ದೃಶ್ಯವನ್ನು ನೋಡಿ ಮಾನದ ಹಂಗು ತೊರೆದು ಜೀವ ಉಳಿಸಿ ಸಾಹಸ ಮೆರೆದಿದ್ದಾರೆ .
ಶಿಕ್ಷಕನ ಜೀವ ಉಳಿಸಿದ ಮಹಿಳೆಯನ್ನು ಗ್ಯಾನಮ್ಮ ಕನಕೇರಿ ಎಂದು ಗುರುತಿಸಲಾಗಿದೆ. ಶಿಕ್ಷಕರೊಬ್ಬರು ನೀರಿನಲ್ಲಿ ಕೊಚ್ಚಿಕೊಂಡು ಹೋಗುವಾಗ ಇಬ್ಬರು ಯುವಕರು ಕೂಡ ಸಹಾಯಕ್ಕೆ ಮುಂದಾಗಿದ್ದಾರೆ ಹಾಗೂ ಯುವಕ ಒಬ್ಬ ನೀರಿಗೆ ಜಿಗಿದಿದ್ದಾನೆ.
ಅಷ್ಟರಲ್ಲಿ ಮಹಿಳೆ ಉಟ್ಟ ಸೀರೆಯನ್ನು ಬಿಚ್ಚಿ ನೀರಿನಲ್ಲಿ ಎಸೆದು ಪ್ರಾಣ ಉಳಿಸಿದ್ದಾಳೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ಶಿಕ್ಷಕನ ಹೆಸರು, ವಿವರ ತಿಳಿದು ಬಂದಿಲ್ಲ. ಜೀವ ಉಳಿಸಿದ ಬಳಿಕ ಧನ್ಯವಾದ ಸಲ್ಲಿಸಿ, ಅಲ್ಲಿಂದ ತೆರಳಿರುವುದಾಗಿ ವರದಿಯಾಗಿದೆ.
ಮಹಿಳೆಯು ಮಾನದ ಹಂಗು ತೊರೆದು ಜೀವ ಉಳಿಸಿದ್ದಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ .
