ಕನಕಗಿರಿಯನ್ನು ಬಾಲ್ಯವಿವಾಹ ಮುಕ್ತಗೊಳಿಸಲು ತಾಲೂಕಿನ ಎಲ್ಲ ಬಾಲ್ಯವಿವಾಹ ನಿಷೇಧಾಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಕೊಪ್ಪಳ ಜಿಲ್ಲೆಯ ಕನಕಗಿರಿ ತಹಶೀಲ್ದಾರ್ ವಿಶ್ವನಾಥ ಮುರಡಿ ಸೂಚನೆ ನೀಡಿದರು.
ಕನಕಗಿರಿ ತಹಶೀಲ್ದಾರ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಬಾಲ್ಯವಿವಾಹ ತಡೆ ಹಾಗೂ ಸಮನ್ವಯ ಸಮಿತಿ, ಮಹಿಳೆಯರ, ಮಕ್ಕಳ ಸಾಗಾಣಿಕೆ ತಡೆ ಸಮಿತಿ ಹಾಗೂ ಮಕ್ಕಳ ರಕ್ಷಣಾ ಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಸರ್ವೋಚ್ಛ ನ್ಯಾಯಾಲಯದ ರಿಟ್ 2017ರ ಬಾಲ್ಯವಿವಾಹ ತಡೆಗಟ್ಟುವಲ್ಲಿ ನಿರ್ಲಕ್ಷ್ಯ ತೋರುವ ಯಾವುದೇ ಬಾಲ್ಯವಿವಾಹ ನಿಷೇಧಾಧಿಕಾರಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಅನ್ವಯ ಪ್ರಕರಣವನ್ನು ದಾಖಲಿಸುವಂತೆ ನಿರ್ದೇಶಿಸಿದೆ. ಬಾಲ್ಯವಿವಾಹ ಪ್ರಕರಣಗಳು ಇದ್ದಲ್ಲಿ ಸಂವೇದನಾಶೀಲರಾಗಿ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ತಪ್ಪಿದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
“ಸಾಮೂಹಿಕ ವಿವಾಹ ಆಯೋಜಕರು ಕಡ್ಡಾಯವಾಗಿ ತಹಶೀಲ್ದಾರರು ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಂದ ಸಾಮೂಹಿಕ ವಿವಾಹ ಆಯೋಜನೆಗೆ ಅನುಮತಿ ಪಡೆದುಕೊಂಡ ನಂತರವೇ ಸಾಮೂಹಿಕ ವಿವಾಹಗಳನ್ನು ಆಯೋಜಿಸತಕ್ಕದ್ದು. ತಪ್ಪಿದಲ್ಲಿ, ಬಾಲ್ಯವಿವಾಹ ಜರುಗಿದ್ದು ಕಂಡುಬಂದಲ್ಲಿ, ಸಾಮೂಹಿಕ ವಿವಾಹ ಆಯೋಜಕರು ಸೇರಿದಂತೆ ಸಂಬಂಧಿಸಿದ ಎಲ್ಲರ ವಿರುದ್ಧ ಪ್ರಕರಣ ದಾಖಲಿಸಬೇಕು” ಎಂದು ಅಧಿಕಾರಿಗಳಿಗೆ ಮತ್ತು ಪೊಲೀಸರಿಗೆ ಸೂಚಿಸಿದರು.
“ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ಬಾಲ್ಯವಿವಾಹಕ್ಕೆ ಪ್ರಯತ್ನಿಸಿದಲ್ಲಿ ಅದೂ ಕೂಡ ಅಪರಾಧವಾಗಿದ್ದು, ಇನ್ನು ಮುಂದೆ ಬಾಲ್ಯವಿವಾಹ ಮಾಡಲು ಪ್ರಯತ್ನಿಸಿದರೂ ಕೂಡ ಪ್ರಕರಣವನ್ನು ದಾಖಲಿಸುವಂತೆ ಸೂಚಿಸಿದ್ದು, ಈ ಕುರಿತು ತಾಲೂಕಿನ ವ್ಯಾಪ್ತಿಯ ಎಲ್ಲ ಬಾಲ್ಯವಿವಾಹ ನಿಷೇಧಾಧಿಕಾರಿಗಳು ಕ್ರಮವಹಿಸಬೇಕು” ಎಂದು ತಿಳಿಸಿದರು.
“ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಕ್ಕಳ ಸ್ನೇಹಿ ವಾತಾವರಣ ಮತ್ತು ಮಕ್ಕಳ ಪರವಾದ ಪಂಚಾಯತ್‌ಗಳನ್ನಾಗಿಸಲು ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಕನಿಷ್ಠ 03 ತಿಂಗಳಿಗೊಮ್ಮೆ ಮಹಿಳೆಯರ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿಗಳ ಸಭೆಯನ್ನು ಕಡ್ಡಾಯವಾಗಿ ಆಯೋಜಿಸಿ ತಾಲೂಕು ಪಂಚಾಯತ್ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ಮಕ್ಕಳ ಸುರಕ್ಷತೆಗಾಗಿ ಸರ್ಕಾರವು ಮಕ್ಕಳ ರಕ್ಷಣಾ ನೀತಿ-2016 ಪರಿಷ್ಕರಣೆ-2023ನ್ನು ಜಾರಿಗೆ ತಂದಿದ್ದು, ಅದರನ್ವಯ ಪ್ರತಿ ಶೈಕ್ಷಣಿಕ ಸಂಸ್ಥೆಗಳಲ್ಲಿಯೂ ಮಕ್ಕಳ ಸುರಕ್ಷತಾ ಸಮಿತಿ, ಪೋಷಕರ ಸಮಿತಿಗಳನ್ನು ರಚಿಸಿ ನಿಯಮಿತವಾಗಿ ಸಭೆಯನ್ನು ಆಯೋಜಿಸಬೇಕು” ಎಂದು ಆದೇಶಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಶಾಲಾ ಹಂತದಲ್ಲೇ ಮಕ್ಕಳಲ್ಲಿ ಪರಿಸರ ಪ್ರೀತಿ ಬೆಳೆಸಬೇಕು: ಜಿಲ್ಲಾಧಿಕಾರಿ ದಿವ್ಯ ಪ್ರಭು
“ಮಕ್ಕಳ ಸಹಾಯವಾಣಿ-1098-112ರ ಬಗ್ಗೆ ಶಾಶ್ವತ ಗೋಡೆ ಬರಹಗಳನ್ನು ಬರೆಯಿಸಬೇಕು. ಮಕ್ಕಳ ಸಲಹಾ ಪೆಟ್ಟಿಗೆಯನ್ನು ಸ್ಥಾಪಿಸಿ ನಿಯಮಿತವಾಗಿ ಪರಿಶೀಲಿಸಬೇಕು. ಅನುದಾನಿತ ಮತ್ತು ಅನುದಾನರಹಿತ ಶೈಕ್ಷಣಿಕ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಪೊಲೀಸ್ ಪರಿಶೀಲನೆ ಕಡ್ಡಾಯವಾಗಿದೆ” ಎಂದು ತಹಶೀಲ್ದಾರರು ತಿಳಿಸಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಜಶೇಖರ್, ಆರೋಗ್ಯ ನಿರೀಕ್ಷಣಾಧಿಕಾರಿ ರಮೇಶ, ಸಮಾಜಕಾರ್ಯಕರ್ತ ರವಿಕುಮಾರ ಪವಾರ, ಸಾಂತ್ವನ ಸಹಾಯವಾಣಿ ಕೇಂದ್ರದ ಆಪ್ತಸಮಾಲೋಚಕಿ ನಿರ್ಮಲಾ, ಅಂಗನವಾಡಿ ಮೇಲ್ವಿಚಾರಕಿಯರು, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.