ಕಲ್ಯಾಣ ಮಂಟಪವೊಂದರಲ್ಲಿ ಒಳಚರಂಡಿ ಸ್ವಚ್ಛಗೊಳಿಸಲು ಮ್ಯಾನ್‌ಹೋಲ್‌ಗೆ ಕೂಲಿ ಕಾರ್ಮಿಕರನ್ನು ಇಳಿಸಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಘಟನೆ ಸಂಬಂಧ ದಾವಣಗೆರೆಯ ಬಡಾವಣೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ನಗರದ ಧರ್ಮಶಾಲಾ ಕಲ್ಯಾಣ ಮಂಟಪದ ಒಳಚರಂಡಿಗೆ ಕೂಲಿ ಕಾರ್ಮಿಕ ಸಿದ್ದೇಶ ಅವರನ್ನು ಇಳಿಸಲಾಗಿದೆ. ಮಂಟಪದ ಮಾಲೀಕರಾದ ರಾಜನಹಳ್ಳಿ ಜಾನಬಾಯಿ, ರಾಜನಹಳ್ಳಿ ಶ್ರೀನಿವಾಸಮೂರ್ತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಠಾಣೆಯಲ್ಲಿ ದಾವಣಗೆರೆ ಮಹಾನಗರ ಪಾಲಿಕೆಯ ಸಹಾಯಕ ಎಂಜಿನಿಯರ್ (ಯುಜಿಡಿ) ಪಿ.ಮಧುಸೂಧನ್ ದೂರು ದಾಖಲಿಸಿದ್ದಾರೆ.
ಒಳಚರಂಡಿ ಸ್ವಚ್ಛತೆಗಾಗಿ ಪಾಲಿಕೆಗೆ ದೂರು ನೀಡದೆ, ಕಾರ್ಮಿಕರನ್ನು ಚರಂಡಿಗೆ ಇಳಿಸಿ ಸ್ವಚ್ಛ ಮಾಡಿಸಲಾಗಿದೆ. ಹೀಗಾಗಿ, ಮಂಟಪದ ಮಾಲೀಕರು, ಮೇಲ್ವಿಚಾರಕರು ಹಾಗೂ ಇತರರ ವಿರುದ್ಧ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಅಧಿನಿಯಮ– 2013 ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.