ಮೈಸೂರು ಜಿಲ್ಲೆ, ಸರಗೂರು ಸಮುದಾಯ ಆರೋಗ್ಯ ಕೇಂದ್ರ ವತಿಯಿಂದ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಹಯೋಗದೊಂದಿಗೆ ‘ ವಿಶ್ವ ಸ್ತನ್ಯಪಾನ ಸಪ್ತಾಹ ‘ ಕಾರ್ಯ ಕ್ರಮವನ್ನು ಆಯೋಜಿಸಲಾಗಿತ್ತು.
ಮಕ್ಕಳ ತಜ್ಞರಾದ ಡಾ. ಜಯಮಾಲಾ ರವರು ಮಾತನಾಡಿ, ” ಮಗು ಜನಿಸಿದ ಅರ್ಧ ಗಂಟೆಯಿಂದ 1 ಗಂಟೆಯೊಳಗೆ ಮೊದಲ ಬಾರಿಗೆ ಎದೆಹಾಲುಣಿಸಬೇಕು. ಮೊದಲ 3 ದಿನ ಬರುವ ಗೀಬಿನ ಹಾಲನ್ನು (ಕೊಲೊಸ್ಟ್ರೋಮ್) ಮಗುವಿಗೆ ನೀಡಲೇಬೇಕು. ಮೊದಲು ಬರುವ ಹಳದಿ ವರ್ಣದ ಗಟ್ಟಿಹಾಲು ಮಗುವಿಗೆ ಮೊದಲ ಲಸಿಕೆ ಇದ್ದಂತೆ. ಕೊಲೊಸ್ಟ್ರೋಮ್‌ನಲ್ಲಿ ಪೌಷ್ಟಿಕಾಂಶ ಉತ್ಕೃಷ್ಟವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ಹೊಂದಿರುತ್ತದೆ. ಮುಂಬರುವ ದೀರ್ಘಕಾಲಿನ ಕಾಯಿಲೆಗಳನ್ನು ತಡೆಗಟ್ಟುತ್ತದೆ. ಮಗುವಿನ ಜಠರ ಸ್ವಚ್ಛವಾಗುತ್ತದೆ. 6 ತಿಂಗಳು ತುಂಬುವವರೆಗೂ ಕೇವಲ ಎದೆಹಾಲನ್ನೇ ಕೊಡಬೇಕು. “
” ವೈದ್ಯರು ತಿಳಿಸಿದ ಔಷಧಗಳನ್ನು ಹೊರತು ಪಡಿಸಿ ಎಂತಹ ಕಡುಬೇಸಿಗೆ ಇದ್ದರೂ ನೀರನ್ನು ಕುಡಿಸುವ ಅವಶ್ಯಕತೆ ಇರುವುದಿಲ್ಲ. ಎದೆಹಾಲನ್ನು ಹೊರತುಪಡಿಸಿ ಹರಳೆಣ್ಣೆ, ಜೇನುತುಪ್ಪ, ಸಕ್ಕರೆನೀರು, ಹಸುವಿನ ಹಾಲು, ಪೌಡರ್ ಹಾಲನ್ನು ಕೊಡಬಾರದು. 6 ತಿಂಗಳು ತುಂಬಿದ ನಂತರ ಎದೆಹಾಲಿನೊಂದಿಗೆ ಪೂರಕ–ಪೋಷಕ ಮೆದು ಆಹಾರ ಆರಂಭಿಸಬೇಕು. ಮಗುವಿಗೆ 2 ವರ್ಷ ತುಂಬವ ತನಕ ಎದೆಹಾಲನ್ನು ಮುಂದುರಿಸಬೇಕು. ಇದು ಮಗುವಿನ ಮೆದುಳು ಬೆಳವಣಿಗೆಗೂ ಅವಶ್ಯಕ ಹಾಗೂ ಮಗುವಿನ ಬುದ್ಧಿಮಟ್ಟವನ್ನು ಹೆಚ್ಚಿಸುತ್ತದೆ. “
” ಸೂಕ್ತ ರೀತಿಯಲ್ಲಿ ಎದೆಹಾಲುಣಿಸುವುದರಿಂದ ತಾಯಿ ಬೇಗ ಗರ್ಭ ಧರಿಸುವುದಿಲ್ಲ. ಇದು ನೈಸರ್ಗಿಕ ಕುಟುಂಬ ಯೋಜನೆ ಇದ್ದಂತೆ. 2 ವರ್ಷ ಸರಿಯಾಗಿ ಎದೆಹಾಲುಣಿಸಿದ ತಾಯಿಂದಿರಿಗೆ ಸ್ತನ ಕ್ಯಾನ್ಸರ್ ಹಾಗೂ ಗರ್ಭಕೋಶದ ಕ್ಯಾನ್ಸರ್ ಬರುವುದು ಅಪರೂಪ. ಸ್ತನ್ಯಪಾನ ಮಾಡಿಸುವ ತಾಯಿ–ಮಗುವಿನ ಬಾಂಧವ್ಯ ಸುಮಧುರವಾಗಿರುತ್ತದೆ. ಕುಟುಂಬದ ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತದೆ. ದೇಶದ ಆರ್ಥಿಕತೆಗೂ ಸಹಾಯಕವಾಗುತ್ತದೆ ” ಎಂದು ತಿಳಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ. ರವಿಕುಮಾರ್ ಮಾತನಾಡಿ ಮೊದಲ 3 ದಿನ ಬರುವ ಗೀಬಿನ ಹಾಲು ಕೆಟ್ಟ ಹಾಲಾಗಿದ್ದ ಕೊಡಬಾರದೆಂಬ ಮೂಢನಂಬಿಕೆ. ಮಗುವಿನ ಹೊಟ್ಟೆ ಸ್ವಚ್ಛವಾಗಲಿ ಎಂದು ಆರಂಭದ 3 ದಿನ ಹರಳೆಣ್ಣೆ ಚೀಪಿಸುವ ಪದ್ಧತಿ. ಕೇವಲ ಎದೆಹಾಲೇ 6 ತಿಂಗಳು ಸಾಕಾಗುವುದಿಲ್ಲ ಎಂಬ ಭಾವನೆ. ಕುಟುಂಬದಲ್ಲಿ ತಾಯಿಗೆ ಮಾನಸಿಕ ಬೆಂಬಲ ನೀಡುವವರ ಕೊರತೆ. ಕಾರ್ಯನಿರತ ಮಹಿಳೆಯರಿಗೆ ರಜೆಯ ಅನಾನುಕೂಲ. ಕೆಲಸದ ಸ್ಥಳದಲ್ಲಿ ಎದೆಹಾಲುಣಿಸುವ ಸೌಲಭ್ಯವಿಲ್ಲದಿರುವುದು.
ಎದೆಹಾಲುಣಿಸುವ ತಾಯಂದಿರಿಗೆ ಬರುವ ಸಂಶಯ ನಿವಾರಿಸಲು ಆಪ್ತಸಮಾಲೋಚನೆಯ ಕೊರತೆ. ಪೌಡರ್ ಹಾಲು, ಬಾಟಲಿ ಹಾಲಿಗೆ ಮಾರು ಹೋಗುವ ತಾಯಂದಿರು. ಸಿಸೇರಿಯನ್ ಆದ ತಾಯಂದಿರಿಗೆ, ಚೊಚ್ಚಲ ಅಪ್ರಾಪ್ತ ಬಾಣಂತಿಯರಿಗೆ, ಅವಳಿ–ಜವಳಿ ಮಕ್ಕಳಿದ್ದ, ಕಡಿಮೆ ತೂಕದ ಮಗುವಿರುವ ತಾಯಂದಿರಿಗೆ ಮಾಹಿತಿ ಕೊರತೆ. ಮಗುವಿಗೆ 2 ವರ್ಷ ತುಂಬುವ ಮೊದಲೇ ತಾಯಿ ಮತ್ತೆ ಗರ್ಭಿಣಿಯಾಗುವುದು. ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಮಾಹಿತಿ ನೀಡಿದರು.
ಸ್ತನ್ಯಪಾನ ಸಂರಕ್ಷಿಸಲು ಕೈಗೊಳ್ಳಬೇಕಾದ ಕ್ರಮಗಳು
- ಹೆರಿಗೆಗೂ ಮುನ್ನವೇ ‘ಕೊಲೊಸ್ಟ್ರೋಮ್’ ಬಗ್ಗೆ ತಾಯಿಗೆ ಮಾಹಿತಿ ಇರಬೇಕು.
- ಹೆರಿಗೆಯ ನಂತರ ಆಸ್ಪತ್ರೆಯಿಂದ ಹೋಗುವ ಮುನ್ನವೇ ಯಶಸ್ವಿಯಾಗಿ ಎದೆಹಾಲುಣಿಸಬಲ್ಲೆ ಎಂಬ ಭರವಸೆ ತಾಯಿಗೆ ಬಂದಿರಬೇಕು.
- ಎದೆಹಾಲುಣಿಸುವ ಅವಧಿಯಲ್ಲಿ ತಾಯಂದಿರಿಗೆ ಕುಟುಂಬದವರ ಸಹಕಾರ ಅತಿ ಮುಖ್ಯ.
- ತಾಯಿಗೆ ಪೌಷ್ಟಿಕ ಆಹಾರ ನೀಡಿ, ಸಂತೋಷವಾಗಿರುವಂತೆ ನೋಡಿಕೊಳ್ಳಬೇಕು.
- ಕಾರ್ಯನಿರತ ಮಹಿಳೆಯರಿಗೆ ಎದೆಹಾಲು ತೆಗೆಯುವ, ಸಂರಕ್ಷಿಸುವ ವಿಧಾನವನ್ನು ಕಲಿಸುವುದು, ಕೆಲಸದ ಸ್ಥಳದಲ್ಲಿಯೂ ಎದೆಹಾಲುಣಿಸಲು ಅನುಕೂಲ ಮಾಡಿಕೊಡುವುದು.
- ಮಗು ತೀವ್ರ ನಿಗಾ ಘಟಕದಲ್ಲಿದ್ದರೆ ಎದೆಹಾಲನ್ನು ನೀಡುವ ವಿಧಾನ, ಕಡಿಮೆ ತೂಕದ ಮಗು ಜನಿಸಿದಾಗ ‘ಕಾಂಗರು ಮದರ್ ಕೇರ್’ ವಿಧಾನ ತೋರಿಸಿಕೊಡುವುದು.
- ಪೌಡರ್ ಹಾಲು, ಬಾಟಲಿ ಹಾಲಿನ ಅಪಾಯದ ಬಗ್ಗೆ ತಾಯಂದಿರಲ್ಲಿ ಜಾಗೃತಿ ಮೂಡಿಸಬೇಕು.
ಸ್ತನ್ಯಪಾನಕ್ಕೆ ಆದ್ಯತೆ ನೀಡಿ, ಸುಸ್ಥಿರ ಬೆಂಬಲ ವ್ಯವಸ್ಥೆಗಳನ್ನು ರಚಿಸಿ ‘ ಸಪ್ತಾಹ–2025 ‘ ರ ಘೋಷಣೆಯಾಗಿದೆ. ಸ್ತನ್ಯಪಾನವನ್ನು ಸಂರಕ್ಷಿಸಿ, ಪೋತ್ಸಾಹಿಸಿ, ಮುಂದುವರಿಸಲು ಸರ್ಕಾರ, ಆರೋಗ್ಯ ಇಲಾಖೆ, ಸಂಘ–ಸಂಸ್ಥೆಗಳು, ಕುಟುಂಬದ ಸದಸ್ಯರೆಲ್ಲರೂ ಹೊಣೆ ಹೊರಬೇಕಾಗಿದೆ ಸ್ತನ್ಯಪಾನವನ್ನು ಸಂರಕ್ಷಿಸಲು ಸಂಘ–ಸಂಸ್ಥೆಗಳು ಮುಂದೆ ಬರಬೇಕು. ಕುಟುಂಬದ ಸದಸ್ಯರೆಲ್ಲರೂ ತಾಯಿಗೆ ಮಾನಸಿಕ ಬೆಂಬಲ ನೀಡಿ ಪೋತ್ಸಾಹಿಸಬೇಕು ಎಂದು ತಿಳಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್ ಮಾತನಾಡಿ ಈ ಕಾರ್ಯಕ್ರಮವನ್ನು ಮಾಡುತ್ತಿರುವುದು ತುಂಬಾ ಸಂತೋಷಕರವಾದ ವಿಷಯ ತಾಯಿ ಎದೆ ಹಾಲು ಉಣಿಸುವುದರಿಂದ ತಾಯಿ ಮತ್ತು ಮಗುವಿನ ಬಾಂಧವ್ಯ ಬೆಳೆಯುತ್ತದೆ, ಮತ್ತೆ ಎಲ್ಲಾ ತಾಯಂದಿರು ಕಡ್ಡಾಯವಾಗಿ ಹಾಲನ್ನು ಉಣಿಸಬೇಕು ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಆಗಸ್ಟ್. 10 ರಂದು ಬ್ಯಾರಿ ಅಕಾಡೆಮಿ ಗೌರವ ಪ್ರಶಸ್ತಿ ಪ್ರಧಾನ; ಕುಟುಂಬ ಸಮ್ಮಿಲನ ಕಾರ್ಯಕ್ರಮ : ಉಮರ್ ಯು ಹೆಚ್
ಕಾರ್ಯಕ್ರಮದಲ್ಲಿ ಆಡಳಿತ ವೈಧ್ಯಾಧಿಕಾರಿ ಡಾ. ಪಾರ್ಥಸಾರಥಿ, ದಂತ ವೈದ್ಯೆ ಡಾ. ಪೂರ್ಣಿಮಾ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಸಿಬ್ಬಂದಿ ವರ್ಗದವರಾದ ರವಿರಾಜ್ ಶರಣಪ್ಪ ರಮಣಿ, ಅರ್ಚನಾ, ಅಸೀಮಾ ಸುಲ್ತಾನ್ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರಾದ ಜಗದೀಶ್, ಮಹದೇವ್, ಹರೀಶ್, ಬಸಮ್ಮ, ಶಾಂತಿ, ಭಾಗ್ಯ, ಲಕ್ಷ್ಮಿ, ಮಾನಸ, ಮಂಜುಳಾ, ಶ್ವೇತಾ, ಸಹನಾ, ಶ್ವೇತಾ. ಎನ್. ವೈ, ಆಶಾ ಕಾರ್ಯಕರ್ತೆಯರು, ತಾಯಂದಿರು, ಸಾರ್ವಜನಿಕರು ಇನ್ನಿತರರು ಇದ್ದರು.