ಮನುಷ್ಯನ ಸ್ವಾರ್ಥಸಾಧನೆಗೆ ಪ್ರಾಕೃತಿಕ ಸಂಪತ್ತು ನಶಿಸುತ್ತಿರುವ ಈ ಸಂದರ್ಭದಲ್ಲಿ ವಿಶ್ವ ಭೂಮಿ ದಿನವನ್ನು ಗಿಡ ನೆಡುವುದಕ್ಕೆ ಸೀಮಿತಗೊಳಿಸದೆ ನಮ್ಮ ಬದುಕಿನ ಪ್ರತಿ ದಿನವೂ ಪ್ರಕೃತಿಯ ಉಳಿವಿಗೆ ನಿರಂತರ ಪ್ರಯತ್ನ ನಡೆಸಬೇಕೆಂದು ತಾಲೂಕು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ಕರೆ ನೀಡಿದರು.
ಶಿಡ್ಲಘಟ್ಟ ನಗರದ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಭೂಮಿ ದಿನಾಚರಣೆಯಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇತ್ತೀಚಿನ ವರ್ಷಗಳಲ್ಲಿ ಅಗತ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದ ಪ್ಲಾಸ್ಟಿಕ್ ಬಳಕೆಯು ಹೆಚ್ಚುತ್ತಿದೆ. ಇದು ಪರಿಸರ ಹಾಗೂ ಮಾನವನ ಆರೋಗ್ಯಕ್ಕೆ ಅಪಾಯಕಾರಿಯಾಗಿದ್ದು, ಆಹಾರದ ಮೂಲಕ ನಮ್ಮ ದೇಹ ಪ್ರವೇಶಿಸುತ್ತಿದೆ. ಜನರು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ ಪರಿಸರ ಸ್ನೇಹಿ ಪರ್ಯಾಯ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಎಸ್.ರಂಜಿತಾ ಮಾತನಾಡಿ, ಇಂದಿನ ಬಹುತೇಕ ಭೂಮಿ ಸಂಬಂಧಿತ ಸಮಸ್ಯೆಗಳಿಗೆ ಮಾನವನೇ ಕಾರಣ. ಪುರಾತನ ಕಾಲದಲ್ಲಿ ಸಾವಯವ ಗೊಬ್ಬರದ ಬಳಕೆಯಿಂದ ಭೂಮಿ ಫಲವತ್ತಾಗುತ್ತಿತ್ತು. ಆದರೆ ಈಗ ರಾಸಾಯನಿಕ ಗೊಬ್ಬರಗಳಿಂದ ಭೂಮಿಯ ಗುಣಮಟ್ಟ ಹದಗೆಡುತ್ತಿದೆ. ಸಾವಯವ ಕೃಷಿ ಮತ್ತು ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕೆಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ ಮಾತನಾಡಿ, ಮರಗಳ ಬೆಳೆವಣಿಗೆ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಸಾಲು ಮರದ ತಿಮ್ಮಕ್ಕ ಅವರ ಪಾತ್ರ ಪ್ರೇರಣಾದಾಯಕ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ : ಶಿಡ್ಲಘಟ್ಟ | ಶ್ರದ್ಧಾಭಕ್ತಿಯಿಂದ ನೆರವೇರಿದ ತಿಪ್ಪೇನಹಳ್ಳಿ ಆಂಜನೇಯ ಸ್ವಾಮಿ ದೀಪೋತ್ಸವ
ಇದೇ ವೇಳೆ ನ್ಯಾಯಾಲಯದ ಆವರಣದಲ್ಲಿ ಸಸಿಗಳನ್ನು ನೆಟ್ಟು ನೀರು ಹಾಕಲಾಯಿತು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಜಿ.ಭಾಸ್ಕರ್, ಶಹಾಬುದ್ದೀನ್ ಸೇರಿದಂತೆ ಇತರೆ ವಕೀಲರು ಉಪಸ್ಥಿತರಿದ್ದರು.