ಸೌದಿ ಅರೇಬಿಯಾದ ಅನಿವಾಸಿ ಕನ್ನಡಿಗರ ಸ್ವಾಗತ ಸಮಿತಿ ಮತ್ತು ಹೃದಯವಾಹಿನಿ – ಕರ್ನಾಟಕ ಒಗ್ಗೂಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ 17ನೇ ʼವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನʼವನ್ನು ಆಯೋಜಿಸಲಾಗಿದೆ. ಸಮ್ಮೇಳನವು ಸೌದಿ ಅರೇಬಿಯಾದ ದಮಾಮ್‌ನಲ್ಲಿ 2024ರ ಜನವರಿ 18 ಮತ್ತು 19 ರಂದು ನಡೆಯಲಿದೆ ಎಂದು ಅನಿವಾಸಿ ಭಾರತೀಯ ಉದ್ಯಮಿ ಹಾಗೂ ಸಮ್ಮೇಳನ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಬಿ. ಝಕರಿಯಾ ಜೋಕಟ್ಟೆ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು. “ಸೌದಿ ಅರೇಬಿಯಾದ ಇತಿಹಾಸದಲ್ಲೇ ಮೊದಲ ಬಾರಿಗೆ ʼವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನʼ ನಡೆಯುತ್ತಿದ್ದು, ಜಿಸಿಸಿ ದೇಶಗಳ ಕನ್ನಡಿಗರು ಸಮ್ಮೇಳನದಲ್ಲಿ ಭಾಗವಹಿಸುವುದರ ಮೂಲಕ ಪ್ರೋತ್ಸಾಹಿಸಬೇಕು” ಎಂದು ಝಕರಿಯಾ ಮನವಿ ಮಾಡಿದರು.
“ಸಮ್ಮೇಳನದಲ್ಲಿ ಸಾಹಿತ್ಯಕ್ಕೆ ಸಂಬಂದಪಟ್ಟಂತೆ ಕವಿಗೋಷ್ಠಿ, ಹಾಸ್ಯಗೋಷ್ಠಿ, ಮಾಧ್ಯಮಗೋಷ್ಠಿ ಹಾಗೂ ಅನಿವಾಸಿ ಕನ್ನಡಿಗರ ಗೋಷ್ಠಿ ಜರಗಲಿದ್ದು, ಭರತನಾಟ್ಯ, ಜಾನಪದ ನೃತ್ಯ, ನೃತ್ಯ ರೂಪ, ಯಕ್ಷಗಾನ, ಡೊಳ್ಳು ಕುಣಿತ, ದಫ್ ಮುಂತಾದ ಕಲೆಗಳು ಪ್ರದರ್ಶನಗೊಳ್ಳಲಿದೆ. ಕನ್ನಡದ ಸಹೋದರ ಭಾಷೆಗಳಾದ ತುಳು, ಕೊಂಕಣಿ, ಬ್ಯಾರಿ, ಕೊಡವ ಮತ್ತು ಅರೆ ಭಾಷೆಗಳ ಕಾರ್ಯಕ್ರಮಗಳನ್ನೂ ಸಮ್ಮೇಳನದಲ್ಲಿ ಸೇರಿಸಿಕೊಳ್ಳಲಾಗಿದೆ” ಎಂದು ತಿಳಿಸಿದರು.
“ಸಮ್ಮೇಳನದ ಉದ್ಘಾಟನೆಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಮಂತ್ರಿಸಲಾಗುವುದು. ವಿಧಾನಸಭಾಧ್ಯಕ್ಷರಾದ ಯು ಟಿ ಖಾದರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ್ ತಂಗಡಗಿ, ಕೃಷಿ ಸಚಿವರಾದ ಚೆಲುವರಾಯಸ್ವಾಮಿ, ಆರೋಗ್ಯ ಖಾತೆ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ಉನ್ನತ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ, ಪೌರಾಡಳಿತ ಮತ್ತು ಹಜ್ ಖಾತೆ ಸಚಿವರಾದ ರಹಿಂ ಖಾನ್ ಹಾಗೂ ಅನಿವಾಸಿ ಭಾರತೀಯ ವೇದಿಕೆಯ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಹಾಗೂ ಕನ್ನಡ ಅಭಿವೃದ್ದಿ ಪ್ರಾಧಿಕಾರದ ನಿಕಟ ಪೂರ್ವ ಅಧ್ಯಕ್ಷ ಪ್ರೊ ಎಸ್. ಜಿ. ಸಿದ್ದರಾಮಯ್ಯ ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ” ಎಂದರು.
ಈ ಸುದ್ದಿ ಓದಿದ್ದೀರಾ?: ಆಂಧ್ರಪ್ರದೇಶದ ಚುನಾವಣಾ ಲೆಕ್ಕಾಚಾರ ಬದಲಿಸುವರೇ ಪ್ರಶಾಂತ್ ಕಿಶೋರ್?
“ಕುದ್ರೋಳಿ ಗಣೇಶ್ ಅವರ ತಂಡದಿಂದ ಮ್ಯಾಜಿಕ್ ಶೋ, ಮಿಮಿಕ್ರಿ ಗೋಪಿ ಅವರಿಂದ ಸ್ವರಾನುಕರಣೆ, ಮಹದೇವ ಸತ್ತಿಗೇರಿ ಅವರಿಂದ ಹಾಸ್ಯ ಭಾಷಣ, ಗೋ ನಾ ಸ್ವಾಮಿ, ಪುಷ್ಪ ಆರಾಧ್ಯ, ಅನಿಲ್ ಬಾಸಗಿ ಮತ್ತು ಶಿವು ಮುಂತಾದ ಗಾಯಕರಿಂದ ಸ್ವರಮಂಜರಿ, ರಂಗ ಸಂಸ್ಕೃತಿ ಬೆಂಗಳೂರು ತಂಡದಿಂದ ಕಿರು ನಗೆನಾಟಕ, ಬಹರೇನ್ ಕಲಾವಿದರಿಂದ ಯಕ್ಷಗಾನ, ಮಂಗಳೂರಿನ ಬ್ಯಾರಿ ಕಲಾವಿದರಿಂದ ದಫ್ ಪ್ರದರ್ಶನ, ಪುಷ್ಕರ ಪರ್ಫಾರ್ಮಿಂಗ್ ಆರ್ಟ್ಸ್ ಬೆಂಗಳೂರು ಇವರಿಂದ ಭರತನಾಟ್ಯ, ಸಾಗರ ಮತ್ತು ಮಂಡ್ಯ ಜಾನಪದ ಕಲಾವಿದರಿಂದ ಡೊಳ್ಳು ಕುಣಿತ ಹಾಗೂ ಇನ್ನು ಹಲವಾರು ಕಲಾವಿದರಿಂದ ವೈವಿಧ್ಯಮಯ ಕಾರ್ಯಕ್ರಮಗಳು ಸೌದಿ ಅರೇಬಿಯಾದ ಕನ್ನಡಿಗರನ್ನು ರಂಜಿಸಲಿವೆ” ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ ಸ್ಥಾಪಕ ಅಧ್ಯಕ್ಷ, ಕೆ.ಪಿ. ಮಂಜುನಾಥ್ ಸಾಗರ್, ಅನಿವಾಸಿ ಕನ್ನಡಿಗರ ಸ್ವಾಗತ ಸಮಿತಿ ಅಧ್ಯಕ್ಷ ಸತೀಶ್ ಬಜಾಲ್, ಜೊತೆ ಕಾರ್ಯದರ್ಶಿ ಪ್ರವೀಣ್ ಪೀಟರ್ ಅರೇನ್ಹಾ, ಕೋಶಾಧಿಕಾರಿ ಅಯಾಝ್ ಕೈಕಂಬ ಹಾಗೂ ಸಂಯೋಜಕ ಅಶ್ರಫ್ ನೌಶಾದ್ ಕೊಲ್ಯ ಉಪಸ್ಥಿತರಿದ್ದರು.
ಈ ಸುದ್ದಿ ಓದಿದ್ದೇನೆ, ಇದು ಖಾಸಗಿ ಸಂದರ್ಭದಲ್ಲಿ ಸೌದಿ ಅರೇಬಿಯಾದ ನಮ್ಮ ಕನ್ನಡಿಗರಿಗೆ ಗೌರವದ ಅವಕಾಶವನ್ನು ನೀಡುತ್ತಿದೆ. ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ಯಶಸ್ವಿ ಆಯೋಜನೆಗೆ ಸ್ವಾಗತ. ಈ ಸಮ್ಮೇಳನದಲ್ಲಿ ನಮ್ಮ ಕನ್ನಡ ಸಾಹಿತ್ಯ, ಕಲೆ, ಸಂಸ್ಕೃತಿಗಳು ಚಿರಸ್ಥಾಯಿಗಳಾಗಲಿವೆ. ಕನ್ನಡಿಗರ ಹೃದಯದಲ್ಲಿ ನಮ್ಮ ಭಾಷೆಯ ಬೆಳಕನ್ನು ಹರಿಸುತ್ತಿದೆ. ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿವಾದನೆಗಳು, ಆಗಮಿಸುವ ಸಮ್ಮೇಳನದಲ್ಲಿ ಅವರ ಸ್ವಾಗತ ದೊರಕಲಿದೆ. ನಮ್ಮ ಹೆಮ್ಮೆ ಕನ್ನಡಿಗರ ಹಾಗೂ ಕನ್ನಡ ಸಾಹಿತ್ಯದ ಮುಕ್ಕಾಲು ಪಾಲು ಸಮಮೇಳನದ ಸಫಲತೆಗೆ! 🙌💐🇮🇳 #ಕನ್ನಡ #ಸಂಸ್ಕೃತಿ #ಸಮ್ಮೇಳನ