ಅನ್ನಭಾಗ್ಯ ಅಕ್ಕಿ ಕಳವು ಪ್ರಕರಣದಲ್ಲಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಸಹೋದರ ರಾಜು ರಾಠೋಡ್ ಎಂಬಾತನನ್ನು ಯಾದಗಿರಿ ಜಿಲ್ಲೆಯ ಶಹಾಪುರ ಪೊಲೀಸರು ಬಂಧಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ, ಶಹಾಪುರದಲ್ಲಿ ಅನ್ನಭಾಗ್ಯ ಅಕ್ಕಿ ಕಳ್ಳತನ ಪ್ರಕರಣಗಳು ವರದಿಯಾಗುತ್ತಲೇ ಇವೆ. ಅಕ್ಕಿ ಕಳ್ಳರನ್ನು ಹಿಡಿಯಲು ಪೊಲೀಸರು ತನಿಖೆ ನಡೆಸುತ್ತಿದ್ದರು. ಅಂತೆಯೇ, ರಾಜು ರಾಠೋಡ್ ನಡೆಸುತ್ತಿರುವ ಶ್ರೀ ಲಕ್ಷ್ಮೀ ತಿಮ್ಮಪ್ಪ ರೈಸ್ ಮಿಲ್ ಮೇಲೆ ಶನಿವಾರ ದಾಳಿ ನಡೆಸಿದ್ದಾರೆ. ಈ ವೇಳೆ, ಅನ್ನಭಾಗ್ಯ ಯೋಜನೆಯ 550 ಕ್ವಿಂಟಾಲ್ ಅಕ್ಕಿ ಪತ್ತೆಯಾಗಿದೆ. ತಕ್ಷಣ ರಾಜು ರಾಠೋಡ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇತ್ತೀಚೆಗೆ, ರಾಮನಗರ, ಗದಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅನ್ನಭಾಗ್ಯ ಅಕ್ಕಿ ಕಳ್ಳತನ ಪ್ರಕರಣಗಳು ವರದಿಯಾಗುತ್ತಿವೆ. ಹೀಗಾಗಿ, ಅಕ್ಕಿ ಕಳವಿಗೆ ಕಡಿವಾಣ ಹಾಕಲು ಯತ್ನಿಸುತ್ತಿರುವ ಆಹಾರ ಇಲಾಖೆ, ಅಕ್ಕಿ ಕದ್ದವರನ್ನು ಗಡಿಪಾರು ಮಾಡಲು ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ.