ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆ ಖಂಡಿಸಿ ಸೆಪ್ಟೆಂಬರ್ 3ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ(ದಸಂಸ) ಯಾದಗಿರಿ ಜಿಲ್ಲಾ ಸಂಚಾಲಕ ಮರೆಪ್ಪ ಚೆಟ್ಟೇರಕರ್ ತಿಳಿಸಿದರು.
ಯಾದಗಿರಿ ಪತ್ರಿಕಾ ಭವನದಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ವಿರೋಧ ಪಕ್ಷವಾಗಿ ಸಮರ್ಥವಾಗಿ ಕೆಲಸ ಮಾಡಲಾಗದ ಬಿಜೆಪಿಯು ಜೆಡಿಎಸ್ ಜೊತೆಗೂಡಿ ರಾಜ್ಯಪಾಲರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಜನರಿಂದ ಆಯ್ಕೆಯಾದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿದೆ” ಎಂದು ಆರೋಪಿಸಿದರು.
“ಸಂವಿಧಾನದ ಆಶಯಗಳ ಅಡಿಯಲ್ಲಿ, ರಾಷ್ಟ್ರಪತಿಗಳ ನೇರ ಸುಪರ್ದಿಯಲ್ಲಿ ಕಾರ್ಯನಿರ್ವಹಿಸಬೇಕಾದ ರಾಜ್ಯಪಾಲರು ಪ್ರಧಾನಿ ಹಾಗೂ ಗೃಹಸಚಿವರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ಸಂವಿಧಾನ-ಪ್ರಜಾಪ್ರಭುತ್ವ-ಒಕ್ಕೂಟ ವ್ಯವಸ್ಥೆಗೆ ಧಕ್ಕೆಯುಂಟು ಮಾಡುತ್ತಿರುವುದು ವಿಷಾದಕರ ಸಂಗತಿ” ಎಂದು ತಿಳಿಸಿದರು.
ಜೆಡಿಎಸ್‌ನ ಎಚ್ ಡಿ ಕುಮಾರಸ್ವಾಮಿ, ಬಿಜೆಪಿಯ ಮುರುಗೇಶ್ ನಿರಾಣಿ, ಜನಾರ್ದನ ರೆಡ್ಡಿ ಹಾಗೂ ಶಶಿಕಲಾ ಜೊಲ್ಲೆಯ ವಿರುದ್ಧ ಲೋಕಾಯುಕ್ತ ಮತ್ತು ಎಸ್‌ಐಟಿಯಂಥ ತನಿಖಾ ಸಂಸ್ಥೆಗಳು ಪ್ರಾಸಿಕ್ಯೂಷನ್ ನಡೆಸಲು ಅನುಮತಿ ಕೋರಿ ವರ್ಷವಾಗುತ್ತ ಬಂದಿದೆ. ಆದರೂ ಅನುಮತಿ ನೀಡದ ರಾಜ್ಯಪಾಲರು ಖಾಸಗಿ ವ್ಯಕ್ತಿ ನೀಡಿದ ದೂರನ್ನು ಆಧರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಒಂದೇ ದಿನದಲ್ಲಿ ಶೋಕಾಸ್ ನೋಟೀಸ್ ನೀಡಿದ್ದಾರೆ. ಅಲ್ಲದೇ, ತನಿಖೆಗೆ ಅನುಮತಿ ನೀಡಿರುವುದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ನಡೆದುಕೊಳ್ಳುತ್ತಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿದೆ” ಎಂದು ದೂರಿದರು.
“ಸಿದ್ದರಾಮಯ್ಯರನ್ನು ಮಣಿಸಲು ಬಿಜೆಪಿ-ಜೆಡಿಎಸ್ ಮಸಲತ್ತು ನಡೆಸುತ್ತಿವೆ. ತಳ ಸಮುದಾಯಗಳ ಪ್ರತಿನಿಧಿಯಾಗಿ ಬೆಳೆದುಬಂದಿರುವ ಸಿದ್ಧರಾಮಯ್ಯ ಅವರನ್ನು ಸೈದ್ಧಾಂತಿಕವಾಗಿ ಸೋಲಿಸುವುದು ಕಷ್ಟ. ಸಿದ್ದರಾಮಯ್ಯನವರಿಗೆ ಭ್ರಷ್ಟಾಚಾರದ ಖಯಾಲಿ ಇಲ್ಲದಿರುವುದು ಬಿಜೆಪಿ- ಜೆಡಿಎಸ್‌ನವರಿಗೆ ದೊಡ್ಡ ತಲೆನೋವಾಗಿದೆ. ಯಾವುದೂ ಸಿಗದೇ ಇದ್ದಾಗ ತಾವೇ ಮಂಜೂರು ಮಾಡಿದ್ದ ಸೈಟನ್ನು ವಿವಾದಮಯಗೊಳಿಸಿ, ಅದನ್ನು ಸಿದ್ದರಾಮಯ್ಯನವರು ತಮ್ಮ ಅಧಿಕಾರಾವಧಿಯಲ್ಲಿ ನಡೆಸಿರುವ ಅಕ್ರಮ ಎಂಬಂತೆ ಬಿಂಬಿಸಿ ಇಲ್ಲದ ವಿವಾದವನ್ನು ಸೃಷ್ಟಿಸುತ್ತಿದ್ದಾರೆ” ಎಂದು ಕಿಡಿಕಾರಿದರು.
“ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷ ಅಥವಾ ಸರ್ಕಾರಗಳ ಜನವಿರೋಧಿ ನೀತಿಗಳನ್ನು ಖಂಡಿಸಿ ದಸಂಸ ಹೋರಾಟ ಮಾಡುತ್ತಲೇ ಇದೆ. ಮುಡಾ ಪ್ರಕರಣವು ಕುತಂತ್ರ ರಾಜಕಾರಣದ ಭಾಗ. ಹಾಗಾಗಿ, ಇದನ್ನು ದಸಂಸ ಖಂಡಿಸುತ್ತದೆ. ತಳಸಮುದಾಯದ ನಾಯಕನನ್ನು ಮಣಿಸುವ ದುಷ್ಟಕಾರಣಗಳಿಗಾಗಿ ರಾಜ್ಯಪಾಲರನ್ನು ಬಳಸಿಕೊಂಡು ಬಲಿಪಶು ಮಾಡಲು ನಡೆಸುವ ಕುಚೋದ್ಯಗಳನ್ನು ಸಹಿಸಿಕೊಳ್ಳಲು ಸಾಧವಿಲ್ಲ” ಎಂದು ಮರೆಪ್ಪ ಚೆಟ್ಟೇರಕರ್ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಸರ್ಕಾರಿ ಪದವಿ ಮಹಾವಿದ್ಯಾಲಯ ಉಳಿಸುವಂತೆ ಎಐಡಿಎಸ್‌ಒ ಆಗ್ರಹ
“ಈ ಹಿನ್ನೆಲೆಯಲ್ಲಿ ಬಿಜೆಪಿ ಜೆಡಿಎಸ್‌ನ ದುಷ್ಟತನದ ವಿರುದ್ಧ ಹೋರಾಟ ನಡೆಸಲೇಬೇಕಿದೆ. ಅದಕ್ಕಾಗಿ ಸೆಪ್ಟೆಂಬರ್ 3ರಂದು ದಲಿತ ಸಂಘರ್ಷ ಸಮಿತಿಯು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನಾ ಸಭೆಯನ್ನು ಹಮ್ಮಿಕೊಂಡಿದೆ. ಈ ಸಭೆಗೆ ದಲಿತರು, ವಿದ್ಯಾರ್ಥಿ-ಯುವಜನರು, ಮಹಿಳೆಯರು, ಹಿಂದುಳಿದ ವರ್ಗದವರು, ಪ್ರಗತಿಪರರು ಹಾಗೂ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು” ಎಂದು ಮನವಿ ಮಾಡಿದರು.
ಗೋಪಾಲ ತೆಳಿಗೇರಿ, ಬಸವರಾಜ ಗುಡಿಮನಿ, ಮಲ್ಲಿನಾಥ ಸುಂಗುಲ್ಕರ್, ಸೈದಪ್ಪ ಕುಲೂರ್, ಮರೆಪ್ಪ ಜಾಲಿಮಂಚಿ, ಲಾಲಪ್ಪ ತಲಾರಿ, ಬಸ್ಸು ಬೋಳಾರಿ, ದ ವಿ ಸಂಪತ್ ಚಿನ್ನಾಕರ್, ಶ್ರೀಕಾಂತ್ ತಲಾರಿ, ಭೀಮಣ್ಣ ರಾಕಮಗೇರಿ, ವಸಂತ್ ಸುಂಗುಲ್ಕರ್, ಭೀಮಣ್ಣ ಸುಂಗುಲ್ಕರ್, ಮರಿಲಿಂಗ ಕುರುಕುಂಬಳ, ಸತೀಶ್ ಬಡಿಗೇರ್, ಜೈಭೀಮ್ ಕೊಲ್ಲೂರ್ಕರ್, ರಾಕೇಶ್ ಬನ್ನೇಟ್ಟಿ, ಬಸವರಾಜ್ ಕೂಡ್ಲಿಗಿ ಸೇರಿದಂತೆ ಇತರರು ಇದ್ದರು.