ಯಾದಗಿರಿ ಜಿಲ್ಲೆಯ ಶಹಾಪೂರ ನಗರದ ವಿಶ್ವ ಪ್ರಸಿದ್ಧ ಪ್ರವಾಸೋದ್ಯಮ ತಾಣವಾದ ‘ಬುದ್ಧ ಮಲಗಿದ ಬೆಟ್ಟ’ದ ಯೋಜನೆಯನ್ನು ಜನೋಪಯೋಗಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿ ಭಾರತೀಯ ಬೌದ್ಧ ಮಾಹಾಸಭಾದ ಮುಖಂಡರು ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ್ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
“ಬುದ್ಧ ಮಲಗಿದ ಬೆಟ್ಟವು ಕರ್ನಾಟಕ ರಾಜ್ಯಕ್ಕೆ ವಿಶ್ವಮಟ್ಟದ ಖ್ಯಾತಿ ತಂದುಕೊಟ್ಟ ನಿಸರ್ಗದ ಅದ್ಭುತ ಪ್ರವಾಸಿತಾಣವಾಗಿದೆ. ಸಗರಾದ್ರಿ ಬೆಟ್ಟದಲ್ಲಿರುವ ಪ್ರಾಚೀನ, ಐತಿಹಾಸಿಕ, ಸಾಂಸ್ಕೃತಿಕ ನೆಲೆಗಳು, ಬೌದ್ಧ, ಶೈವ, ವೈಷ್ಣವ, ಸೂಫಿ ಶರಣ ಪರಂಪರೆಯ ಕುರುಹುಗಳ ತಾಣವಾಗಿದೆ. ಇಲ್ಲಿನ ಪರಿಸರ ಖನಿಜ, ಸಸ್ವರಾಶಿ, ಜೀವಸಂಪತ್ತು ಸಹ ವೈಶಿಷ್ಟಪೂರ್ಣವಾಗಿದೆ” ಎಂದು ಮಹಾಸಭಾ ಹೇಳಿದೆ.
“ಸರ್ಕಾರವು ಬುದ್ಧ ಮಲಗಿದ ಬೆಟ್ಟವನ್ನು ಪ್ರವಾಸಿತಾಣವೆಂದು ಘೋಷಿಸಿ ಕೋಟ್ಯಾಂತರ ರೂಪಾಯಿ ಅನುದಾನ ಖರ್ಚುಮಾಡುತ್ತಾ ಬಂದಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷತನದಿಂದ ಈ ತಾಣದ ಅಭಿವೃದ್ಧಿ ಯೋಜನೆ ದಶಕಗಳಿಂದ ತೆವಳುತ್ತಿದೆ. ಅಲ್ಲದೆ, ಯೋಜನೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದಕ್ಕೆ ಕಳಪೆ ಕಾಮಗಾರಿಗಳು ಸಾಕ್ಷಿಯಾಗಿವೆ. ಇಲ್ಲಿನ ಅವ್ಯವಸ್ಥೆ ಮತ್ತು ಕಾನೂನು ಬಾಹಿರ ಜನವಿರೋಧಿ ಚಟುವಟಿಕೆಗಳ ಬಗ್ಗೆ ಹಲವಾರು ಸಂಘ ಸಂಸ್ಥೆಗಳು ಹಲವು ಭಾರಿ ಮನವಿ ಸಲ್ಲಿಸಿದರು. ಯಾವುದೇ ಪರಿಹಾರ ಕ್ರಮ ಕೈಗೊಂಡಿಲ್ಲ” ಎಂದು ಬೌದ್ಧ ಮಹಾಸಭಾದ ರಾಜ್ಯಾಧ್ಯಕ್ಷ ಸೂರ್ಯಕಾಂತ ನಿಂಬಾಳಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮನವಿ ಸಲ್ಲಿಸುವ ವೇಳೆ ಸುರೇಶ ಎಸ್, ವೆಂಕಟೇಶ್ ಹೊಸಮನಿ, ರಣವೀರ ಹೊಸಮನಿ, ಬುದ್ಧಘೋಷ ದೇವಿಂದ್ರ ಹೆಗಡೆ, ಬಾಬುರಾವ್ ಭೂತಾಳಿ, ಮಲ್ಲಣ್ಣ ಕುರಕುಂದಿ, ಬಸವರಾಜ ಗುಡಿಮನಿ, ವಿಶ್ವ ನಾಟೇಕರ್ ಇದ್ದರು.
ವರದಿ: ಮಿಲಿಂದ್ ಸಾಗರ, ಸಿಟಿಜನ್ ಜರ್ನಲಿಸ್ಟ್