ವಿದ್ಯಾರ್ಥಿಗಳಲ್ಲಿ ಉನ್ನತ ಗುರಿ, ಆತ್ಮವಿಶ್ವಾಸ ಹಾಗೂ ಸಾಧನೆಯ ಮನೋಭಾವ ಬೆಳೆಸುವ ಉದ್ದೇಶದಿಂದ ಅಜೀಂ ಪ್ರೇಮ್‌ಜಿ ಶಾಲೆಯಲ್ಲಿ ಕನಸು ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೇವಾ ಟ್ರಸ್ಟ್, ಹುಲ್ಕಲ್ (ಜೆ) ವತಿಯಿಂದ ಗುರುವಾರ ಆಯೋಜಿಸಿದ್ದ ‘ಸಾಧಕರೊಂದಿಗೆ ಸಂವಾದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ’ ಅರ್ಥಪೂರ್ಣವಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಸಾಧಕರ ಜೀವನಾನುಭವಗಳು, ಪ್ರೇರಣಾದಾಯಕ ಸಂವಾದ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಮಹತ್ವ, ವ್ಯಕ್ತಿತ್ವ ವಿಕಸನ ಹಾಗೂ ಸಮಾಜಮುಖಿ ಚಿಂತನೆಯ ಕುರಿತು ಅರಿವು ಮೂಡಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯಾದಗಿರಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಚನ್ನಬಸಪ್ಪ (ಕೆಎಎಸ್) ಅವರು ತಮ್ಮ ಜೀವನ ಪಯಣವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ‘ಬಡತನ, ಸಂಕಷ್ಟ ಮತ್ತು ಅನೇಕ ಸವಾಲುಗಳ ನಡುವೆಯೂ ಶಿಕ್ಷಣವನ್ನು ಕೈಬಿಡದೆ ಕಠಿಣ ಪರಿಶ್ರಮ, ಸಮಯದ ಸದ್ಬಳಕೆ ಹಾಗೂ ಶಿಸ್ತುಬದ್ಧ ಅಧ್ಯಯನದ ಮೂಲಕ ಕರ್ನಾಟಕ ಆಡಳಿತ ಸೇವೆಗೆ ಆಯ್ಕೆಯಾದ ಅನುಭವವನ್ನು ವಿವರಿಸಿದರು.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೇಗೆ ಸಿದ್ಧತೆ ನಡೆಸಬೇಕು, ಅಧ್ಯಯನದ ಕ್ರಮ ಹೇಗಿರಬೇಕು, ಗುರಿ ಸಾಧಿಸಲು ಆತ್ಮವಿಶ್ವಾಸ ಮತ್ತು ನಿರಂತರ ಪರಿಶ್ರಮದ ಮಹತ್ವವೇನು ಎಂಬುದರ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ ಅವರು, ಯಶಸ್ಸಿನ ಹಾದಿಯಲ್ಲಿ ಶಿಸ್ತು, ದೃಢಸಂಕಲ್ಪ ಮತ್ತು ಪರಿಶ್ರಮವೇ ನಿಜವಾದ ಬಂಡವಾಳ ಎಂದು ಹೇಳಿದರು. ಬಳಿಕ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿ ಅವರಲ್ಲಿದ್ದ ಸಂದೇಹಗಳನ್ನು ನಿವಾರಿಸಿದರು.
ಕನಸು ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೇವಾ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ, ಅಭಿಯಂತರ ಹಾಗೂ ಯುವ ಬರಹಗಾರ ದೇವಿಂದ್ರ ಹುಲ್ಕಲ್ (ಜೆ) ಹಾಸ್ಯ ಭಾಷಣದ ಮೂಲಕ ವಿದ್ಯಾರ್ಥಿಗಳ ಗಮನ ಸೆಳೆದರು. ‘ಶಿಕ್ಷಣವು ಕೇವಲ ಉದ್ಯೋಗ ಪಡೆಯುವ ಸಾಧನವಲ್ಲ, ಉತ್ತಮ ವ್ಯಕ್ತಿತ್ವ ನಿರ್ಮಾಣದ ಅಡಿಪಾಯವಾಗಿದೆ. ಬದುಕಿನಲ್ಲಿ ದೊಡ್ಡ ಕನಸುಗಳನ್ನು ಕಂಡು ಅವುಗಳನ್ನು ನನಸಾಗಿಸಲು ನಿರಂತರ ಪ್ರಯತ್ನಿಸಬೇಕು ಹಾಗೂ ಸಮಾಜಮುಖಿ ಚಿಂತನೆಯೊಂದಿಗೆ ಬೆಳೆಯಬೇಕು’ ಎಂದು ಅವರು ಕರೆ ನೀಡಿದರು.

ಅಜೀಂ ಪ್ರೇಮ್‌ಜಿ ಶಾಲೆಯ ಪ್ರಾಂಶುಪಾಲ ಅನಿಲ್ ಎಸ್. ಅಂಗಡಿಕಿ ಮಾತನಾಡಿ, ‘ಇಂತಹ ಸಂವಾದ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಜೀವನದಲ್ಲಿ ಹೊಸ ದಿಕ್ಕು ತೋರಿಸುವ ಪ್ರೇರಣೆಯ ವೇದಿಕೆಗಳಾಗಿವೆ. ಕೆಎಎಸ್ ಅಧಿಕಾರಿ ಚನ್ನಬಸಪ್ಪ ಅವರ ಹೋರಾಟಮಯ ಬದುಕನ್ನು ಆದರ್ಶವಾಗಿಸಿಕೊಂಡು ವಿದ್ಯಾರ್ಥಿಗಳು ಉನ್ನತ ಗುರಿ ಹೊಂದಿ ಸಮಾಜ ಸೇವೆಗೆ ಮುಂದಾಗಬೇಕು’ ಎಂದು ಸಲಹೆ ನೀಡಿದರು.
ಸಂವಾದ, ಸಾಹಿತ್ಯ, ಸಂಗೀತ ಹಾಗೂ ಮೌಲ್ಯಾಧಾರಿತ ಸಂದೇಶಗಳ ಸಮ್ಮಿಲನವಾಗಿ ನಡೆದ ಕಾರ್ಯಕ್ರಮ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಸಾಧನೆಯ ಕನಸು ಮತ್ತು ಸಾಮಾಜಿಕ ಜವಾಬ್ದಾರಿಯ ಮನೋಭಾವ ಬೆಳೆಸುವಲ್ಲಿ ಯಶಸ್ವಿಯಾಗಿ ನಡೆಸಲಾಯಿತು.
ಇದನ್ನು ಓದಿದ್ದೀರಾ? ಕಲಬುರಗಿ | ನೀಟ್ ಅಕ್ರಮ ಖಂಡಿಸಿ ಕರಾದಸಂಸ ಧರಣಿ; ಧರ್ಮೇಂದ್ರ ಪ್ರಧಾನ ರಾಜೀನಾಮೆಗೆ ಆಗ್ರಹ
ಶಾಲೆಯ ಶಿಕ್ಷಕ ಮುರಳೀಧರ ಕಾರ್ಯಕ್ರಮ ನಿರೂಪಿಸಿ, ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿಗಳು ಕಾರ್ಯಕ್ರಮದುದ್ದಕ್ಕೂ ಆಸಕ್ತಿಯಿಂದ ಭಾಗವಹಿಸಿ ಸಾಧಕರ ಜೀವನಾನುಭವಗಳನ್ನು ಆಲಿಸುವುದರ ಜೊತೆಗೆ ತಮ್ಮ ಸಂದೇಹಗಳಿಗೆ ಉತ್ತರ ಪಡೆದರು.





