ಯಾದಗಿರಿ ಜಿಲ್ಲೆಯ ವಡಗೇರಾ ಪಟ್ಟಣದ ವಾರ್ಡ್ ನಂಬರ್ 3ರಲ್ಲಿ ಇರುವ ದಲಿತರ ಮನೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಇದ್ದು, ಆದಷ್ಟು ಬೇಗ ಈ ಸಮಸ್ಯೆ ಪರಿಹರಿಸಬೇಕು ಎಂದು ಮನವಿ ಮಾಡುತ್ತಿದ್ದಾರೆ.
ವಾರ್ಡ್‌ನಲ್ಲಿರುವ ಬಾಷುಮೀಯಾ ಕಟ್ಟಡ ಹಿಂದೆ ಸುಮಾರು ನಲವತ್ತು ದಲಿತರ ಮನೆಗಳಿದ್ದು ಇಲ್ಲಿರುವ ಮನೆಗಳಿಗೆ ಸುಮಾರು ಹತ್ತು ವರ್ಷಗಳಿಂದ ಕುಡಿಯುವ ನೀರಿನ ಸೌಲಭ್ಯ ಇಲ್ಲದೆ ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದು, ಈ ಸಂಬಂಧ ಹಲವಾರು ಬಾರಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರು.
ಕೂಡಲೇ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕೆಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಮನವಿ ಪತ್ರವನ್ನು ವಡಗೇರಾ ತಾಲೂಕು ಮಾದಿಗ ಮೀಸಲಾತಿ ಹೋರಾಟ ಸಮಿತಿ ಯುವ ಘಟಕ ಅಧ್ಯಕ್ಷ ಹಣಮಂತ ಒಡ್ಕರ್ ಅವರು ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ.
ಒಂದು ವೇಳೆ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸದಿದ್ದಲ್ಲಿ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸೈದಪ್ಪ ಪರಾರಿ, ಮಲ್ಲಪ್ಪ ಘಂಟೆ, ಸಾಬಣ್ಣ ಹಲಗಿ, ಚೆನ್ನಬಸವ ರಾಮದುರ್ಗ, ತಿಮ್ಮಪ್ಪ, ಹುಲಗಪ್ಪ, ಕರೆಪ್ಪ ಹಾಜರಿದ್ದರು.
