ಯಾದಗಿರಿ ಜಿಲ್ಲೆಯಲ್ಲಿರುವ ನಾರಾಯಣಪುರ ಜಲಾಶಯದಿಂದ ಮಂಗಾರು ಬೆಳೆಗೆ ವಾರಬಂದಿ ಮಾಡದೇ ನಿರಂತರ ನೀರು ಹರಿಸಬೇಕೆಂದು ಜೆಡಿಎಸ್ ಮುಖಂಡರು ಒತ್ತಾಯಿಸಿದ್ದಾರೆ.
ಯಾದಗಿರಿ ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ ಜೆಡಿಎಸ್ ಕಾರ್ಯಕರ್ತರು, “ಮುಂಗಾರು ಬೆಳೆಗೆ ಇಂದಿನಿಂದ ವಾರಬಂದಿ ಪದ್ಧತಿಯಲ್ಲಿ ಕಾಲುವೆಗಳಿಂದ ರೈತರ ಹೊಲ ಗದ್ದೆಗಳಿಗೆ ನೀರು ಹರಿಸಲಾಗುವುದು ಎಂಬ ಮಾಹಿತಿ ಬಂದಿದೆ. ಇದರಿಂದ ರೈತರು ಗಾಬರಿಯಾಗಿದ್ದಾರೆ. ಜಿಲ್ಲೆಯ ಹಲವು ಭಾಗಗಳಲ್ಲಿ ಭತ್ತದ ಸಸಿ ನಾಟಿ ಮಾಡುವ ಹಂತದಲ್ಲಿದ್ದು, ವಾರಬಂದಿ ಪದ್ದತಿಯಲ್ಲಿ ನೀರು ಕೊಟ್ಟರೆ, ನಾಟಿ ಕಾರ್ಯ ನಡೆಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ವಾರಬಂದಿ ಪದ್ದತಿಯನ್ನು ಕೈಬಿಟ್ಟು, ನಿರಂತರವಾಗಿ ನೀರು ಹರಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಈ ವೇಳೆ ದೇವಿಂದ್ರಪ್ಪ ಬಳಿಚಕ್ರ ದೊರೆ, ಹೊನ್ನಪ್ಪ ಪುಟ್ಟಿ ಗೌಡ ಹಿರಿಯ ರೈತ ಕಕ್ಕೇರಾ, ದೇವಿಂದ್ರಪ್ಪ ಕಾಮನಟ್ಟಗಿ ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.