ಬಿಜೆಪಿ, ಜೆಡಿಎಸ್, ಜನತಂತ್ರ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿರುವುದನ್ನು ಖಂಡಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯರವರ ಸರಕಾರವನ್ನು ಬೆಂಬಲಿಸಿ ಯಾದಗಿರಿಯಲ್ಲಿ ದಸಂಸ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಯಾದಗಿರಿ ನಗರದ ಹಳೆ ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸುವುದರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆ ವೇಳೆ ಜಿಲ್ಲಾಧ್ಯಕ್ಷ ಶಿವಪುತ್ರ ಜವಳಿ ಮಾತನಾಡಿ, “ರಾಜ್ಯದಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿರುವ ಬಿಜೆಪಿ-ಜೆಡಿಎಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ಅಸ್ಥಿರತೆಗೊಳಿಸಬೇಕೆಂದು ಬಯಸಿದೆ. ಅದಕ್ಕಾಗಿ ರಾಜ್ಯಪಾಲರ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ. ಕೇಂದ್ರದ ಬಿಜೆಪಿ ಸರ್ಕಾರವು ರಾಜ್ಯಪಾಲರನ್ನು ಕೈಗೊಂಬೆಯಾಗಿ ಕೆಲಸ ಮಾಡಿಸುತ್ತಿದೆ” ಎಂದು ಆರೋಪಿಸಿದರು.
“ಈ ಬೆಳವಣಿಗೆಯಿಂದ ಪ್ರಜಾಪ್ರಭುತ್ವದ ಮೂಲಭೂತ ತತ್ವಕ್ಕೆ ಅಪಾಯವಾಗುತ್ತದೆ. ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ಬರುತ್ತದೆ. ಹಾಗಾಗಿ, ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಬೇಕು” ಎಂದು ಹೇಳಿದರು.
“ರಾಜ್ಯಪಾಲರು ದೇಶದ ರಾಷ್ಟ್ರಪತಿಗಳ ನಿಧಿಯಾಗಿದ್ದು, ಸಂವಿಧಾನದ ಪ್ರತಿ ನಿಧಿಗಳಾಗಿ ಕೆಲಸ ಮಾಡಬೇಕು. ಅದನ್ನು ಬಿಟ್ಟು ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಪ್ರತಿನಿಧಿಗಳಾಗಿ ಕೆಲಸ ಮಾಡುತ್ತಿರುವುದು ಅಕ್ಷಮ್ಯ. ರಾಜ್ಯಪಾಲರ ಈ ನಡೆಯನ್ನು ತೀವ್ರವಾಗಿ ಖಂಡಿಸುತ್ತೇವೆ” ಎಂದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ; ಪ್ರಾಂಶುಪಾಲ ಶಿವಪುತ್ರಪ್ಪ ವಿರುದ್ಧ ಕ್ರಮಕ್ಕೆ ಆಗ್ರಹ
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಚಂದಪ್ಪ ಮುನಿಯಪ್ಪನೋರ, ಜಿಲ್ಲಾ ಖಜಾಂಚಿ ಭೀಮಣ್ಣ ಹುಣಸಗಿ, ಶೇಖರ ಮಂಗಳೂರು, ವೆಂಕಟೇಶ ದೇವಾಪುರ, ರಾಜು ಬಡಿಗೇರ, ಚನ್ನಪ್ಪ ದೇವಾಪುರ, ಖಾಜಾ ಅಜ್ಜರ್, ಎಂ ಪಟೇಲ್, ಮರೆಪ್ಪ ಕ್ರಾಂತಿ, ಸಂತೋಷ ಗುಂಡಳ್ಳಿ, ಶರಬಣ್ಣ ದೋರನಹಳ್ಳಿ, ನಾಗರಾಜ ಇದ್ದರು.
