ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಸುವ ಆಂತರಿಕ ಚುನಾವಣೆಯ ಭಾಗವಾಗಿ ಯಾದಗಿರಿ ಜಿಲ್ಲೆಗೆ 2024-27ರ ಅವಧಿಯ ನೂತನ ಜಿಲ್ಲಾಧ್ಯಕ್ಷರಾಗಿ ಸೈಯದ್ ಇಶಾಕ್ ಹುಸೇನ್(ಖಾಲಿದ್) ಆಯ್ಕೆಯಾಗಿದ್ದಾರೆ.
ಶಹಾಪುರದಲ್ಲಿ ಆಯೋಜಿಸಿದ್ದ ಜಿಲ್ಲಾ ಪ್ರತಿನಿಧಿ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಜಿಲ್ಲಾ ಉಪಾಧ್ಯಕ್ಷರಾಗಿ ಬಿಲಾಲ್ ಖುರೇಷಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಜಮೀರ್ ಶೇಖ್, ಕೋಶಾಧಿಕಾರಿಯಾಗಿ ರಶೀದ್ ಪೀರ್ ಜಿ, ಕಾರ್ಯದರ್ಶಿಗಳಾಗಿ ಇಮ್ರಾನ್ ಬಾಬಾ ಹಾಗೂ ಮುಜಾಹಿದ್ ಗೋಗಿ ಹಾಗೂ ಸಮಿತಿ ಸದಸ್ಯರುಗಳಾಗಿ ಇಕ್ಬಾಲ್ ಜಾನಿ, ಯೂನಸ್ ನಗನೂರಿ, ಫುರ್ಖಾನ್ ಖಾಜಿ, ಝಾಕಿರ್ ಸಂಗ್ರಾಮ್ ಮತ್ತು ಬಾಶುಮಿಯಾ ಕನ್ಯಾಕೂಳೂರು ಆಯ್ಕೆಯಾಗಿದ್ದಾರೆ.
ಜಿಲ್ಲಾ ಪ್ರತಿನಿಧಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ, “ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ಪಂದಿಸದೇ ಇರುವುದು ಖಂಡನೀಯ. ಕಲ್ಯಾಣ ಕರ್ನಾಟಕ ಭಾಗದ ಮೂಲ ಸೌಕರ್ಯ ಅಭಿವೃದ್ಧಿಗೆ ಸರ್ಕಾರ ಮೊದಲ ಆದ್ಯತೆ ನೀಡಬೇಕು” ಆಗ್ರಹಿಸಿದರು.
“ಕಲ್ಯಾಣ ಕರ್ನಾಟಕ ಭಾಗದ ಕೈಗಾರಿಕೆ, ವಾಣಿಜ್ಯ, ಕೃಷಿ ಸೇರಿ ಸಮಗ್ರ ಅಭಿವೃದ್ಧಿಗೆ ಪೂರಕವಾದ ಸಾರ್ವಜನಿಕರ ಪ್ರಯಾಣಕ್ಕೆ ಅನುಕೂಲ ಕಲ್ಪಿಸುವ ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳು ಕೈಗೆತ್ತಿಕೊಂಡಿರುವ ಹೋರಾಟಕ್ಕೆ ಎಸ್‌ಡಿಪಿಐ ಪಕ್ಷವು ಸಂಪೂರ್ಣ ಬೆಂಬಲ ನೀಡಲಿದೆ” ಎಂದು ಹೇಳಿದರು.
“2013-14ರಲ್ಲೇ ಡಾ. ಮಲ್ಲಿಕಾರ್ಜುನ ಖರ್ಗೆ ರೈಲ್ವೆ ಸಚಿವರಾಗಿದ್ದಾಗ ವಿಭಾಗೀಯ ಕಚೇರಿ ಘೋಷಿಸಿ ಐದು ಕೋಟಿ ವೆಚ್ಚದಲ್ಲಿ 43 ಎಕರೆ ಜಮೀನು ಸ್ವಾಧೀನಪಡಿಸಿ ವಿಶೇಷ ಅಧಿಕಾರಿಯನ್ನು ನೇಮಿಸಲಾಗಿತ್ತು. ನಂತರ ಬಂದ ಸರ್ಕಾರಗಳು ಈ ಯೋಜನೆಯನ್ನು ಕಡೆಗಣಿಸಿ ಅರ್ಧಕ್ಕೆ ಕೈಬಿಟ್ಟಿವೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ?: ಯಾದಗಿರಿ | ಸಮೃದ್ಧ ದೇಶ ನಿರ್ಮಾಣದಲ್ಲಿ ಮಕ್ಕಳ ಆರೋಗ್ಯದ ಪಾತ್ರ ಮುಖ್ಯ: ಬಸವರಾಜ ಶರಾಬಿ
“ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಗೆ ನಿರಂತರ ಅನ್ಯಾಯವಾಗುತ್ತಿದ್ದು, ಈ ಭಾಗದ ಜನ ಪ್ರತಿನಿಧಿಗಳು ಇದರ ಬಗ್ಗೆ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದ ಅವರು, ರೈಲ್ವೆ ವಿಭಾಗದಿಂದ ಕಲಬುರಗಿ ನಿಲ್ದಾಣದಲ್ಲಿ ಹೆಚ್ಚುವರಿ ರೈಲು ನಿಲುಗಡೆ, ಹೊಸ ಮತ್ತು ನೇರ ರೈಲು ಆರಂಭಿಸಿದರೆ.. ಐದು ಸಾವಿರಕ್ಕಿಂತ ಹೆಚ್ಚು ಉದ್ಯೋಗ ಸೃಷ್ಟಿ ಜತೆಗೆ ಟಿಕೆಟ್‌ಗಾಗಿ ಅಲೆದಾಟ ತಪ್ಪುತ್ತದೆ. ಬಡವರ ಸಂಚಾರ ಸಮಸ್ಯೆಗೆ ಮುಕ್ತಿ ಸಿಗಲಿದೆ. ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕವಾಗಿ ಆರ್ಥಿಕ ಬಲ ದೊರೆಯುತ್ತದೆ. ಕೃಷಿ ಚಟುವಟಿಕೆಗಳಿಗೆ ಶಕ್ತಿ ತುಂಬಲು ಪೂರಕವಾಗಿರಲಿದೆ. ಅಧ್ಯಯನಕ್ಕೆ ಬರುವ ಅನ್ಯ ರಾಜ್ಯದ ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ. ಸೊಲ್ಲಾಪುರಗಳಿಂದ ರೈಲುಗಳಿವೆ. ಸೊಲ್ಲಾಪುರ ವಿಭಾಗಕ್ಕೆ ಶೇ.50 ಆದಾಯ ಕಲಬುರಗಿ, ಯಾದಗಿರಿ ಜಿಲ್ಲೆಯಿಂದ ಬರುತ್ತದೆ. ರೈಲ್ವೆ ವಿಭಾಗ ಆಗಬಾರದು ಎಂಬ ಷಡ್ಯಂತ್ರ ಹೂಡಿ ಈ ಭಾಗವನ್ನು ವಿವಿಧೆಡೆ ಹಂಚಿಕೆ ಮಾಡಲಾಗಿದೆ” ಎಂದು ಕಿಡಿಕಾರಿದರು.