ನಮ್ಮ ಪ್ರಜಾಸತ್ತಾತ್ಮಕ ವ್ಯವಸ್ಥೆಯು ಇಡೀ ವಿಶ್ವದಲ್ಲಿಯೇ ತನ್ನದೆ ಆದ ಖ್ಯಾತಿ ಪಡೆದುಕೊಂಡಿದೆ. ವಿಶ್ವಕ್ಕೇ ಮಾದರಿಯಾಗಿರುವ ನಮ್ಮ ದೇಶದ ಏಕತೆ ಹಾಗೂ ಸೌಹಾರ್ದತೆಯನ್ನು ಕಾಪಾಡುವುದು ಈ ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಯಾದಗಿರಿಯ ಹಿರಿಯ ಸಾಹಿತಿ ಶಿವಣ್ಣ ಇಜೇರಿ ಅಭಿಪ್ರಾಯಪಟ್ಟರು.
ಶಹಾಪೂರ್ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸೌಹಾರ್ದ ಸಂಘಟನೆಗಳ ವತಿಯಿಂದ ಮಹಾತ್ಮ ಗಾಂಧಿಯವರು ಹುತಾತ್ಮ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ʼಸೌಹಾರ್ದ ಸಂಕಲ್ಪ ದಿನʼ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, “ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಹಬ್ಬಿರುವ ಅಸಹಿಷ್ಣುತೆ, ಕೋಮುವಾದ, ಜ್ಯಾತ್ಯಾಂಧತೆ, ಮತಾಂಧತೆ ಮೊದಲಾದವು ರಾಷ್ಟ್ರೀಯ ಏಕತೆಗೆ ಭಂಗ ತರುತ್ತಿವೆ. ಇವು ದೇಶದ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸುತ್ತಿವೆ. ಪರಸ್ಪರರಲ್ಲಿ ಭೇದ ಹುಟ್ಟಿಸುತ್ತಿರುವ, ಐಕ್ಯತೆಯ ಸುಖಮಯ ಜೀವನ ಹಾಳು ಮಾಡುತ್ತಲಿರುವ ಇಂತಹ ಘಟನೆಗಳಿಂದ ಸಮಾಜದಲ್ಲಿ ಅನಾರೋಗ್ಯಕರ ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ತಪ್ಪು ಗ್ರಹಿಕೆ, ಊಹೆ, ಸಾಮಾಜಿಕ, ಧಾರ್ಮಿಕ, ನೈತಿಕ ಮೌಲ್ಯಗಳ ಅಧಃಪತನ, ದುರ್ಬೋಧನೆ ಮತ್ತು ಮತಾಂಧ ಧಾರ್ಮಿಕ ಪ್ರಣಾಳಿಕೆಗಳು ಜನಸಾಮಾನ್ಯರನ್ನು ದಾರಿ ತಪ್ಪಿಸುತ್ತಿವೆ. ಇಂತವುಗಳಿಂದ ಸಾಮಾಜಿಕ ಉದ್ವಿಗ್ನತೆ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮ ಪಾರಂಪರಿಕ ಸಹನಾಶೀಲ ಗುಣವನ್ನು ಕಾಪಾಡಿಕೊಳ್ಳಲು ಪ್ರತಿಯೊಬ್ಬರೂ ಶ್ರಮಿಸಬೇಕು” ಎಂದು ಹೇಳಿದರು.
“ವಿವಿಧ ಜಾತಿ, ಧರ್ಮ, ಜನಾಂಗ, ವಿವಿಧ ನಂಬಿಕೆ, ಭಾಷೆ, ಸಂಪ್ರದಾಯ ಮುಂತಾದವುಗಳನ್ನು ಒಳಗೊಂಡು ಸಹಸ್ರಾರು ವರ್ಷಗಳಿಂದ ಭಾರತದ ಜನಸಮುದಾಯ ಐಕ್ಯತೆ ಹಾಗೂ ಅಖಂಡತೆಯ ಸೂತ್ರದಲ್ಲಿ ಜೀವಿಸುತ್ತ ಬಂದಿರುವುದನ್ನು ಮರೆಯಬಾರದು. ಧಾರ್ಮಿಕ ಸಹಿಷ್ಣುತೆ, ಕೋಮು ಸೌಹಾರ್ದತೆ, ಸಾಮಾಜಿಕ ಒಗ್ಗಟ್ಟು ನಮ್ಮ ಏಕತೆಯ ಮೂಲಧಾರವಾಗಿದೆ. ಗಾಂಧಿಜಿಯವರ ಮತ್ತು ಅಂಬೇಡ್ಕರ್ ಅವರ ತತ್ವ ವಿಚಾರಗಳು ಪ್ರತಿಯೊಬ್ಬರು ಅಳವಡಿಸಿಕೊಂಡು ರಾಷ್ಟ್ರದ ಐಕ್ಯತೆ ಹಾಗೂ ಸೌಹಾರ್ದತೆ ಕಾಪಾಡಲು ಪ್ರತಿಯೊಬ್ಬರೂ ಶ್ರಮಿಸೋಣ” ಎಂದು ಮನವಿ ಮಾಡಿದರು.
ಸಾಹಿತಿ ಡಾ. ಸಿದ್ದರಾಮ ಹೊನ್ಕಲ್ ಮಾತನಾಡಿ, “ಅಸಹಿಷ್ಣತೆ ಹೆಚ್ಚುತ್ತಿರುವ ವಿಷಮ ಪರಿಸ್ಥಿತಿಯಲ್ಲಿ ಸೌಹಾರ್ದತೆ ಮೆರೆಯುವ ಕಾರ್ಯಗಳು ಹೆಚ್ಚಾಗಬೇಕು. ಬಹುಸಂಖ್ಯಾತ ಜನ ಸಮುದಾಯದಲ್ಲಿರುವ ಸಹನಾಶೀಲ ಗುಣವನ್ನು ಉತ್ತೇಜಿಸಬೇಕು. ಬಹುಮುಖಿ ಸಮಾಜಕ್ಕೆ ಮಾನ್ಯತೆ ನೀಡಬೇಕು. ಸತ್ಯಶೋಧನೆ ಹಾಗೂ ನಿರ್ಭೀತ ಮನೋಭಾವ ಯಾವತ್ತೂ ಸಮಾಜದ ಆರೋಗ್ಯಕ್ಕೆ ಕಾರಣವಾಗುತ್ತದೆ. ಸಹನೆ, ಸಹಿಷ್ಣುತೆ ಹಾಗೂ ಸಹಬಾಳ್ವೆಯ ಮೂಲಕ ಭಾರತದ ಸಮಗ್ರತೆ ಹಾಗೂ ಸಾರ್ವಭೌಮತೆಯ ಸಂರಕ್ಷಣೆ ಸಾಧ್ಯ. ಇದರಿಂದ ಪರಂಪರಾಗತ ಮೌಲ್ಯಗಳನ್ನು ಅರಿತುಕೊಳ್ಳಲು ನೆರವಾಗುತ್ತದೆ” ಎಂದು ಆಶಯ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ?: ಯಾದಗಿರಿ| ಎಸ್‌ಡಿಪಿಐ ಜಿಲ್ಲಾಧ್ಯಕ್ಷರಾಗಿ ಇಶಾಕ್ ಹುಸೇನ್ ಆಯ್ಕೆ
ಕಾರ್ಯಕ್ರಮದಲ್ಲಿ ರೈತಪರ ಚಿಂತಕ ಮಲ್ಲಿಕಾರ್ಜುನ ಸತ್ಯಪೆಂಟ, ಅಡಿವಪ್ಪ ಜಾಕಾ ಸಾಹು, ಚನ್ನಪ್ಪ ಆನೆಗುಂದಿ, ದಾವಲಸಾಬ ನದಾಫ, ಪ್ರಗತಿಪರ ಚಿಂತಕ ನೀಲಕಂಠ ಬಡಿಗೇರ, ಕಸಾಪ ಅಧ್ಯಕ್ಷ ಡಾ. ರವೀಂದ್ರನಾಥ ಹೊಸ್ಮನಿ, ಎಸ್ ಎಮ್ ಜಮದಾರ, ಸಿದ್ದಯ್ಯ ಹಿರೇಮಠ, ಪ್ರದೀಪಕುಮಾರ, ಡಾ. ರಾಘವೇಂದ್ರ ಹಾರಣಗೇರಾ, ನಿಂಗಣ್ಣ ನಾಯ್ಕೊಡಿ, ರಾಜು ತಿಪ್ಪನಳ್ಳಿ, ಭೀಮರಾಯ ಪೂಜಾರಿ, ಸುಭಾಸ ಹೋತಪೇಟ ಹಾಗೂ ವಿವಿಧ ಸಂಘಟನೆಯ ಮುಖಂಡರು ಪಾಲ್ಗೊಂಡಿದ್ದರು.