ಯಾದಗಿರಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಗ್ರಾ.ಪಂ.ಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಕಾರರಿಂದ ಕೆಲಸ ಮಾಡಿಸದೇ ಅವ್ಯವಹಾರ ಎಸಗಿದ್ದು, ತನಿಖೆ ಆಗುವವರೆಗೂ ಉದ್ಯೋಗ ಖಾತ್ರಿ ಬಿಲ್ ಪಾವತಿಸದೆ ತಡೆಹಿಡಿಯುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿರುವ, ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಯಾದಗಿರಿಯ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದೆ.
ಯಾದಗಿರಿ ತಾಲೂಕಿನ ಬಂದಳ್ಳಿ, ಹೊನಗೇರಾ, ಅರಕೇರಾ (ಬಿ), ವರ್ಕನಳ್ಳಿ ವ್ಯಾಪ್ತಿಯ ಗ್ರಾ.ಪಂ.ಗಳಲ್ಲಿ 2023-24ನೇ ಸಾಲಿನ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಗಳು, ಊರಿನಲ್ಲಿ ಇರದೇ ಇರುವ ಕೂಲಿಕಾರರು ಬೆಂಗಳೂರಿನಲ್ಲಿ ದುಡಿಯುವ ಕೂಲಿಕಾರರ ಹೆಸರಿನ ಮೇಲೆ ಎನ್.ಎಂ.ಆರ್. ತೆಗೆದು, ಕಾಮಗಾರಿ ಮಾಡುತ್ತಿದ್ದಾರೆ ಹಾಗೂ ಕಾಮಗಾರಿಗಳನ್ನು ಜೆ.ಸಿ.ಬಿ. ಯಂತ್ರಗಳಿಂದ ಮಾಡಿಸಿ, ಕೂಲಿಕಾರರಿಗೆ ಕೆಲಸ ನೀಡಿರುವುದಿಲ್ಲ, ಮನರೇಗಾ ಮಾರ್ಗಸೂಚಿ ಪ್ರಕಾರ ಕಾಮಗಾರಿಗಳು ನಡೆಯುತ್ತಿಲ್ಲ. ಬೇಕಾಬಿಟ್ಟಿಯಾಗಿ ಮಾಡಿ, ಪಿಡಿಒ, ಅಧ್ಯಕ್ಷರು, ಜೆ.ಇ. ಕಂ ಆಪರೇಟರ್ ಗ್ರಾ.ಪಂ. ಸದಸ್ಯರು ಹಣ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಉದ್ಯೋಗ ಖಾತ್ರಿ ಯೋಜನೆಯಡಿ ಎನ್.ಎಂ.ಆರ್ ತೆಗೆಯಲು ಹಣ ಕೇಳುತ್ತಾರೆ ಮತ್ತು ಎನ್.ಎಂ.ಆರ್. ಹಾಕುವಾಗ ತನಗೆ ಬೇಕಾದ ಕೂಲಿಕಾರ ಹೆಸರನ್ನು ಸೇರಿಸಿರುತ್ತಾರೆ. ಫಾರಂ ನಂ.6 ತುಂಬಿದ ಕೂಲೀಕಾರರಿಗೆ ಕೆಲಸ ಕೊಡದೇ, ಗ್ರಾ.ಪಂ. ಸದಸ್ಯರಿಗೆ ಕೆಲಸ ನೀಡುತ್ತಾರೆ ಎನ್ನುತ್ತಿರುವ ಪ್ರತಿಭಟನಾಕಾರರು, ಆದ ಕಾರಣ ಮನರೇಗಾ ಯೋಜನೆಯಡಿ ಕಾಮಗಾರಿಗಳ ಸ್ಥಳ ಮತ್ತು ದಾಖಲೆಗಳು ಪರಿಶೀಲನೆ ಆಗುವವರೆಗೂ ಯಾವುದೇ ಎನ್.ಎಂ.ಆರ್ ಮಾಡಬಾರದು. ಕೂಲಿ ಮತ್ತು ಸಾಮಾಗ್ರಿ ಹಣ ತಡೆಹಿಡಿಯಲು ಮನವಿ ಸಲ್ಲಿಸಿದ್ದು, ಒಂದು ವೇಳೆ ಕ್ರಮ ಕೈಗೊಳ್ಳದೇ ಹೋದರೆ, ಕಛೇರಿ ಮುಂದೆ ಹೋರಾಟ ಮಾಡಲಾಗುವುದು ಎಂದು ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಅನೀಲ್ ಕುಮಾರ ದೊಡ್ಡಮನಿ, ಹಂಪಯ್ಯ.ಎನ್.ಶೇಂಗಿನೋರ, ಹಣಮಂತ ಚಿಕ್ಕಮೇಟಿ, ದೇವರಾಜ್, ಗೌತಮ್ ಕ್ರಾಂತಿ ಗಂಗಾರಮ್, ಬಂದಪ್ಪ ಇನ್ನಿತರರು ಉಪಸ್ಥಿತರಿದ್ದರು.