ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹಸನಾಪೂರದ ಕಾರ್ಯನಿರ್ವಾಹಕ ಅಭಿಯಂತರರ (ಹೊಲಗಾಲುವೆ ವಿಭಾಗ ಸಂಖ್ಯೆ -02) ಕಚೇರಿಯನ್ನು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ವರ್ತಿ ಗ್ರಾಮಕ್ಕೆ ಸ್ಥಳಾಂತರಿಸಲು ಸರ್ಕಾರ ಮುಂದಾಗಿದೆ. ಕಚೇರಿ ಸ್ಥಳಾಂತರದ ಆದೇಶವನ್ನು ರದ್ದುಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ -ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ನಂತರ, ಕೃಷ್ಣಾ ಕಾಡಾ ಭೀಮರಾಯನಗುಡಿ ಮತ್ತು ಕಾರ್ಯನಿರ್ವಾಹಕ ಅಭಿಯಂತರರು ಹೊಲಗಾಲುವೆ ವಿಭಾಗ ಸಂಖ್ಯೆ -02 ಕೃಭಾಜನಿನಿ ಹಸನಾಪೂರದ ಆಡಳಿತಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹಣಮಂತ್ರಾಯ ಚಂದ್ಲಾಪುರ, ಕೃಷ್ಣಾ ಕಾಡಾ ಪ್ರಾಧಿಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯನಿರ್ವಾಹಕ ಅಭಿಯಂತರರು ಹೊಲಗಾಲುವೆ ವಿಭಾಗ ಸಂಖ್ಯೆ -12 ಕೃಭಾಜನಿನಿ, ಹಸನಾಪೂರ ಕೇಂದ್ರಸ್ಥಾನದಿಂದ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ವರ್ತಿ ಗ್ರಾಮಕ್ಕೆ ಸ್ಥಳಾಂತರಿಸಲು ಈಗಾಗಲೇ ಆದೇಶ ಮಾಡಲಾಗಿದೆ.
ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ಸುಮಾರು 8ತಾಲೂಕುಗಳ ರೈತರಿಗೆ ಕೃಷ್ಣಾ ಕಾಡಾ ಪ್ರಾಧಿಕಾರ ಕೃಷ್ಣಾ ಭಾಗ್ಯ ಜಲ ನಿಗಮ ಹಸನಾಪೂರ ಕೇಂದ್ರ ಸ್ಥಾನದ ಆಡಳಿತ ಕಚೇರಿ ತುಂಬಾ ಅನುಕೂಲವಾಗಿದ್ದು, ಆಡಳಿತಾತ್ಮಕವಾಗಿ ರೈತರಿಗೆ ಸಹಕಾರಿಯಾಗಿದೆ. ಕಲ್ಯಾಣ ಕರ್ನಾಟಕ ಅತಿ ಹಿಂದುಳಿದ ಪ್ರದೇಶವಾಗಿದ್ದರಿಂದ. ಈ ಪ್ರದೇಶದ ಸರ್ವತೋಮುಖ ಅಭಿವೃದ್ಧಿ ಕಾರ್ಯಗಳನ್ನು ಕರ್ನಾಟಕ ಸರ್ಕಾರವು ಮೊದಲ ಆದ್ಯತೆ ಮೇಲೆ ಕೈಗೊಳ್ಳುತ್ತಿದ್ದು, ಈ ವಿಭಾಗ ಕಚೇರಿಯಿಂದ ಯಾದಗಿರಿ ಜಿಲ್ಲೆಯ ಸುರಪುರ, ಹುಣಸಗಿ, ಶಹಾಪೂರ, ವಡಗೇರಾ, ಗುರುಮಿಠಕಲ್ ತಾಲೂಕುಗಳು ಹಾಗೂ ರಾಯಚೂರು ಜಿಲ್ಲೆಯ ದೇವದುರ್ಗ, ಲಿಂಗಸೂಗೂರು, ಮಾನ್ವಿ ಒಟ್ಟು 8 ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಕಾರ್ಯಗಳನ್ನು ಈ ಕಾರ್ಯಾಲಯ ನಿರ್ವಹಿಸುತ್ತಿದೆ.
ಅಲ್ಲದೇ, ಅಚ್ಚು ಕಟ್ಟೆ ರಸ್ತೆ, ಎನ್.ಸಿ.ಪಿ ಮತ್ತು ಟಿ.ಎಸ್.ಪಿ ಯೋಜನೆಯಡಿಯಲ್ಲಿ ಬೊರವೆಲ್ ಕೊರೆಯುವ ಕಾರ್ಯಗಳನ್ನು ಹಾಗೂ ಚೆಕ್‌ಡ್ಯಾಂ, ಬಸಿಗಾಲುವೆ ಕಾರ್ಯಗಳನ್ನು ಕೈಗೊಳ್ಳುತ್ತಾ ಈ ಅತೀ ಹಿಂದುಳಿದ ಪ್ರದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ.
ಯಾದಗಿರಿ ಹಾಗೂ ರಾಯಚೂರು ಈ ಎರಡು ಜಿಲ್ಲೆಗಳ ನಡುವೆ ಕೇವಲ ಇದು ಒಂದೇ ವಿಭಾಗ ಕಚೇರಿ ಕಾರ್ಯನಿರ್ವಾಹಿಸುತ್ತಿದೆ. ಡಿ-93, ಎಸ್.ಆರ್.ಬಿ.ಸಿ ಹಾಗೂ ಎಮ್.ಆರ್.ಬಿ.ಸಿ ಎಕ್ಸಟೇನ್ಸ್ ನಲ್ಲಿ ಹೊಲ ಗಾಲುವೆ ಕಾಮಗಾರಿಗಳು ಕೈಗೊಳ್ಳುವುದು ಇನ್ನು ಸಾಕಷ್ಟು ಬಾಕಿಇದೆ. ರಾಂಪೂರ ಏತ್ ನೀರಾವರಿ ಅಡಿಯಲ್ಲಿ ಮುಖ್ಯ ನಿರ್ವಹಣಾ ಕಾಲುವೆ ಮತ್ತು ನೇರ ತುದಿಗಳು ಸರಿ ಇರುತ್ತರ್ರಿಗೊಂಡಿದ್ದು ಸುಮಾರು 60 ಸಾವಿರ ಹೆಕ್ಟರ್ ಇದೆ. ರಾಂಪೂರ ಏತ ನೀರಾವರಿ ಅಡಿಯಲ್ಲಿ ಮುಖ್ಯ ಅನೇಕ ಹೊಲಗಾಲುವೆಯ ಮುಖಾಂತರ ನೀರು ಪೂರೈಕೆಯಾಗುತ್ತದೆ. ಇದರಿಂದ ಈ ಭಾಗದ ರೈತರಿಗೆ ಅನುಕೂಲವಾಗಿದೆ.
ಇಂಡಿ ತಾಲೂಕಿನ ವರ್ತಿ ಗ್ರಾಮಕ್ಕೆ ಸ್ಥಳಾಂತರಿಸುವುದು ಈ ಭಾಗದ ರೈತರಿಗೆ ವಂಚನೆ ಮಾಡಿದಂತಾಗುತ್ತದೆ. ಅಲ್ಲದೆ, ಈ ಭಾಗದ ರೈತ ಹಿತಚಿಂತಕರಾದ ಸಾಮೂಹಿಕ ಸಂಘಟನೆಗಳ ವೇದಿಕೆ ಹಾಗೂ ರೈತ ಸಂಘ, ಸರ್ಕಾರದ ನಿಯಮ ಹಾಗೂ ಕಾನೂನು ಬಾಹಿರ ಆದೇಶವನ್ನು ತಕ್ಷಣವೇ ರದ್ದುಪಡಿಸ ಬೇಕು ಎಂದು ಒತ್ತಾಯಿಸಿದರು.
ಇಂದು ನಾವು ಸಾಂಕೇತಿಕವಾಗಿ ಧರಣಿ ಮಾಡುತ್ತಿದ್ದೇವೆ. ಕಾರಣ ಮಾನ್ಯ ಆಡಳಿತಾಧಿಕಾರಿಗಳು ಒಂದು ವೇಳೆ ತಮ್ಮ ಮೊಂಡುತನ ತೋರದೆ, ಕರ್ನಾಟಕ ಸರ್ಕಾರದೊಂದಿಗೆ ಈ ವಿಷಯದ ಕುರಿತು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹಾಗೂ ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸಬೇಕೆಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಾಹೇಬಗೌಡ ಮದಲಿಂಗನಾಳ, ಅಯ್ಯಣ್ಣ ಹಾಲಭಾವಿ, ವೆಂಕಟೇಶ ಬೇಟೆಗಾರ, ಶಿವಲಿಂಗ ಹಸನಾಪುರ, ಖಾಜಾ ಅಜ್ಮಿರ್, ಭೀಮಣ್ಣ ತಿಪ್ಪನಟಗಿ, ವೆಂಕಟೇಶಗೌಡ ಕುಪಗಲ್, ತಿಪ್ಪಣ್ಣ ಜಂಪಾ, ಇಮಾಮಸಾಬ ಪಾಟೀಲ್ ತಿಪ್ಪನಟಗಿ, ಭೀಮನಗೌಡ ಕರ್ನಾಳ, ಮಾನಪ್ಪ ಕೊಂಬಿನ್, ದೇವಪ್ಪ ತಿಪ್ಪನಟಗಿ, ಲೋಹಿತಕುಮಾರ ಮಂಗಿಹಾಳ, ನಾಗಪ್ಪ ಕುಪಗಲ್, ದೇವಿಂದ್ರಪ್ಪ ತಿಪ್ಪನಟಗಿ, ನಿಂಗನಗೌಡ, ದೇವಿಂದ್ರಪ್ಪಗೌಡ ಪೊಲೀಸ್ ಪಾಟೀಲ್ ಇನ್ನಿತರರು ಉಪಸ್ಥಿತರಿದ್ದರು.