ಗುರುಮಠಕಲ್ ತಾಲೂಕಿನ ಗಣಪೂರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ. ಶಾಲೆಯ ಕಟ್ಟಡ ಶಿಥಿಲಗೊಂಡಿದ್ದು, ಭೂತ ಬಂಗಲೆಯಂತಿದೆ. ಶಾಲೆಯ ಸಮಸ್ಯೆಗಳನ್ನು ಐದು ದಿನಗಳಲ್ಲಿ ಪರಿಹರಿಸದಿದ್ದರೆ, ವಿಜಯಪುರ-ಹೈದರಾಬಾದ್ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತೇವೆ ಎಮದು ಸಾಮಾಜಿಕ ಕಾರ್ಯಕರ್ತ ಉಮೇಶ್ ಕೆ ಮುದ್ನಾಳ ಎಚ್ಚರಿಕೆ ನೀಡಿದ್ದಾರೆ.
“ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ ಎಂಬ ಹಣೆ ಪಟ್ಟಿ ಹೊತ್ತಿರುವ ಯಾದಗಿರಿ ಜಿಲ್ಲೆಯಲ್ಲಿ ಗಣಪೂರ ಗ್ರಾಮದ ಶಾಲೆಯ ಪರಿಸ್ಥಿತಿ ನೋಡಿದರೆ ಆತಂಕ ಉಂಟು ಮಾಡುತ್ತದೆ. ಶಾಲೆಯ ಪರಿಸ್ಥಿತಿಯಿಂದಾಗಿ ಮಕ್ಕಳು ಶಾಲೆಗೆ ದಾಖಲಾಗುತ್ತಿಲ್ಲ” ಎಂದು ಅವರು ದೂರಿದ್ದಾರೆ.
“ಶಾಲೆಯ ಹಿಂದೆ ದೊಡ್ಡ ಗುಂಡಿಯಿದ್ದು, ಕೊಳಚೆ ನೀರು ತುಂಬಿಕೊಂಡು ಗಬ್ಬು ನಾರುತ್ತಿದೆ. ಹಂದಿಗಳ ಆವಾಸ ತಾಣವಾಗಿ ಮಾರ್ಪಟ್ಟಿದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಶಾಲೆಯ ನಾಲ್ಕು ಕೊಠಡಿಗಳು ಮಳೆಯಿಂದಾಗಿ ಸೋರುತ್ತಿವೆ. ಕೋಣೆಯ ಗೋಡೆ ಹಾಗೂ ಬೀಮ್‌ಗಳನ್ನು ಮುಟ್ಟಿದರೆ ಸಿಮೆಂಟ್ ಚಕ್ಕಿ ಉದುರಿ ಬೀಳುತ್ತಿದೆ. ಸುಮಾರು 200 ವಿದ್ಯಾರ್ಥಿಗಳ ಸಂಖ್ಯಾ ಬಲವಿರುವ ಶಾಲೆಯಲ್ಲಿ ಅತೀ ಕಡಿಮೆ ಹಾಜರಾತಿ ಇದೆ. ಶಾಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಜರಾಗಬೇಕೆಂದರೆ, ಶಾಲೆಯ ಸಮಸ್ಯೆಗಳನ್ನು ಪರಿಹರಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಈಗಾಗಲೇ ಹತ್ತು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಶಾಲೆಯಲ್ಲಿ ಕೃಷಿ ಕೂಲಿ ಕಾರ್ಮಿಕರು ಹಾಗೂ ಬಡ ರೈತರ ಮಕ್ಕಳೇ ಹೆಚ್ಚಾಗಿ ಓದುತಿದ್ದು, ಶಾಲೆಯ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಶಾಲೆ ಪರಿಶೀಲನೆ ವೇಳೆ ಆಂಜಿನೇಯ ಬೆಳಗೇರಿ, ತಾಯಪ್ಪ ಕಾಳಬೆಳಗುಂದಿ, ಗಣಪೂರ ಗ್ರಾಮದ ಮುಖಂಡ ನರಸಪ್ಪ, ಶಂಕರ, ಎಸ್.ಡಿ.ಎಂ.ಸಿ. ಅಧ್ಯಕ್ಷ ಬಸವರಾಜ, ಗ್ರಾಪಂ ಸದಸ್ಯರಾದ ನರಸಿಂಗಪ್ಪ, ಭೀಮರಾಯ, ತಾಯಪ್ಪ ಹೊಸಡಿ, ನಿಂಗಪ್ಪ, ಚೆನ್ನಪ್ಪ, ಭೀಮರಾಯ ಬಂಕಲಗಿ, ಕಾಂತು, ಆಂಜಿನೇಯ, ಮಾದೇವಪ್ಪ, ಮಾದೇವ, ತಾಯಪ್ಪ ನವಾಬುರಜ ಸೇರಿ ಅನೇಕರಿದ್ದರು.