ಶಾಲೆಯು ಮಕ್ಕಳ ಕಲಿಯುವ, ಬೆಳೆಯುವ ಮತ್ತು ಜವಾಬ್ದಾರಿಯುತ ವ್ಯಕ್ತಿಗಳಾಗಿ ಬೆಳೆಯುವ ಸ್ಥಳವಾಗಿದೆ. ಸಮಗ್ರ ಶಿಕ್ಷಣದ ಜೊತೆಗೆ ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ಶಾಲೆಗಳು ಪೂರವಾಗಿರಬೇಕು ಮತ್ತು ಅಂತಹ ವಾತಾವರಣವನ್ನು ಸೃಷ್ಠಿಸಬೇಕು. ಅದರೆ, ಯಾದಗಿರಿ ಜಿಲ್ಲೆಯ ಸಾವೂರು ಗ್ರಾಮದ ಸರ್ಕಾರಿ ಶಾಲೆ ಮೂಲ ಸೌಕರ್ಯಗಳಿಲ್ಲದೆ ಬಳಲುತ್ತಿದೆ.
ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರು, ಸ್ವಚ್ಛ ಶೌಚಾಲಯ, ಗ್ರಂಥಾಲಯ, ಆಟದ ಮೈದಾನ, ವೈದ್ಯಕೀಯ ಸೌಲಭ್ಯಗಳು, ಉತ್ತಮ ವಾತಾವರಣ ಹಾಗೂ ವಿಜ್ಞಾನ ಮತ್ತು ಕಂಪ್ಯೂಟರ್ ಪ್ರಯೋಗಾಲಯಗಳು ಇರಬೇಕು. ಆದರೆ, ಸಾವೂರು ಶಾಲೆಯಲ್ಲಿ ಈ ಯಾವ ಸೌಲಭ್ಯಗಳು ಇಲ್ಲ. ಹೀಗಾಗಿ, ಕಲಿಕೆಗೆ ಪೂರಕ ವಾತಾವರಣವೇ ಇಲ್ಲದೆ, ಮಕ್ಕಳು ಕಲಿಯುತ್ತಿದ್ದಾರೆ.
ಶಾಲೆಯ ಆವರಣದಲ್ಲಿ ಬೊರವೆಲ್ ಇದ್ದು, ಅದರಲ್ಲಿ ನೀರು ತುಂಬಾ ಗಡುಸಾಗಿ ಬರುತ್ತದೆ. ಆ ನೀರು ಕುಡಿಯಲು ಯೋಗ್ಯವಿಲ್ಲವೆಂದು ಹೇಳಲಾಗಿದೆ. ಆದರೂ, ಬೇರೆ ವ್ಯವಸ್ಥೆ ಇಲ್ಲದೆ, ಆ ನೀರನ್ನೇ ಮಕ್ಕಳು ಕುಡಿಯುತ್ತಿದ್ದಾರೆ. ಪರಿಣಾಮ, ಅನಾರೋಗ್ಯಕ್ಕೆ ತುತ್ತಾಗುವ ಆತಂಕವೂ ಇದೆ. ಕೆಲವು ಮಕ್ಕಳು ಮಧ್ಯಾಹ್ನದ ಬಿಸಿಯೂಟ ಸೇವಿಸಿದ ನಂತರ ಬೇರೆಡೇ ಹೋಗಿ ನೀರು ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಸುದ್ದಿ ಓದಿದ್ದೀರಾ?: ಮೂಲೆಗುಂಪಾಗಿರುವ ಬೊಮ್ಮಾಯಿ ತಮ್ಮ ಅಸ್ತಿತ್ವಕ್ಕಾಗಿ ಸರ್ಕಾರದ ಮೇಲೆ ಹುಸಿ ಆರೋಪ: ಸಿದ್ದರಾಮಯ್ಯ
ಇದಲ್ಲದೆ ಶಾಲೆಗೆ ಕಂಪೌಂಡ್, ಗೇಟ್ ಇಲ್ಲವಾಗಿದ್ದು, ರಾತ್ರಿ ವೇಳೆ ಶಾಲೆ ಕುಡುಕರ ಸಾಮ್ರಾಜ್ಯವಾಗುತ್ತಿದೆ. ಕುಡಿದ ಅಮಲಿನಲ್ಲಿ ಕಿಡಿಗೇಡಿಗಳು ಶಾಲೆ ಬಳಿ ಇಸ್ಪೀಟ್, ಜೂಜು ಆಡುತ್ತಾರೆ. ಬೀಡಿ, ಸಿಗರೇಟು, ಮದ್ಯದ ಬಾಟಲಿಗಳನ್ನು ಶಾಲೆಯ ಆವರಣದಲ್ಲಿ ಎಸೆದು ಹೋಗುತ್ತಾರೆ. ಶಾಲೆಯ ವಾತಾವರಣ ಹಾಳಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.
ಶಾಲೆಗೆ ಶೌಚಾಲಯ, ಕಾಂಪೌಂಡ್ ಗೊಡೆ, ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಬೇಕು ಎಂದು ಶಾಲಾ ಮಕ್ಕಳು ಆಗ್ರಹಿಸಿದ್ದಾರೆ.
ಗ್ರಾಮಸ್ಥರು ಶಾಲೆಯ ವಿಚಾರವಾಗಿ ಸಾಕಷ್ಟು ಬಾರಿ ಅರ್ಜಿ ಸಲ್ಲಿಸಿದ್ದರೂ ಯಾವೊಬ್ಬ ಅಧಿಕಾರಿ ಜನಪ್ರತಿನಿಧಿಗಳು ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಶಾಲೆಯಲ್ಲಿ ಮಕ್ಕಳ ದಾಖಲಾತಿ 260 ಇದ್ದು, ಮಕ್ಕಳಿಗೆ ಏನಾದರೂ ಹೆಚ್ಚುಕಮ್ಮಿ ಆದರೆ, ಅದಕ್ಕೆ ಅಧಿಕಾರಿಗಳೇ ಹೊಣೆಯಾಗಲಿದ್ದಾರೆ ಎಂದು ಸಮಾಜಿಕ ಕಾರ್ಯಕರ್ತ ಉಮೇಶ್ ಮುದ್ನಾಳ್ ಎಚ್ಚರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಕಾಫಿ ಕೊಯ್ಲಿಗೆ ಸಿಗುತ್ತಿಲ್ಲ ಕಾರ್ಮಿಕರು; ವೇತನದ ಜಾಹೀರಾತು ಹಿಡಿದು ನಿಂತ ಮಾಲೀಕ