ವಸತಿ ಶಾಲೆಯಲ್ಲಿ ಕಲುಷಿತ ನೀರು ಕುಡಿದು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಯಕ್ಷಾಪುರದಲ್ಲಿ ನಡೆದಿದೆ. ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗ್ರಾಮಲ್ಲಿರುವ ಕಸ್ತೂರಬಾ ವಸತಿ ಶಾಲೆಯಲ್ಲಿ ಕಲುಷಿತ ನೀರು ಕುಡಿದ ಪರಿಣಾಮ 29 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ ಎಂದು ತಿಳಿದುಬಂದಿದೆ. ವಿದ್ಯಾರ್ಥಿಗಳು ದಾಖಲಾಗಿರುವ ಆಸ್ಪತ್ರೆಗೆ ತಾಲೂಕು ವೈದ್ಯಾಧಿಕಾರಿ ಆರ್.ವಿ. ನಾಯಕ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದ್ದಾರೆ. ವಸತಿ ಶಾಲೆಗೂ ಭೇಟಿ ನೀಡಿ ಪರಿಶೀಲಿಸಿದ್ದಾರೆ.
“ವಸತಿ ಶಾಲೆಯಲ್ಲಿ ಶನಿವಾರ ಬೆಳಿಗ್ಗೆ ಚಹಾ ಬಿಸ್ಕತ್ತು ಸೇವಿಸಿದ ಕೆಲವು ವಿದ್ಯಾರ್ಥಿಗಳಿಗೆ ವಾಂತಿಯಾಗಿದೆ. ಇನ್ನೂ ಕೆಲವರಿಗೆ ಹೊಟ್ಟೆನೋವು ಕಾಣಿಕೊಂಡಿದೆ. ಅವರೆಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯವಾಗಿದ್ದಾರೆ. ನೀರು, ಚಹಾ, ಬಿಸ್ಕತ್ತನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ವರದಿ ಬಂದ ನಂತರ ಸಂಪೂರ್ಣ ಮಾಹಿತಿ ದೊರೆಯಲಿದೆ” ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.