ಯಾದಗಿರಿಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. 11 ವರ್ಷಗಳ ಹಿಂದೆ ಅನೈತಿಕ ಸಂಬಂಧದ ವಿಚಾರದಿಂದ ಉಂಟಾದ ದ್ವೇಷ ಇಬ್ಬರ ಕೊಲೆಯಲ್ಲಿ ಅಂತ್ಯವಾಗಿದೆ.
ಇತ್ತೀಚೆಗೆ ಜಿಲ್ಲೆಯ ಶಹಾಪುರ ತಾಲೂಕಿನ ಸಾದ್ಯಾಪುರ ಗ್ರಾಮದ ಬಳಿ ಎರಡು ಪ್ರತ್ಯೇಕ ಗುಂಪುಗಳಿಂದ ದಲಿತ ಮುಖಂಡ ಮಾಪಣ್ಣ (52) ಹಾಗೂ ಆತನ ಸಹಚರ ಅಲಿಸಾಬ (55)ರನ್ನು ಹತ್ಯೆ ಮಾಡಲಾಗಿತ್ತು. ಸದ್ಯ ಕೊಲೆ ಆರೋಪಿಗಳಾದ ಶಿವಪ್ಪಗೌಡ, ಹುಸೇನಿ, ಮೊಹಮ್ಮದ್ ರಿಯಾಜ್ರನ್ನು ಪೊಲೀಸರು ಬಂಧಿಸಿದ್ದಾರೆ. ಭೀಮರಾಯನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮಾ.16 ರಂದು ಸಾದ್ಯಾಪುರ ಕ್ರಾಸ್ ಬಳಿ ಕಟಿಂಗ್ ಮಾಡಿಸಿಕೊಂಡು ಹೋಗುತ್ತಿದ್ದಾಗ ಮಾಪಣ್ಣನನ್ನು ಸುಪಾರಿ ಪಡೆದಿದ್ದ ಗ್ಯಾಂಗ್ ಒಂದು ಬರ್ಬರವಾಗಿ ಕೊಲೆ ಮಾಡಿತ್ತು.
ಇನ್ನು ಬಂಧಿತ ಆರೋಪಿ ಶಿವಪ್ಪಗೌಡ 11 ವರ್ಷಗಳ ಹಿಂದೆ ಅನೈತಿಕ ಸಂಬಂಧದಲ್ಲಿ ದಲಿತ ಮುಖಂಡ ಮಾಪಣ್ಣನ ಕಣ್ಣಿಗೆ ಸಿಕ್ಕಿಬಿದ್ದಿದ್ದ. ಆಗ ನ್ಯಾಯ ಪಂಚಾಯ್ತಿ ಮಾಡಲಾಗಿತ್ತು. ಇದೇ ವಿಚಾರಕ್ಕೆ ಮಾಪಣ್ಣ ಮತ್ತು ಶಿವಪ್ಪಗೌಡ ನಡುವೆ ದ್ವೇಷ ಬೆಳೆದಿತ್ತು. ಹಾಗಾಗಿ 2014ರಲ್ಲಿ ಮಾಪಣ್ಣ ಕೊಲೆಗೆ ರೌಡಿಶೀಟರ್ ಹುಸೇನಿಗೆ ಶಿವಪ್ಪಗೌಡ ಸುಪಾರಿ ಕೊಟ್ಟಿದ್ದ.
2014ರಲ್ಲಿ ಭೀಮರಾಯನಗುಡಿ ಬಳಿ ಮಾಪಣ್ಣನ ರೌಡಿಶೀಟರ್ ಹುಸೇನಿ ಗ್ಯಾಂಗ್ ಗುಂಡಿನ ದಾಳಿ ಮಾಡಿತ್ತು. ಆಗ ಮಾಪಣ್ಣ ಸ್ವಲ್ಪದರಲ್ಲೇ ಬದುಕುಳಿದಿದ್ದ. ಬಳಿಕ 3 ಬಾರಿ ಮಾಪ್ಪಣ್ಣನ ಮೇಲೆ ಸುಪಾರಿ ಗ್ಯಾಂಗ್ ದಾಳಿ ಮಾಡಿತ್ತು. 2019ರಲ್ಲಿ ಮಾಪಣ್ಣ ಗ್ಯಾಂಗ್ ಹುಸೇನಿಯ ಮೇಲೆ ಹಲ್ಲೆ ಮಾಡಿತ್ತು. ಇದರಿಂದಾಗಿ ಮಾಪಣ್ಣ ಹಾಗೂ ಹುಸೇನಿ ನಡುವೆ ದ್ವೇಷ ಬೆಳೆದಿತ್ತು.
ಇದನ್ನೂ ಓದಿ: ಯಾದಗಿರಿ | ರಾಜ್ಯ ಸರ್ಕಾರದ ಅಸ್ಥಿರತೆ ಖಂಡನೀಯ: ದಸಂಸ ಪ್ರತಿಭಟನೆ
ಪ್ರತಿ ಭಾನುವಾರ ಮಾಪಣ್ಣ ಭೀಮರಾಯನಗುಡಿಗೆ ಬರುತ್ತಿದ್ದ. ಬೈಕ್ನಲ್ಲಿ ಬರುತ್ತಿದ್ದ ಮಾಪಣ್ಣನನ್ನು ಕಾರಿನಲ್ಲಿ ಬೆನ್ನಟ್ಟಿದ್ದ ಗ್ಯಾಂಗ್, ಸಾದ್ಯಾಪುರ ಕ್ರಾಸ್ ಬಳಿ ಬೈಕ್ಗೆ ಕಾರಿನಿಂದ ಡಿಕ್ಕಿ ಹೊಡೆದು ಬಳಿಕ ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.