ಬಾಗಪ್ಪನ ಸಾವು ಸಹಜ ಸಾವಲ್ಲ, ಆತನ್ನು ಕೊಲೆ ಮಾಡಿದ್ದಾರೆ ಎನ್ನುವ ಸಂಶಯ ವ್ಯಕ್ಯವಾಗಿದ್ದು, ಕೂಡಲೇ ಈ ಪ್ರಕರಣದಲ್ಲಿನ ಎಲ್ಲ ಆರೋಪಿಗಳನ್ನು ಪೊಲೀಸರು ಬಂಧಿಸಲು ಮುಂದಾಗಬೇಕು ಎಂದು ದಸಂಸ ಶಿವಲಿಂಗ ಎಂ ಹಾಸನಪುರ ಒತ್ತಾಯಿಸಿದರು.
ಯಾದಗಿರಿ ಜಿಲ್ಲೆಯ ಸುರಪುರ ನಗರದ ಪೊಲೀಸ್ ಠಾಣೆಯಲ್ಲಿನ ಡಿವೈಎಸ್‌ಪಿ ಕಚೇರಿ ಮುಂದೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.
“ತಿಪ್ಪನಹಳ್ಳಿ ಗ್ರಾಮದಲ್ಲಿ ಏಪ್ರಿಲ್ 16ರ ರಾತ್ರಿ ನಡೆದ ಬಾಗಪ್ಪ ಲಕ್ಷ್ಮೀಪುರ ಎಂಬಾತನ ಸಾವು ಸಹಜ ಸಾವಲ್ಲ, ಆತನನ್ನು ಕೊಲೆ ಮಾಡಲಾಗಿದೆ” ಎಂದು ಆರೋಪಿಸಿದರು.
ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ ಮಾತನಾಡಿ, “ಭಾಗಪ್ಪನ ಸಾವು ಕೊಲೆಯಾಗಿದೆಯೆಂದು ಕುಟುಂಬಸ್ಥರೇ ಆರೋಪಿಸುತ್ತಿದ್ದಾರೆ. ಅಲ್ಲದೆ ಕೊಲೆ ನಡೆದು ಮೂರು ತಿಂಗಳಾಗುತ್ತಿದ್ದರೂ ಸರಿಯಾದ ತನಿಖೆ ನಡೆಯುತ್ತಿಲ್ಲ. ಕೂಡಲೇ ಪ್ರಕರಣದಲ್ಲಿನ ಆರೋಪಿಗಳನ್ನು ಬಂಧಿಸಬೇಕು ಮತ್ತು ಎಫ್‌ಐಆರ್‌ನಲ್ಲಿ ಕಲಂ 302ನ್ನು ಸೇರಿಸಬೇಕು” ಎಂದು ಆಗ್ರಹಿಸಿದರು.
ಮುಖಂಡ ಆನಂದ ಲಕ್ಷ್ಮೀಪುರ ಮಾತನಾಡಿ, “ಭಾಗಪ್ಪ ನಮ್ಮೂರಿನ ಯುವಕ, ತಿಪ್ಪನಹಳ್ಳಿಯಲ್ಲಿ ಅವರ ಕುಟುಂಬ ವಾಸಿಸುತ್ತಿದೆ. ಅವರ ಸಂಬಂಧಿಕರ ಕೊಲೆ ಮಾಡಿದ್ದಾರೆ ಎಂದು ಸ್ವತಃ ಕುಟುಂಬಸ್ಥರೆ ಆರೋಪ ಮಾಡುತ್ತಿದ್ದು ಪೊಲೀಸರು ತನಿಖೆ ಮಾಡಲು ಮೀನಾಮೇಷ ಎಣಿಸುತ್ತಿದ್ದು ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಡಿವೈಎಸ್ಪಿ ಜಾವಿದ್ ಇನಾಂದಾರ್ ಮಾತನಾಡಿ, “ತಾವು ಅನುಮಾನಿಸುವಂತೆ ಈಗಾಗಲೇ ಕೆಲವರನ್ನು ಠಾಣೆಗೆ ಕರೆಯಿಸಿ ವಿಚಾರಿಸಲಾಗಿದೆ. ಆದರೆ ಸರಿಯಾದ ಸಾಕ್ಷಿಗಳು ದೊರೆಯುತ್ತಿಲ್ಲ. ಆದ್ದರಿಂದ ಈಗ ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ಬರಬೇಕಿದ್ದು, ಇನ್ನು ಮೂರು ದಿನಗಳಲ್ಲಿ ಅಂತಿಮ ವರದಿ ಬಂದ ಬಳಿಕ ಸಾವಿನ ನಿಖರತೆ ಗೊತ್ತಾಗಲಿದ್ದು, ಕೊಲೆಯೆಂದು ವರದಿ ಬಂದಲ್ಲಿ ಆರೋಪಿಗಳನ್ನು ಬಂಧಿಸಲಾಗುವುದು ಮತ್ತು ಸೆಕ್ಷನ್ 302ನ್ನು ಸೇರಿಸಲಾಗುವುದು” ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಹಸಿರು ಕ್ರಾಂತಿಗೆ ಮುಂದಾದ ವೀಕಲಚೇತನ ತಂಡ; ಸಾವಿರ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ
ಶಿವಲಿಂಗ ಎಮ್ ಹಾಸನಪುರ, ಆನಂದ ಬಿ. ಬಡಿಗೇರ್, ಚಂದಪ್ಪ ಮುನಿಯಪ್ಪನವರ, ತಿಪಣ್ಣ ಬಿ ಶೆಳ್ಳಗಿ, ಭೀಮಣ್ಣ ನಾಟೇಕರ್, ಮರೆಪ್ಪ ಕ್ರಾಂತಿ, ಎಂ ಪಟೇಲ್, ವೆಂಕಟೇಶ್ ದೇವಪುರ, ಬಾಲರಾಜ ಖಾನಾಪುರ, ಚಂದ್ರಶೇಖರ ಹಳ್ಳೂರ ಸೇರಿದಂತೆ ಇತರರು ಇದ್ದರು.