ಯಾದಗಿರಿ ನಗರದ ಕೋಲಿವಾಡ ಏರಿಯಾದ ಬಾವಿಯೊಂದರಲ್ಲಿ ಕಾಲು ಜಾರಿ ಬಿದ್ದಿದ್ದ 10 ವರ್ಷದ ಬಾಲಕನ ಮೃತ ದೇಹ ಪತ್ತೆಯಾಗಿದೆ.
ಮೃತ ಬಾಲಕನನ್ನು ರಾಜಶೇಖರ್ ಮೌನೇಶ್ (10)ಎಂದು ಗುರುತಿಸಲಾಗಿದೆ. ಶನಿವಾರ ಮಧ್ಯಾಹ್ನ 3 ಗಂಟೆಯ ವೇಳೆಗೆ ಬಾಲಕ ಕಾಣೆಯಾಗಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು, ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರು.
ಅಗ್ನಿಶಾಮಕ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ ರಾತ್ರಿ 9 ಗಂಟೆಯವರೆಗೆ ಶೋಧ ಕಾರ್ಯ ನಡೆಸಿದರೂ ಮೃತದೇಹ ಸಿಕ್ಕಿರಲಿಲ್ಲ. ಮತ್ತೆ ಭಾನುವಾರ ಬೆಳಿಗ್ಗೆ 7 ಗಂಟೆಗೆ ಶೋಧ ಕಾರ್ಯ ಪುನರಾರಂಭಿಸಿ, 9 ಗಂಟೆಯ ವೇಳೆಗೆ ಶವವನ್ನು ಹೊರತೆಗೆಯುವಲ್ಲಿ ಅಗ್ನಿ ಶಾಮಕದಳ ಅಧಿಕಾರಿ ವೀರೇಶ ಮತ್ತು ಸಿಬ್ಬಂದಿ ಯಶಸ್ವಿಯಾದರು.
ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.